ಸುಳ್ಯ: ಕದ್ದು ಮುಚ್ಚಿ ತಂದು ಆ ಕಡೆ… ಈ ಕಡೆ ನೋಡಿ ಕಸವನ್ನು ರಸ್ತೆ ಬದಿಗೆ ಎಸೆದರೆ ಜೋಕೆ….! ಕಾರು, ಬೈಕ್ ಸ್ಲೋ ಮಾಡಿ ತ್ಯಾಜ್ಯದ ಕಟ್ಟವನ್ನು ಎಸೆದು ನಾವು ಈ ಊರಿನವರೇ ಅಲ್ಲ…..! ನಮಗೇನು ಗೊತ್ತಿಲಪ್ಪಾ…. ಎಂಬ ಭಾವದಿಂದ ಹೋಗುವವರೇ ಇನ್ನು ಎಚ್ಚರ…..! ನಿಮ್ಮನ್ನು ಕ್ಯಾಮರಾ ಕಣ್ಣುಗಳು ನೋಡುತ್ತಿವೆ….. ! ಇನ್ನು ಕಸ ಎಸೆದರೆ ನಿಮ್ಮ ಮುಖ, ನಿಮ್ಮ ವಾಹನದ ನಂಬರ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವುದು ಗ್ಯಾರಂಟಿ. ಅದರ ಜೊತೆಗೆ ದಂಡವೂ ಖಚಿತ.
ಹೌದು ಕುರುಂಜಿಗುಡ್ಡೆಯಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ತ್ಯಾಜ್ಯದ ಮೂಟೆಯನ್ನು ಹೊತ್ತು ಕುರುಂಜಿಗುಡ್ಡೆ ಕಡೆಗೆ ಬಂದರೆ ಇನ್ನು ಕ್ಯಾಮರಾ ಕಣ್ಣಲ್ಲಿ ಸಿಲುಕಿಕೊಳ್ಳಲಿದ್ದಾರೆ.
ಹೇಳಿ ಕೇಳಿ ಕುರುಂಜಿಗುಡ್ಡೆ ಒಂದು ನಿಬಿಡ ಜನವಸತಿ ಪ್ರದೇಶ. ಸುತ್ತಲೂ ಮನೆಗಳು, ವಸತಿಗೃಹಗಳು ಸರಕಾರಿ ಕಚೇರಿಗಳು ಇರುವ ಸುಳ್ಯ ನಗರದ ಪ್ರಮುಖ ಮತ್ತು ಸುಂದರ ಸ್ಥಳ. ಆದರೆ ಇಲ್ಲಿಯ ರಸ್ತೆ ಬದಿ ಮಾತ್ರ ಯಾವಾಗಲು ಕಸದ ರಾಶಿ ತುಂಬಿರುತ್ತದೆ. ರಾಶಿ ರಾಶಿ ತ್ಯಾಜ್ಯವನ್ನು ತಂದು ಸುರಿಯಲಾಗುತ್ತದೆ.
ಇದು ಪ್ರದೇಶವಿಡೀ ಹರಡಿ, ದುರ್ವಾಸನೆ ಬೀರಿ, ರಸ್ತೆ ಪೂರ್ತಿ ಕೊಳಕಾಗಿ ಪ್ರದೇಶದ ಅಂಧವನ್ನೂ ಪರಿಸರದಲ್ಲಿ ವಾಸಿಸುವವರ ಸ್ವಾಸ್ಥ್ಯವನ್ನೂ ಕೆಡಿಸುತ್ತಿತ್ತು. ಎರಡು ದಿನದ ಹಿಂದೆ ಸ್ಥಳೀಯ ನಗರ ಪಂಚಾಯತ್ ಸದಸ್ಯ ವಿನಯ ಕುಮಾರ್ ಕಂದಡ್ಕ ಮುತುವರ್ಜಿ ವಹಿಸಿ ಸಂಪೂರ್ಣ ಸ್ವಚ್ಛ ಮಾಡಿದ್ದರು. ಆದರೆ ಎರಡೇ ಎರಡು ದಿನ ಮತ್ತೆ ಅಲ್ಲಿ ಕಸದ ರಾಶಿ ತುಂಬಿ ತುಳುಕಿತು. ಈ ಚಿತ್ರವನ್ನು ವಿನಯಕುಮಾರ್ ಸಾಮಾಜಿಕ ಜಾಲತಾಣದಲ್ಲಿಯೂ ಹರಿಯ ಬಿಟ್ಟಿದ್ದರು. ಆದರೆ ಇದ್ಯಾವುದನ್ನೂ ಕ್ಯಾರೇ ಎನ್ನದೆ ಕಸದ ರಾಶಿ ಬಂದು ಬೀಳುತ್ತಲೇ ಇತ್ತು. ಇದೀಗ ಬೇರೆ ದಾರಿಯಿಲ್ಲದೆ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವಿನಯಕುಮಾರ್ ಕಂದಡ್ಕ ನೇತೃತ್ವದಲ್ಲಿ ನಗರ ಪಂಚಾಯತ್ ಮತ್ತು ದಾನಿಗಳ ಸಹಕಾರದಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಸುತ್ತಲೂ ಕ್ಯಾಮರಾ ಕಣ್ಣು:
ಕಸ ಹಾಕುವ ಪ್ರದೇಶದಲ್ಲಿ ಕ್ಯಾಮರಾ ಕಣ್ಣು ಜಾಗೃತವಾಗಿದೆ. ಸುತ್ತಲೂ ಮೂರು ಕ್ಯಾಮರಾಗಳನ್ನು ಸಮೀಪದ ಮರ ಮತ್ತಿತರ ಕಡೆಗಳಲ್ಲಿ ಸ್ಥಾಪಿಸಲಾಗಿದೆ. ಇದರ ಕಂಟ್ರೋಲ್ ಯೂನಿಟ್ ಮತ್ತು ಸಿಸಿ ಟಿವಿ ಸಮೀಪದ ಹಾಸ್ಟೇಲ್ ಕಟ್ಟಡದಲ್ಲಿ ಅಳವಡಿಸಲಾಗಿದೆ.
ಕಸ ಎಸೆದವರು ಅಥವಾ ವಾಹನ ಸಂಖ್ಯೆ ಸಿಸಿ ಕ್ಯಾಮರಾದಲ್ಲಿ ಸೆರೆಯಾದರೆ ಕಸ ಎಸೆದವರನನ್ನು ಸುಲಭದಲ್ಲಿ ಪತ್ತೆ ಮಾಡಬಹುದು. ಒಮ್ಮೆ ಎಚ್ಷರಿಕೆ ನೀಡಲಾಗುವುದು ಮತ್ತೆ ಪುನರಾವರ್ತನೆಯಾದರೆ ನಗರ ಪಂಚಾಯತ್ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ.
ಪೊಲೀಸ್ ಇಲಾಖೆ ಪ್ರಯೋಗ ಯಶಸ್ವಿ:
ಅತಿವೇಗ, ಅಜಾಗರೂಕತೆ, ಹೀಗೆ ಸುಳ್ಯ ನಗರದಲ್ಲಿ ಎರ್ರಾಬಿರಿ ಡ್ರೈವಿಂಗ್, ಅವೈಜ್ಞಾನಿಕ ಪಾರ್ಕಿಂಗ್, ಟ್ರಾಫಿಕ್ ಜಾಂ, ಹೆಚ್ಚಿದ ಅಪಘಾತ ಹೀಗೆ ಒಂದು ಕಾಲದಲ್ಲಿ ಪೊಲೀಸ್ ಇಲಾಖೆಗೆ ನಗರದ ಟ್ರಾಫಿಕ್ ಕಿರಿ ಕಿರಿ ದಿನಾ ತಲೆ ನೋವು ಉಂಟು ಮಾಡುತ್ತಿತ್ತು. ಇದರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ನಗರದ ಮೂಲೆ ಮೂಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರು. ಪೊಲೀಸ್ ಠಾಣೆಯಲ್ಲಿ ಕುಳಿತು ಇಡೀ ನಗರವನ್ನು ವೀಕ್ಷಿಸುವ ರೀತಿಯಲ್ಲಿ ಸಿಸಿ ಜಾಲವನ್ನು ಹರಡಿದರು. ಇದರಿಂದ ಟ್ರಾಫಿಕ್ ಕಾನೂನು ಉಲ್ಲಂಘನೆ ಮಾಡುವವರು ಹೆದರಿ ಹೋದರು. ಕ್ರಮೇಣ ಟ್ರಾಫಿಕ್ ಕಾನೂನು ಉಲ್ಲಂಘನೆ, ಅಪಘಾತಕ್ಕೆ ಕಡಿವಾಣ ಬಿತ್ತು. ಹಲವು ಪ್ರಕರಣಗಳ ಪತ್ತೆಗೂ ಈ ಸಿಸಿ ಕ್ಯಾಮರಾ ಇಲಾಖೆಗೆ ಸಾಥ್ ನೀಡಿದ ಉದಾಹರಣೆಗಳೂ ಇದೆ.
ತ್ಯಾಜ್ಯ ಪಾಯಿಂಟ್ ಗಳು ಇನ್ನೂ ಇವೆ:
ಕುರುಂಜಿಗುಡ್ಡೆ ಮಾತ್ರ ಅಲ್ಲ ಅಂಬೆಟಡ್ಕ, ಗಾಂಧಿನಗರ, ಆಲೆಟ್ಟಿ ರಸ್ತೆ, ಪ್ರಭು ಗ್ರೌಂಡ್, ಅರಂಬೂರು, ಬಸ್ ನಿಲ್ದಾಣದ ಹಿಂಬಾಗ ಹೀಗೆ ತ್ಯಾಜ್ಯ ಸುರಿದು ನಗರದ ಅಂದ ಕೆಡಿಸುವ ತ್ಯಾಜ್ಯ ಪಾಯಿಂಟ್ ಗಳು ಹತ್ತು ಹಲವಿದೆ. ಇಲ್ಲೆಲ್ಲ ಮುಂದಿನ ದಿನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ. ಒಟ್ಟಿನಲ್ಲಿ ಇನ್ನು ಎಲ್ಲಿ ಕಸ ಎಸೆದರೂ ಸಿಕ್ಕಿ ಬೀಳುವುದು ಖಚಿತ. ಇದರ ಜೊತೆಗೆ ಅಂತಹ ಮಂದಿಯ ಮೇಲೆ ದಂಡವೂ ವಿಧಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಮನೆಯ ಕಸವನ್ನು ಎಲ್ಲೆಲ್ಲೋ ಎಸೆದು ಇಡೀ ನಾಡನ್ನೇ ದುರ್ನಾತ ಬೀರುವಂತೆ ಮಾಡುವವರು, ಸ್ವಚ್ಛತೆಯ ಕಲ್ಪನೆಗೆ ಎಳ್ಳುನೀರು ಬಿಡುವವರು ಆದಷ್ಟು ಬೇಗ ಸಿಕ್ಕಿ ಬೀಳಲಿ.. ಇದೇ ಸುಳ್ಯ ಜನತೆಯ ಆಶಯ.
ಜಿಲ್ಲೆಗೆ ಮಾದರಿ :
ಹಲವು ಬಾರಿ ಸ್ವಚ್ಛತೆ, ಹಲವು ಬಾರಿ ಸ್ವಚ್ಛತಾ ಜಾಗೃತಿ ಬಳಿಕವೂ ಮತ್ತೆ ಮತ್ತೆ ತ್ಯಾಜ್ಯವನ್ನು ರಸ್ತೆ ಬದಿ ಎಸೆಯುವ ಜನರು ಇಡೀ ಜಿಲ್ಲೆಯ ಕೆಲವು ಕಡೆ ಇದ್ದಾರೆ. ಇಲ್ಲೆಲ್ಲಾ ಕಡೆ ಇದೇ ಮಾದರಿ ಸಿಸಿ ಕ್ಯಾಮಾರ ಅಳವಡಿಕೆ ಮಾಡಿ ತ್ಯಾಜ್ಯ ಎಸೆಯುವವರ ಪತ್ತೆ ಮಾಡಿ ದಂಡ ಹಾಕುವ ಪ್ರಯೋಗ ನಡೆದರೆ ಸ್ವಚ್ಛತೆಗೆ ಕೊಂಚ ಬಲ ಸಿಗಬಹುದು. ಪುತ್ತೂರು ತಾಲೂಕಿನ ಕೆಲವು ಕಡೆ ತ್ಯಾಜ್ಯ ಮತ್ತೆ ಮತ್ತೆ ಎಸೆಯುವುದು ಕಂಡಿದೆ. ಬೆದ್ರಾಳದಲ್ಲೂ ತ್ಯಾಜ್ಯ ಎಸೆಯುವವರ ವಿರುದ್ಧ ಸಿಸಿ ಕ್ಯಾಮಾರ ಅಸ್ತ್ರ ಬಿಟ್ಟ ಬಳಿಕ ಕಡಿಮೆಯಾಗಿತ್ತು. ಹರಿಕೆ ಹೇಳುತ್ತೇವೆ ಎಂದು ಸ್ಥಳೀಯರು ಬ್ಯಾನರ್ ಹಾಕಿದರೂ ತ್ಯಾಜ್ಯ ಎಸೆದು ಹೋಗುತ್ತಿದ್ದ ಮಂದಿ ಸಿಸಿ ಕ್ಯಾಮಾರಾಕ್ಕೆ ಹೆದರಿ ಕಸದ ತೊಟ್ಟಿಗೇ ಈಗ ಕಸ ಕಸೆಯುತ್ತಾರೆ.
ತ್ಯಾಜ್ಯ ವಿಲೇವಾರಿ ಮತ್ತು ಸ್ವಚ್ಛತೆ ಕಾಪಾಡುವುದು ನಗರ ಪಂಚಾಯತ್ ನ ಕೆಲಸ ಹೌದು, ಜೊತೆಗೆ ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬುದನ್ನು ಮರೆಯಬಾರದು. ಸ್ವಚ್ಛ ನಗರವನ್ನು ರೂಪಿಸಲು ನಗರ ಪಂಚಾಯತ್ ಪಣ ತೊಟ್ಟಿದೆ, ಅದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿದರೆ ಮಾತ್ರ ಅದು ಸಾಧ್ಯ – ವಿನಯಕುಮಾರ್ ಕಂದಡ್ಕ , ನ.ಪಂ.ಸದಸ್ಯ.
Advertisement
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…