ಜೋಡುಪಾಲ ದುರಂತಕ್ಕೆ ಸಂದಿದೆ ವರುಷ : ಇನ್ನೂ ಅಲ್ಲಿ ಮೂಡಿಲ್ಲ ಮುಖದಲ್ಲಿ ಹರುಷ

August 17, 2019
8:00 AM

ಜೋಡುಪಾಲ….. ಈ ಹೆಸರು ನಾಡಿನಾದ್ಯಂತ ಕಳೆದ ವರ್ಷ ಸುದ್ದಿಯಾಯಿತು. ಆ ದಿನಕ್ಕೆ ವರ್ಷವಾಗಿದೆ. ಹಾಗಿದ್ದರೂ ಮತ್ತೆ ಅಂತಹದ್ದೇ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ ಅಲ್ಲಿನ ಮಂದಿಗೆ.ಹಾಗಂತ ನೆಮ್ಮದಿ ಇಲ್ಲವಾ ಎಂದು ಕೇಳಿದರೆ ನೆಮ್ಮದಿ ಇದೆ.ಆದರೆ ನಮ್ಮವರನ್ನು ಕಳಕೊಂಡು, ತಮ್ಮದೆಲ್ಲವೂ ಕಳೆದುಕೊಂಡ ಬದುಕು.ಆ ಭಾರಕ್ಕೆ ಇಡೀ ವರ್ಷ ಕಳೆದುಹೋಯಿತು.ಹಾಗಿದ್ದರೆ ಅಂದೇನಾಗಿತ್ತು, ಈಗ ಏನೇನಾಗಿದೆ. ಈ ಎಲ್ಲಾ ಸಂಕಷ್ಟಗಳ ನಡುವೆಯೂ ಬದುಕು ಕಟ್ಟಿಕೊಂಡವರ ಕತೆ.. ಈ ಕಡೆಗೊಂದು ನೋಟ…

Advertisement
Advertisement
Advertisement

ಸುಳ್ಯ: ಕಳೆದ ವರ್ಷ ಆಗಸ್ಟ್ 17 . ಕೊಡಗು ಜಿಲ್ಲೆಯ ಜೋಡುಪಾಲ, ಎರಡನೇ ಮೊಣ್ಣಂಗೇರಿ ಪ್ರದೇಶದಲ್ಲಿ ಉಂಟಾದ ಭೀಕರ ಭೂಕುಸಿತ, ಜಲಪ್ರಳಯಕ್ಕೆ ವರುಷ ಸಂದಿದೆ. ಭೀಕರ ಪ್ರಳಯಕ್ಕೆ ಸಿಲುಕಿ ಅತಂತ್ರರಾದ ಜನರು ನಿಧಾನಕ್ಕೆ ತಮ್ಮ ಬದುಕನ್ನು ಮತ್ತೆ ಕಟ್ಟಲು ಆರಂಭಿಸಿದರೂ ಜಲಪ್ರಳಯ, ಭೂಕುಸಿತ, ಬೆಟ್ಟಗಳೇ ಕುಸಿದು ಬಿದ್ದ ಭೀಕರತೆಯ ಭಯಾನಕತೆ ಈ ಪ್ರದೇಶದ ಜನರನ್ನು ಇನ್ನೂ ಬಿಟ್ಟಿಲ್ಲ. ಅದುದರಿಂದ ತಮ್ಮದೆಲ್ಲವನ್ನೂ ಬಿಟ್ಟು ಹಲವಾರು ತಿಂಗಳ ಕಾಲ ಪರಿಹಾರ ಕೇಂದ್ರದಲ್ಲಿ ಕಳೆದು ಮತ್ತೆ ಮನೆಗೆ ಮರಳಿ ಮನೆ, ಮಠ, ಅಂಗಡಿ, ಕೃಷಿ ಎಲ್ಲವನ್ನೂ ಮರಳಿ ಕಟ್ಟಲು ಪ್ರಾರಂಭಿಸಿದರೂ ವರುಷದಿಂದ ಆತಂಕದಲ್ಲೇ ದಿನ ಕಳೆಯುವ ಸ್ಥಿತಿ ಇಲ್ಲಿಯ ಜನತೆಯದ್ದು.

Advertisement

ಜೋಡುಪಾಲ, ಎರಡನೇ ಮೊಣ್ಣಂಗೇರಿ ಪ್ರದೇಶದಲ್ಲಿ ಕಳೆದ ವರ್ಷ ಮನೆ ನಾಶವಾದವರು ಹಲವರು ಪ್ರದೇಶವನ್ನು ತೊರೆದು ಸಂಬಂಧಿಕರ ಮನೆಗೋ, ಬಾಡಿಗೆ ಮನೆಗೋ ಸ್ಥಳಾಂತರಗೊಂಡಿದ್ದರು. ಈ ಬಾರಿಯೂ ಮಳೆಗಾಲಕ್ಕೆ ಹೆದರಿ ಹಲವು ಕುಟುಂಬಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಕಳೆದ ವರ್ಷ ಉಂಟಾದ ಜಲಪ್ರಳಯ ಮತ್ತು ಭೂ ಕುಸಿತದಿಂದಾಗಿ ಬಾನಿಗೆ ಮುತ್ತಿಕ್ಕುತ್ತಿದ್ದ ಹಸಿರು ಬೆಟ್ಟ ಗುಡ್ಡಗಳು ಕುಸಿದು ಬಿದ್ದಿದೆ, ಬೃಹದಾಕಾರದ ಬಂಡೆಗಳು, ಮುಗಿಲೆತ್ತರದ ಮರಗಳು ಕೊಚ್ಚಿ ಹೋಗಿದೆ. ರಕ್ತ ಚಿಮ್ಮುವ ಗಾಯದಂತೆ ಗೋಚರಿಸುವ ಸೀಳಿ ಹೋದ ಬೆಟ್ಟ ಗುಡ್ಡಗಳು ಅದರ ಭೀಕರತೆನ್ನು ತೋರಿಸುತ್ತದೆ. ಅಲ್ಲಲ್ಲಿ ಸಿಡಿದು, ವಾಲಿ ನಿಂತ ಬೆಟ್ಟಗಳು ಮತ್ತೆ ಕುಸಿಯಲು ಹಪ ಹಪಿಸುತ್ತಿರುವಂತೆ ಭಾಸವಾಗುತ್ತದೆ.

ಕೃಷಿ ಬದುಕು ನಾಶ:
ಸಂಪೂರ್ಣವಾಗಿ ಕೃಷಿಯನ್ನೇ ನಂಬಿ ಬದುಕು ಕಟ್ಟಿ ಕೊಂಡವರು ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಭಾಗದ ಜನರು. ಕೃಷಿ ಸಂಸ್ಕೃತಿಯೊಂದಿಗೆ ಸ್ವಾವಲಂಬನೆಯ ಬದುಕನ್ನು ಸಾಗಿಸುತ್ತಿದ್ದವರು. ಆದರೆ ಕಳೆದ ಬಾರಿ ಉಂಟಾದ ಜಲಪ್ರಳಯ ಮತ್ತು ಭೂಕುಸಿತ ಇವರ ಕೃಷಿ ಬದುಕನ್ನು ಆಫೋಷನ ತೆಗೆದುಕೊಂಡಿದೆ. ಬೆಟ್ಟಗಳು ಸಂಪೂರ್ಣ ಕುಸಿದು ಬಂದ ಕಾರಣ ಹೆಕ್ಟೇರ್ ಗಟ್ಟಲೆ ಅಡಕೆ, ಕಾಫಿ ತೋಟಗಳು ನಾಶವಾಗಿದೆ. ತಿಂಗಳುಗಟ್ಟಲೆ ಕೆಸರು ನೀರು, ಮಣ್ಣು ತುಂಬಿ ತೋಟಗಳು ನಾಮಾಶೇಷವಾಗಿದೆ. ಅನ್ನದ ಬಟ್ಟಲು ತುಂಬುತ್ತಿದ್ದ ಭತ್ತ ಬೇಸಾಯವೂ ಇಲ್ಲದಂತಾಗಿದೆ. ಎಲ್ಲವನ್ನೂ ಒಂದರಿಂದ ಕಟ್ಟಲು ಆರಂಭಿಸಿದರೂ ಏನು ಮಾಡಬೇಕು, ಹೇಗೆ ಮಾಡಬೇಕು ಎಂದು ತೋಚದೆ ಕೃಷಿ ಬದುಕು ಕೂಡ ಆತಂಕವನ್ನು ಎದುರಿಸುತಿದೆ.

Advertisement

 

Advertisement

ಮಕ್ಕಳ ಕಲರವವಿದ್ದ ಶಾಲೆಯಲ್ಲಿ ಶ್ಮಶಾನ ಮೌನ:
ಸದಾ ಮಕ್ಕಳ ಕಲರವ, ಲವಲವಿಕೆ ನಲಿದಾಡುತ್ತಿದ್ದ ಎರಡನೇ ಮೊಣ್ಣಂಗೇರಿಯ ಕಿರಿಯ ಪ್ರಾಥಮಿಕ ಶಾಲೆ ಪ್ರಳಯದ ನಂತರ ತೆರೆಯಲೇ ಇಲ್ಲ. ಶಾಲೆಯು ಕಳೆದ ಆಗಸ್ಟ್ ಮಧ್ಯದಲ್ಲಿ ಆದ ಪ್ರಳಯದ ನಂತರ ತೆರೆಯಲಿಲ್ಲ. ಹಲವು ತಿಂಗಳುಗಳ ಕಾಲ ಮನೆಗಳ ಬಾಗಿಲು ಮುಚ್ಚಿದ್ದ ಕಾರಣ ಮಕ್ಕಳು ಶಾಲೆಗೆ ಬಾರದಂತಾದರು. ಬಳಿಕ ಇಲ್ಲಿ ಅ..ಆ..ಇ..ಈ  ಕಲಿಯುತ್ತಿದ್ದ ಮಕ್ಕಳನ್ನು ಪೋಷಕರು ಸಂಬಂಧಿಕರಲ್ಲಿ ಮತ್ತಿತರ ಕಡೆ ಶಾಲೆಗಳಿಗೆ ಸೇರಿಸಿದರು.

 

Advertisement

ಕರಾಳ ನೆನಪು:
ಕಳೆದ ವರ್ಷ ಆಗಸ್ಟ್ 17 ರಂದು ಪೂರ್ವಾಹ್ನ 8.30 ರ ಹೊತ್ತಿಗೆ ಜೋಡುಪಾಲದಲ್ಲಿ ಭಾರೀ ಶಬ್ದದೊಂದಿಗೆ ಕುಸಿದು ಬೆಟ್ಟ ಕುಸಿದು ಹರಿದು ಬಂದಿತ್ತು. ಸುಮಾರು 40-50 ಅಡಿ ಎತ್ತರದಲ್ಲಿ ಹರಿದು ಬಂದ ಕೆಸರು ನೀರಿನೊಂದಿಗೆ ಬೃಹತ್ ಗಾತ್ರದ ಮರಗಳು, ಬಂಡೆಕಲ್ಲುಗಳು, ಉರುಳಿ ಬಂದಿತ್ತು. ಕಿಲೋ ಮೀಟರ್ ದೂರದಲ್ಲಿ ಕೆಸರು, ಕಲ್ಲು ಬಂಡೆಗಳು ಬೃಹದಾಕಾರದ ಮರಗಳೇ ತುಂಬಿ ಹೋಗಿತ್ತು. ಮನೆಗಳು ನೆಲಸಮಗೊಂಡಿತು. ಕೃತಕ ಹೊಳೆಯೇ ನಿರ್ಮಾಣವಾಯಿತು. ನಾಲ್ಕು ಮಾನವ ಜೀವಗಳು ಸಮಾಧಿಯಾಯಿತು. ಹತ್ತಿರದ ಮೊಣ್ಣಂಗೇರಿಯಲ್ಲಿಯೂ ಗುಡ್ಡಗಳು ಕುಸಿದು ಬಿದ್ದು ಇಡೀ ಗ್ರಾಮವೇ ನಾಶವಾಯಿತು. ಕೊಡಗು ಸಂಪಾಜೆಯ ಕೊಯನಾಡಿನಿಂದ ದೇವರಕೊಲ್ಲಿ, ಜೋಡುಪಾಲ, ಮದೆನಾಡು, ಕಾಟಕೇರಿ, ತಾಳತ್ತ್ ಮನೆ ಪ್ರದೇಶದುದ್ದಕ್ಕೂ ಹೆದ್ದಾರಿ ಕುಸಿದು ಹೋಗಿತ್ತು. ಹಲವು ಕಡೆಗಳಲ್ಲಿ ಗುಡ್ಡವೇ ಕುಸಿದು ಬಂದು ರಸ್ತೆಯಲ್ಲಿ ಬಿದ್ದಿತ್ತು. ರಸ್ತೆ ಬದಿಯಲ್ಲಿ ಬೃಹತ್ ಪ್ರಮಾಣದ ಕಂದಕಗಳು ನಿರ್ಮಾಣವಾಗಿತ್ತು. ಹಲವು ಕುಟುಂಬಗಳು ಅಪಾಯದಲ್ಲಿ ಸಿಲುಕಿತ್ತು. ಸಂತ್ರಸ್ತರಾದ ಕುಟುಂಬಗಳನ್ನು ಅರಂತೋಡು, ಕಲ್ಲುಗುಂಡಿ, ಕೊಡಗು ಸಂಪಾಜೆಗಳಲ್ಲಿ ತೆರೆಯಲಾದ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು. ನಾಡಿಗೆ ನಾಡೇ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದರು. ಹಲವಾರು ತಿಂಗಳ ಕಾಲ ಪರಿಹಾರ ಕೇಂದ್ರಗಳಲ್ಲಿದ್ದ ಜನರು ನಿಧಾನಕ್ಕೆ ತಮ್ಮ ಮನೆಗಳಿಗೆ ಹಿಂತಿರುಗಿದರು. ಕೆಲವು ತಿಂಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿದ್ದ ರಸ್ತೆಯನ್ನು ದುರಸ್ತಿ ನಡೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Advertisement

ಸಂತ್ರಸ್ತರಿಗೆ ಸೂರು ಇನ್ನೂ ಮರೀಚಿಕೆ: ಪ್ರಳಯಕ್ಕೆ ಸಿಲುಕಿ ಮನೆ, ಕೃಷಿ, ಅಂಗಡಿ, ವ್ಯಾಪಾರ ಹೀಗೆ ಪ್ರತಿಯೊಬ್ಬರಿಗೂ ಲಕ್ಷಾಂತರ ರೂಗಳ ನಾಶ ನಷ್ಟ ಉಂಟಾಗಿದ್ದರೂ ಸಂತ್ರಸ್ತರಿಗೆ ಸರಕಾರದಿಂದ ಸಿಕ್ಕಿರುವ ಪರಿಹಾರ ಅಸ್ಟಕ್ಕಷ್ಟೇ ಎಂಬ ದೂರುಗಳು ಎಲ್ಲಡೆ ಇದೆ. ಮನೆ ಕಳೆದುಕೊಂಡ ಸಂತ್ರಸ್ತರಿಗಾಗಿ ಕೊಡಗಿನಲ್ಲಿ ಮನೆ ಸಮುಚ್ಛಯ ನಿರ್ಮಾಣ ಆರಂಭಿಸಲಾಗಿದ್ದರೂ ಅದು ಪೂರ್ತಿಯಾಗಿಲ್ಲ. ಇನ್ನೊಂದು ಮನೆ ಸಮುಚ್ಛಯವನ್ನು ಕೊಡಗು ಸಂಪಾಜೆಯಲ್ಲಿ ನಿರ್ಮಿಸುವುದಾಗಿ ಹೇಳಲಾಗಿದ್ದರೂ ಅದರ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.

ಬದುಕು ಕಟ್ಟಿದವರು ಹಲವಾರು: ಅನೇಕ ಮಂದಿ ಸರಕಾರದಿಂದ ಸಹಾಯ ಬಂದಿಲ್ಲ ಎಂದು ಕೂರಲಿಲ್ಲ. ಸರಕಾರದಿಂದ ಸಹಾಯ ಬರುತ್ತದೆ ಎಂದು ನಂಬಿದ್ದರೆ ಇಂದಿಗೂ ಹಾಗೆಯೇ ಉಳಿದು ಬಿಡುತ್ತಿದ್ದರೋ ಏನೋ. ಅನೇಕರು ಮತ್ತೆ ಕೃಷಿ ಕಾರ್ಯ ಆರಂಭಿಸಿದರು.ಪರ್ಯಾಯ ಕೆಲಸದತ್ತ ಚಿಂತನೆ ಮಾಡಿದರು. ಅಡಿಕೆ ಕೃಷಿಯನ್ನು  ಮತ್ತೆ ಮೇಲೆತ್ತಿದರು, ತರಕಾರಿ ಕೃಷಿ ಮಾಡಿ ಬದುಕು ಸಾಗಿಸಿದರು. ಅಲ್ಲೇ ಕೆಲವರು ಹೋಟೆಲ್ ಇರಿಸಿ ಬದುಕು ಸಾಗಿಸಿದರು. ಹೀಗಾಗಿ ಕೆಲವರಿಗೆ ಈ ಕರಾಳ ದಿನ ಸವಾಲಿನ ದಿನವೂ ಆಗಿ ಬಿಟ್ಟಿತು.

Advertisement

ಕಳೆದ ವರ್ಷದ ಘಟನೆಯನ್ನು ಮಹಿಳೆಯೊಬ್ಬರು ವಿವರಿಸುವಾಗ ಈಗಲೂ ಅವರ ಕಣ್ಣಂಚಿನಲ್ಲಿ ನೀರು ಬರುತ್ತದೆ,

ಅಂದು ಬೆಳಗ್ಗೆ ನಾನು ಅಂಗಳದ ಬದಿ ಬಟ್ಟೆ ಒಗೆಯುತ್ತಿದ್ದೆ.ದೂರದ ಕಾಡಿನಲ್ಲಿ  ದೊಡ್ಡ ಸದ್ದು ಕೇಳಿತು.ಸದ್ದೇನು ಎಂದು ನೋಡಿದರೆ ದೂರದಲ್ಲಿ  ಮರಗಳು ಅಲ್ಲಾಡುತ್ತಾ ಬರುತ್ತಿರುವುದು  ಕಂಡೆ.ನನಗೆ ತಲೆ ತಿರುಗುತ್ತಿದೆಯೋ ಎಂದು ಒಂದು ಕ್ಷಣ ದಂಗಾದೆ, ಮತ್ತೆ ನೋಡಿದಾಗ ಮರಗಳು ಅಲ್ಲಾಡುತ್ತಾ ಕೆಂಪು ನೀರು, ಕಲ್ಲುಗಳು ಮೇಲಕ್ಕೆ ಹಾರುತ್ತಾ ಕೆಳಗೆ ಬರುತ್ತಿತ್ತು, ನಾನು ಅಲ್ಲಿಂದಲೇ ಓಡಿದೆ.ಮನೆಯಲ್ಲಿ ಯಾರು ಇರಲಿಲ್ಲ. ಕೆಲವೇ ಹೊತ್ತಲ್ಲಿ ಮರಗಳು, ಬಂಡೆ ಎಲ್ಲವೂ ಕೆಳಗಡೆ ಬಂದಿತ್ತು. ನಂತರ ಬಂದು ನೋಡಿದಾಗ ಎಲ್ಲವೂ ಸರ್ವನಾಶವಾಗಿತ್ತು ಎನ್ನುತ್ತಾ ಮಾತು ನಿಲ್ಲಿಸುತ್ತಾರೆ.

Advertisement

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಬರ ಹಿನ್ನೆಲೆ | ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್ ಬಳಸಿ ಕೃಷಿಗೆ ನದಿ ನೀರು ಬಳಕೆ ನಿಷೇಧ |
March 27, 2024
10:01 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲವೇಕೆ…? | ಆರೋಪಿಗಳು ಪತ್ತೆಯಾಗುತ್ತಿಲ್ಲವೇಕೆ…? |
March 27, 2024
9:32 PM
by: ದ ರೂರಲ್ ಮಿರರ್.ಕಾಂ
ಅರಣ್ಯ ಸುತ್ತಮುತ್ತ ಕೃಷಿ ಮಾಡುವ ರೈತರಿಗೆ ಕೃಷಿ ಭೂಮಿ ಮಂಜೂರಾತಿ : ಕೆಲ ಜಿಲ್ಲೆಗಳ ರೈತರಿಗೆ ಹಕ್ಕುಪತ್ರ ಬಿಡುಗಡೆ ಮಾಡಲಿರುವ ಕಂದಾಯ ಇಲಾಖೆ
March 26, 2024
11:59 PM
by: The Rural Mirror ಸುದ್ದಿಜಾಲ
ಈ ಭಾರಿ ಭಾರತದಲ್ಲೇ ನಡೆಯಲಿದೆ ಐಪಿಎಲ್‌ : ವೇಳಾಪಟ್ಟಿಯಲ್ಲಿ ಯಾವ ದಿನ ಯಾವ ಮ್ಯಾಚ್‌ ಸಂಪೂರ್ಣ ವಿವರ
March 25, 2024
11:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror