ಸುಳ್ಯ: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ದ.ಕ.ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಸುಳ್ಯ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಸುಳ್ಯ, ಮಡಪ್ಪಾಡಿ ಗ್ರಾಮ ಪಂಚಾಯತ್ ಮತ್ತು ಮಡಪ್ಪಾಡಿ ಗ್ರಾಮಸ್ಥರ ಸಹಕಾರದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ, ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರ 2020 ಜನವರಿ 5 ರಂದು ಭಾನುವಾರ ಮಡಪ್ಪಾಡಿಯಲ್ಲಿ ನಡೆಯಲಿದೆ. ಡಿ.22ರಂದು ನಿಗದಿಯಾಗಿದ್ದ ಗ್ರಾಮ ವಾಸ್ತವ್ಯ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಗ್ರಾಮ ವಾಸ್ತವ್ಯದ ಸಿದ್ಧತೆ ಅಂತಿಮ ಹಂತದಲ್ಲಿದೆ.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್.ಅಂಗಾರ ಹಾಗು ಜಿಲ್ಲೆಯ ಎಲ್ಲಾ ಶಾಸಕರುಗಳು, ಜಿಲ್ಲಾಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹಾಗು ತಾಲೂಕಿನ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸೆಲ್ವಮಣಿ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಪುತ್ತೂರು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಳ್ ಹಾಗು ಇತರ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಗ್ರಾಮ ವಾಸ್ತವ್ಯದಲ್ಲಿ ಉದ್ಘಾಟನೆ, ಅಧಿಕಾರಿಗಳೊಂದಿಗೆ ಜನರ ಮುಖಾಮುಖಿ, ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರ ಮುಖಾಮುಖಿ, ಗ್ರಾಮಸ್ಥರ ಜೊತೆ ಪತ್ರಕರ್ತರ ಮುಖಾಮುಖಿ, ಸಮಾರೋಪ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು, ಗ್ರಾಮದ ಹಿರಿಯರೊಂದಿಗೆ ಪತ್ರಕರ್ತರ ಚಾವಡಿ ಚರ್ಚೆ, ಗ್ರಾಮ ವಾಸ್ತವ್ಯ ಒಳಗೊಂಡಿದೆ.