ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಅವಿಸ್ಮರಣೀಯ ಸಮ್ಮೇಳನವೊಂದಕ್ಕೆ ಸಾಕ್ಷಿಯಾಗುತ್ತಿದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ ಹುಟ್ಟು ಪಡೆದ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪತ್ರಕರ್ತರ ಸಮ್ಮೇಳವೊಂದು ಅರ್ಥವತ್ತಾಗಿ ಆಯೋಜನೆಗೊಂಡಿದೆ. ಪ್ರತಿವರ್ಷ ಜುಲೈ.1 ರಂದು ಪತ್ರಿಕಾ ದಿನಾಚರಣೆಯ ಮೂಲಕ ವಿವಿಧ ಕಾರ್ಯಕ್ರಮಗಳು ನಡೆದರೆ, ಈ ಬಾರಿ ಪತ್ರಿಕಾ ದಿನಾಚರಣೆಯೊಂದಿಗೆ ಬೃಹತ್ ಸಮ್ಮೇಳನವೂ ಮಂಗಳೂರಿನಲ್ಲಿ ನಡೆಯುತ್ತಿದೆ. ಸಮ್ಮೇಳನದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ತಿಳಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸಮ್ಮೇಳನದ ವಿವರ ನೀಡಿದರು. ಮಂಗಳೂರು ಪ್ರೆಸ್ ಕ್ಲಬ್ ಮತ್ತು ಮಂಗಳೂರು ಪತ್ರಿಕಾಭವನ ಟ್ರಸ್ಟ್‌ನ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ2019 ರ ಜುಲೈ1ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದ.ಕ.ಜಿಲ್ಲಾ ಪತ್ರಕರ್ತರ ಸಮ್ಮೇಳನ ನಡೆಯಲಿದೆ.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಸಮ್ಮೇಳಾಧ್ಯಕ್ಷರಾಗಿದ್ದು, ಪೂರ್ವಾಹ್ನ 9 ರಿಂದ ಸಂಜೆ 5 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ.ಅಂದು ಪೂರ್ವಾಹ್ನ 9.30 ಕ್ಕೆ ಕುದ್ಮುಲ್ ರಂಗರಾವ್ ಪುರಭವನದ ದಿ.ವಡ್ಡರ್ಸೆ ರಘುರಾಮ ಶೆಟ್ಟಿ ವೇದಿಕೆಯಲ್ಲಿ ನಡೆಯುವ ಸಮ್ಮೇಳನವನ್ನು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯಉದ್ಘಾಟಿಸಲಿದ್ದಾರೆ. ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭ ದ.ಕ.ಜಿಲ್ಲಾ ಪತ್ರಕರ್ತರ ಸಂಘ ಹೊರತರುತ್ತಿರುವ ಸ್ಮರಣ ಸಂಚಿಕೆ `ಸಮಾಚಾರ’ ಲೋಕಾರ್ಪಣೆಯಾಗಲಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್ ಈ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಆಶಯ ನುಡಿಯನ್ನಾಡಲಿದ್ದಾರೆ.
ಸಮ್ಮೇಳನದ ಅಂಗವಾಗಿ ಪತ್ರಕರ್ತರು ಬರೆದ ಪುಸ್ತಕಗಳ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಪುಸ್ತಕ ಪ್ರದರ್ಶನದ ಉದ್ಘಾಟನೆ ನೆರವೇರಿಸುವರು. ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ನೆರವೇರಿಸಲಿದ್ದಾರೆ. ಚಿತ್ರಕಲಾ ಪ್ರದರ್ಶನವನ್ನು ಕೂಡ ಆಯೋಜಿಸಲಾಗಿದ್ದು,ದ.ಕ.ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಆರ್ ಪ್ರದರ್ಶನಕ್ಕೆ ಚಾಲನೆ ನೀಡುವರು.
ಪರಿಸರ ಜಾಗೃತಿ ಪರಿಣಾಮಕಾರಿಯಾಗಿ ಆಗುವಲ್ಲಿ `ಹಸಿರು ಉಸಿರು’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದೊಂದಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪತ್ರಕರ್ತರಿಗೆ ಗಿಡಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಭೃಂಗೇಶ್, ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕೆ.ಆನಂದ ಶೆಟ್ಟಿ ಇವರುಗಳು ಉಪಸ್ಥಿತರಿರುವರು.
ವಿವಿಧ ಗೋಷ್ಠಿಗಳು
ಪೂರ್ವಾಹ್ನ 11.15 ರಿಂದ 12 ಗಂಟೆಯವರೆಗೆ ಮಾಧ್ಯಮ ಹಾಗೂ ಸಾಮಾಜಿಕ ಜವಾಬ್ದಾರಿ ಕುರಿತಂತೆ ಹಿರಿಯ ಪತ್ರಕರ್ತರು ತಮ್ಮ ವಿಚಾರ ಮಂಡಿಸಲಿದ್ದಾರೆ. ದೃಶ್ಯ ಮಾಧ್ಯಮ ವಿಷಯದ ಕುರಿತಂತೆ ಮದ್ರಾಸ್ ವಿಶ್ವವಿದ್ಯಾನಿಲಯದ ಮಾಧ್ಯಮ ಅಧ್ಯಯನ ವಿಭಾಗದ ಮಾಜಿ ಮುಖ್ಯಸ್ಥ ಪ್ರೊ.ಜೋಸೆಫಿನ್ ಜೋಸೆಫ್ ಮಾತನಾಡಲಿದ್ದಾರೆ. ಆಕಾಶವಾಣಿ ವಿಷಯವಾಗಿ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ, ಪತ್ರಿಕಾ ಮಾಧ್ಯಮ ವಿಷಯದ ಕುರಿತಾಗಿ ಹಿರಿಯ ಪತ್ರಕರ್ತ ಅಳದಂಗಡಿ ಕೃಷ್ಣಭಟ್ ಮತ್ತು ನವ ಮಾಧ್ಯಮ ವಿಷಯವಾಗಿ ಹಿರಿಯ ಪತ್ರಕರ್ತರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಕೋಡಿಬೆಟ್ಟು ರಾಜಲಕ್ಷ್ಮೀ ವಿಷಯ ಮಂಡಿಸಲಿದ್ದಾರೆ.
ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ತುಳು ಸಿನಿಮಾ ಹಾಗೂ ಮಾಧ್ಯಮ ವಿಷಯದ ಕುರಿತಂತೆ ಗೋಷ್ಠಿ ನಡೆಯಲಿದೆ. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಸಿನಿಮಾ ನಿರ್ದೇಶಕರಾದ ಡಾ.ರಿಚರ್ಡ್ ಕ್ಯಾಸ್ಟಲಿನೋ, ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್‌ಬೈಲ್, ಸಿನಿಮಾ ನಿರ್ಮಾಪಕರಾದ ಕಿಶೋರ್ ಡಿ. ಶೆಟ್ಟಿ, ಪ್ರಕಾಶ್ ಪಾಂಡೇಶ್ವರ, ಸಿನಿಮಾ ನಟ ನವೀನ್ ಡಿ. ಪಡೀಲ್ ವಿಷಯ ಮಂಡಿಸಲಿದ್ದಾರೆ.
ಅಪರಾಹ್ನ 2 ರಿಂದ 3 ರವರೆಗೆ ಸಂವಾದ ಕಾರ್ಯಕ್ರಮ ಬ್ರ್ಯಾಂಡ್ ಮಂಗಳೂರು ಕುರಿತಂತೆ ಅಪರಾಹ್ನ 2 ರಿಂದ 3 ರವರೆಗೆ ವಿವಿಧ ಪತ್ರಿಕೆ, ಟಿವಿ ವಾಹಿನಿಗಳ ಸಂಪಾದಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಸಂಜೆ ಸಮಾರೋಪ ಸಮಾರಂಭ :
ಸಂಜೆ 4 ರಿಂದ 5 ಗಂಟೆಯವರೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿಶ್ರಾಂತ ಕುಲಪತಿ, ಸಾಹಿತಿ ಪ್ರೊ.ಬಿ.ಎ.ವಿವೇಕ ರೈ ಸಮಾರೋಪ ಭಾಷಣ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರು ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ 2019 ರ ಚೊಚ್ಚಲ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮುಹಮ್ಮದ್ ಆರೀಫ್ ಪಡುಬಿದ್ರೆ ಅವರು ಆಯ್ಕೆಯಾಗಿದ್ದು, ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂತ್ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ರೂ.5001 ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಇದೇ ಸಂದರ್ಭ ಬ್ರ್ಯಾಂಡ್ ಮಂಗಳೂರು ಕುರಿತಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ(ಕಂದಾಯ) ಐವನ್ ಡಿಸೋಜ, ದ.ಕ.ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ದ.ಕ.ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮ ಆರಂಭವಾಗುವ ಮುನ್ನ ಅಂದರೆ ಪೂರ್ವಾಹ್ನ 9 ರಿಂದ 9.30 ರವರೆಗೆ ಪತ್ರಕರ್ತ ದಯಾನಂದ ಕುಡುಪು ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ 2 ರವರೆಗೆ ಮಂಗಳೂರಿನ ಮುರಳೀಧರ ಕಾಮತ್ ಹಾಗೂ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಅಪರಾಹ್ನ 3 ರಿಂದ 4 ಗಂಟೆಯವರೆಗೆ ಬಜಪೆ ಥಂಡರ್ ಗೈಸ್ ತಂಡದಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಎಲ್ಲಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀನಿವಾಸ ನಾಯಕ್ ಇಂದಾಜೆ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗು ಸಮ್ಮೇಳನ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಬಿ.ಎನ್.ಪುಷ್ಪರಾಜ್, ಮಾಜಿ ಅಧ್ಯಕ್ಷರಾದ ಪಿ.ಬಿ.ಹರೀಶ್ ರೈ, ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.