ಮಡಿಕೇರಿ : ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರದ ನಿರ್ಧಾರದಿಂದ ತೃಪ್ತರಾಗದ ಬಿಜೆಪಿ ಮಂದಿ ಟಿಪ್ಪು ವಿವಾದವನ್ನು ಜೀವಂತವಾಗಿಡಬೇಕೆನ್ನುವ ಉದ್ದೇಶದಿಂದ ಪಠ್ಯ ಪುಸ್ತಕದಲ್ಲಿನ ಟಿಪ್ಪು ಅಧ್ಯಾಯದ ವಿಚಾರವನ್ನು ಕೆದಕಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಆರೋಪಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎ.ಕೆ.ಹ್ಯಾರಿಸ್, ಪಠ್ಯ ಕ್ರಮದಿಂದ ಟಿಪ್ಪು ಅಧ್ಯಾಯವನ್ನು ಕೈ ಬಿಡುವ ನಿರ್ಧಾರ ಖಂಡನೀಯವೆಂದು ತಿಳಿಸಿದ್ದಾರೆ. ನಿತ್ಯ ಭಾವನಾತ್ಮಕ ವಿಚಾರಗಳಲ್ಲೇ ವಿವಾದಗಳನ್ನು ಸೃಷ್ಟಿಸುವ ಬಿಜೆಪಿ ಸೌಹಾರ್ದ ವಾತಾವರಣಕ್ಕೆ ಹುಳಿ ಹಿಂಡುವ ಕಾರ್ಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆಯ ವಿವಾದದಿಂದ ಸಾವು, ನೋವುಗಳು ಸಂಭವಿಸಿ ಅಶಾಂತಿಯ ವಾತಾವರಣ ಮೂಡಿ ಸಾಮರಸ್ಯಕ್ಕೆ ದಕ್ಕೆಯಾಗಿತ್ತು. ರಾಜಕೀಯ ಲಾಭಕ್ಕಾಗಿ ಈ ವಿವಾದವನ್ನು ಸೃಷ್ಟಿಸಿದ ಬಿಜೆಪಿ ತಾನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಯಂತಿಯನ್ನು ರದ್ದುಗೊಳಿಸಿತು. ಸರ್ಕಾರದ ನಿರ್ಧಾರಕ್ಕೆ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗದ ಕಾರಣ ಇದೀಗ ಟಿಪ್ಪು ಪಾಠದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವಿವಾದವನ್ನು ಜೀವಂತವಾಗಿಡಲು ಹವಣಿಸಲಾಗುತ್ತಿದೆ. ಭಾವನೆಗಳ ಜೊತೆ ಚೆಲ್ಲಾಟವಾಡುವ ಬಿಜೆಪಿ ಅಜೆಂಡಾದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತವಾಗುತ್ತಿದೆ ಎಂದು ಹ್ಯಾರಿಸ್ ಆರೋಪಿಸಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ಉಪ ಚುನಾವಣೆ ನಡೆಯಲಿದ್ದು, ಸೋಲಿನ ಭೀತಿಯಲ್ಲಿರುವ ಬಿಜೆಪಿ ಮಂದಿ ಟಿಪ್ಪು ಪಠ್ಯದ ಅಸ್ತ್ರವನ್ನು ಬಳಸಿಕೊಳ್ಳುವ ಮೂಲಕ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಒಂದು ವೇಳೆ ಮಧ್ಯಂತರ ಚುನಾವಣೆ ಎದುರಾದರೂ ಈ ರೀತಿಯ ವಿವಾದಗಳು ಲಾಭ ತಂದುಕೊಡಲಿದೆ ಎನ್ನುವ ಭ್ರಮೆಯಲ್ಲಿ ಬಿಜೆಪಿ ಇದೆ ಎಂದು ಅವರು ಟೀಕಿಸಿದ್ದಾರೆ.ಕಳೆದ ಮೂರು ತಿಂಗಳಿನಿಂದ ರಾಜ್ಯ ವ್ಯಾಪಿ ನಿರಂತರ ಮಳೆಯಾಗಿ ಕಷ್ಟ, ನಷ್ಟಗಳು ಸಂಭವಿಸಿದೆ. ಕೊಡಗು ಜಿಲ್ಲೆ ಸೇರಿದಂತೆ ವಿವಿಧೆಡೆ ಸಾವಿರಾರು ಮಂದಿ ನಿರಾಶ್ರಿತರಾಗಿ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಮಳೆಹಾನಿ ಸಂತ್ರಸ್ತರ ನೋವಿಗೆ ಸ್ಪಂದಿಸುವ ಕಾಳಜಿ ತೋರದ ಸರ್ಕಾರ ಟಿಪ್ಪು ಪಾಠ ತೆಗೆಯುವ ಕುರಿತು ತಲೆಕೆಡಿಸಿಕೊಂಡಿರುವುದನ್ನು ಗಮನಿಸಿದರೆ ಜನರ ಹಿತ ಕಾಯುವುದಕ್ಕಿಂತ ಇವರಿಗೆ ರಾಜಕೀಯ ಲಾಭ ಮಾಡಿಕೊಳ್ಳುವುದೇ ಹೆಚ್ಚಾಗಿದೆ ಎನ್ನುವ ಸಂಶಯ ಮೂಡುತ್ತಿದೆ ಎಂದು ಹ್ಯಾರಿಸ್ ಆರೋಪಿಸಿದ್ದಾರೆ.
ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಬ್ದಾರಿ ಪ್ರತಿಯೊಂದು ಸರ್ಕಾರದ ಮೇಲಿದೆ. ಟಿಪ್ಪು ಸುಲ್ತಾನ್ ಒಬ್ಬ ವೀರ ಸ್ವಾತಂತ್ರ್ಯ ಹೋರಾಟಗಾರನಾಗಿದ್ದು, ಇತಿಹಾಸದಲ್ಲಿ ದಾಖಲಾಗಿರುವ ಅಂಶಗಳನ್ನು ಅಧ್ಯಯನ ಮಾಡುವ ದೊಡ್ಡ ಮನಸ್ಸನ್ನು ಬಿಜೆಪಿ ಮಂದಿ ಮಾಡಲಿ ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ಇದೇ ರೀತಿ ವಿವಾದಗಳನ್ನು ಸೃಷ್ಟಿಸುತ್ತಾ ರಾಜಕೀಯ ಲಾಭಕ್ಕಾಗಿ ಹವಣಿಸುತ್ತಿದ್ದರೆ ಅಭಿವೃದ್ಧಿ ವಂಚಿತ ಜನ ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಸಮಾಜ ನಿರ್ಮಿಸುವುದರಲ್ಲಿ ಸಂಶಯವಿಲ್ಲವೆಂದು ಭವಿಷ್ಯ ನುಡಿದಿರುವ ಹ್ಯಾರಿಸ್, ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನು ಕೈಬಿಡಬಾರದೆಂದು ಆಗ್ರಹಿಸಿದ್ದಾರೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…