ಮುಂಬೈ:ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ 67 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿಗೆ 241 ಗುರಿ ಪಡೆದಿದ್ದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.
ವಿಂಡೀಸ್ ಪರ ಹೆಟ್ಮಿರ್ 5 ಭರ್ಜರಿ ಸಿಕ್ಸರ್ ಸಿಡಿಸಿ 41 ರನ್ ಹಾಗೂ ಕೀರೊನ್ ಪೊಲಾರ್ಡ್ 5 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ಮೂಲಕ 68 ರನ್ ಗಳಿಸಿದರು. ಭಾರತ ಪರ ಮುಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್ ಹಾಗೂ ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವಿಂಡೀಸ್ ಗೆ ಕಠಿಣ ಸವಾಲು ವಿಧಿಸಿತ್ತು. 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿ ವಿಂಡೀಸ್ ಗೆ 241 ರನ್ ಗಳ ಗುರಿ ನೀಡಿತ್ತು. ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಮೊದಲ ವಿಕೆಟ್‌ಗೆ 135 ರನ್ ಗಳಿಸಿದರು. ರೋಹಿತ್ ಶರ್ಮಾ 71 ರನ್ ಗಳಿಸಿ ಔಟಾದರು. ಬಳಿಕ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರಿಷಭ್ ಪಂತ್ ಖಾತೆ ತೆರೆಯದೆ ನಿರ್ಗಮಿಸಿದರು. ನಂತರ ವಿರಾಟ್ ಕೊಹ್ಲಿ ಕೇವಲ 29 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ 4 ಬೌಂಡರಿ ಮೂಲಕ 70 ರನ್ ಗಳಿಸಿದರು. ಕನ್ನಡಿಗ ರಾಹುಲ್ 56 ಎಸೆತಗಳಲ್ಲಿ 91 ರನ್ ಗಳಿಸಿ ಔಟಾದರು.
ವೆಸ್ಟ್ ಇಂಡೀಸ್ ಪರ ಶೇಲ್ಡನ್ ಕಾಟ್ರೆಲ್ 40ಕ್ಕೆ 1, ಕೆಸ್ರಿಕ್ ವಿಲಿಯಮ್ಸ್ 37ಕ್ಕೆ 1, ಕೀರನ್ ಪೊಲಾರ್ಡ್ 33ಕ್ಕೆ 1 ವಿಕೆಟ್ ಪಡೆದರು.