ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸರ್ಪಸಂಸ್ಕಾರ ಸೇವೆಯ ಸಲುವಾಗಿ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಸ್ವಾಮಿ ಮಠದ ನಡುವೆ ಗೊಂದಲ ನಡೆಯುತ್ತಿದ್ದು ಇದನ್ನು ಸರಿಪಡಿಸಲು ಪೇಜಾವರ ಶ್ರೀಗಳು ಜೂ.7 ರಂದು ಸಂಜೆ ಆಗಮಿಸಲಿದ್ದಾರೆ. ಪೇಜಾವರ ಶ್ರೀಗಳು ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಜೊತೆ ಮಾತುಕತೆ ನಡೆಸಲಿದ್ದಾರೆ.
ಇದೇ ಸಂದರ್ಭ ಬೆಳಗ್ಗೆ ಸುಬ್ರಹ್ಮಣ್ಯದ ಉತ್ತರಾಧಿಮಠದಲ್ಲಿ ಪೇಜಾವರ ಶ್ರೀ ಗಳು ಆಗಮಿಸುವ ಬಗ್ಗೆ ಪೂವ೯ಭಾವಿ ಸಭೆ ನಡೆಯಲಿದೆ.ಕ್ಷೇತ್ರದ ಶಾಂತಿ , ಸುವ್ಯವಸ್ಥೆ ಪಾವಿತ್ರ್ಯತೆಯನ್ನು ಕಾಪಾಡಲು ಭಕ್ತರು ಆಗಮಿಸಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಗೊಂದಲಗಳ ಪರಿಹಾರದ ಬಗ್ಗೆ ಸೂಕ್ತ ಸಲಹೆ ನೀಡುವಂತೆ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ತಿಳಿಸಿದ್ದಾರೆ.
ಇದೇ ಸಂಬಂಧವಾಗಿ ಜೂ.6 ರ ಗುರುವಾರ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ಹಾಗೂ ಭಕ್ತ ಗುರುಪ್ರಸಾದ್ ಪಂಜ ಉಡುಪಿಗೆ ಭೇಟಿ ನೀಡಿ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳ ಜೊತೆ ಮಾತುಕತೆ ನಡೆಸಿದರು. ದೇವಸ್ಥಾನದ ಇತಿಹಾಸ ಹಾಗೂ ನಡೆಯುವ ಸೇವೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಇದೇ ಸಂದರ್ಭ ವಿಶ್ವ ಹಿಂದೂ ಪರಿಷದ್ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್ ಅವರು ಮಠದ ಪರವಾಗಿ ವಿವರ ನೀಡಿದರು. ಇದೇ ಸಂದರ್ಭ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಗಣಪತಿ ಗುಡಿಯ ಬಗ್ಗೆಯೂ, ಮರುನಿರ್ಮಾಣವಾಗುವ ಬಗ್ಗೆಯೂ ಪೇಜಾವರ ಶ್ರೀಗಳ ಗಮನಕ್ಕೆ ತರಲಾಯಿತು ಎಂದು ಮೂಲಗಳು ತಿಳಿಸಿವೆ.