ಪುತ್ತೂರು: ಪುತ್ತೂರು ತಾಲೂಕಿನ ಈಶ್ವರ ಮಂಗಲದ ಶ್ರೀಕ್ಷೇತ್ರ ಹನುಮಗಿರಿಯಲ್ಲಿ ಡಿ.29ರಂದು 5ಸಾವಿರ ಭಜನಾ ಕಾರ್ಯಕರ್ತರಿಂದ ಭಜನಾ ಸಂಭ್ರಮ ಎಂಬ ಬೃಹತ್ ಭಜನಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆಯ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ ಭಾಗವಹಿಸಲಿದ್ದಾರೆ ಎಂದು ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ತಿಳಿಸಿದ್ದಾರೆ. ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಭಜನಾ ಮಹಾಮಂಡಳ ಮಂಗಳೂರು ವಿಭಾಗ ಹಾಗೂ ಶ್ರೀಕ್ಷೇತ್ರ ಹನುಮಗಿರಿ ಪುತ್ತೂರು ವತಿಯಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.
5 ಸಾವಿರ ಭಜನಾ ಕಾರ್ಯಕರ್ತರಿಂದ ಏಕಕಾಲದಲ್ಲಿ ನಡೆಯುವ ಭಜನಾ ಕಾರ್ಯಕ್ರಮ ಇದಾಗಿದ್ದು, ವಿನೂತನ ಸಾಹಸ ಇದಾಗಿರುವುದರಿಂದ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗುವ ಸಾಧ್ಯತೆ ಇದೆ. ಡಿ.29ರಂದು ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಗೋಷ್ಠಿ, ಸಂಜೆ ಶೋಭಾಯಾತ್ರೆ, ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು. ಮಂಗಳೂರು ವಿಭಾಗದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಗಳ ಸಾವಿರಕ್ಕೂ ಮಿಕ್ಕಿದ ಭಜನಾ ಮಂಡಳಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 10 ರಿಂದ ವಿವಿಧ ಗೋಷ್ಠಿಗಳು ನಡೆಯಲಿದೆ. ಸಮಾಜ ಪರಿವರ್ತನೆಯಲ್ಲಿ ಭಜನಾ ಮಂಡಳಿಗಳ ಕಾರ್ಯಗಳು, ಮುಂದೇನು ಮಾಡಬಹುದು ಕುರಿತು ಗೋಷ್ಠಿಗಳು ನಡೆಯಲಿದೆ ಎಂದರು.
ಮಧ್ಯಾಹ್ನ 3 ಗಂಟೆಗೆ ಭಜನಾ ತಂಡಗಳ ಶೋಭಾಯಾತ್ರೆ ಶ್ರೀ ಕ್ಷೇತ್ರ ಹನುಮಗಿರಿಗೆ ಆಗಮನವಾಗಲಿದೆ. ಭಜನಾ ತಂಡಗಳ ಕುಣಿತ ಭಜನೆಗಳು ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಲಿದೆ. ಭಜನಾ ತಂಡದೊಂದಿಗೆ ಇತರ ಭಜನಾರ್ಥಿಗಳು ಭಾಗವಹಿಸಲಿದ್ದಾರೆ. 1 ಸಾವಿರ ಭಜನಾ ಮಂಡಳಿಗಳು ಈಗಾಗಲೇ ನೋಂದಾವಣೆ ಮಾಡಿದ್ದಾರೆ. ಶೋಭಾಯಾತ್ರೆಯಲ್ಲಿ ಎಲ್ಲಾ ಭಜನಾ ತಂಡದವರು ಮತ್ತು ಅವರೊಂದಿಗೆ ಬಂದವರು ತಮ್ಮ ಭಜನಾ ಕಾರ್ಯಕ್ರಮ ನೀಡಲಿದ್ದಾರೆ. ಒಟ್ಟು ಸುಮಾರು 20ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಮುಖ್ಯ ಅತಿಥಿಗಳಾಗಿ ಪಶುಸಂಗೋಪನೆ ಮತ್ತು ಹೈನುಗಾರಿಕೆಯ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಮುಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷರೂ ಭಜನಾ ಸಂಭ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಮೋಹನ ಆಳ್ವ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ನನ್ಯ ಅಚ್ಚುತ ಮೂಡೆತ್ತಾಯ ಹೇಳಿದರು. ಸಾಮಾಜಿಕ ಪರಿವರ್ತನೆ, ವ್ಯಸನಮುಕ್ತ ಸಮಾಜ, ಸಂಸ್ಕಾರಯುತ ವ್ಯಕ್ತಿಗಳನ್ನು ಮಾಡುವಲ್ಲಿ ಭಜನಾ ಮಂಡಳಿಗಳ ಪಾತ್ರ ಬಹುಮುಖ್ಯವಾದದ್ದು, ಇಂತಾಹ ಭಜನಾ ಮಂಡಳಿಗಳು ಒಂದೆಡೆ ಸೇರಿ ಸಮಾಜಮುಖಿ ಚಟುವಟಿಕೆಗಳಿಗೆ ಇನ್ನಷ್ಟು ಶಕ್ತಿ ತುಂಬುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಅವರು ತಿಳಿಸಿದರು.
ಸೂರ್ಯಾಸ್ತಮಾನದ ಸಮಯ ಸಂಜೆ 6.12ಕ್ಕೆ ಸರಿಯಾಗಿ ಶಂಖೋದ್ಘೋಷ ನಡೆಯಲಿದ್ದೂ ಬಳಿಕ 1ಸಾವಿರ ದೀಪಗಳನ್ನು ಬೆಳಗಿಸಿ, 5ಸಾವಿರ ಭಜನಾ ಕಾರ್ಯಕರ್ತರಿಂದ 5ಸಾವಿರ ಹಣತೆಯನ್ನು ಉರಿಸಿ, ಈಗಾಗಲೇ ಆಯ್ಕೆ ಮಾಡಿರುವ 6 ಭಜನೆಗಳನ್ನು ಹಾಡುವ ಮೂಲಕ ಭಜನಾ ಸಂಭ್ರಮ ನಡೆಯಲಿದೆ. ಈ ಕಾರ್ಯಕ್ರಮವೂ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ದಾಖಲೆ ಆಗುವ ಸಾಧ್ಯತೆ ಇದ್ದು ಹಾಗಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನ ಸಂಸ್ಥೆಯಿಂದ ಇಬ್ಬರು ಪ್ರತಿನಿಧಿಗಳು, ತೀರ್ಪುಗಾರರು ಆಗಮಿಸಲಿದ್ದು, ಭಜನಾ ಕಾರ್ಯಕ್ರಮ ವೀಕ್ಷಣೆ ಮಾಡಲಿದ್ದಾರೆ. ಭಜನೆ ಮುಗಿದ ಬಳಿಕ ರಾತ್ರಿ ಆಳ್ವಾಸ್ ದೇಶಿ ಸಾಂಸ್ಕೃತಿಕ ವೈಭವ ಪ್ರದರ್ಶನ ನಡೆಯಲಿದೆ ಎಂದು ನನ್ಯ ಅಚ್ಚುತ್ತ ಮೂಡೆತ್ತಾಯ ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಸಾವಿರಾರು ಭಜನಾ ಮಂಡಳಿಗಳಿವೆ. ಹಳ್ಳಿಹಳ್ಳಿಗಳಲ್ಲಿ ವ್ಯಾಪಿಸಿರುವ ಭಜನಾ ಮಂಡಳಿಗಳನ್ನು ಒಂದೆಡೆ ಸೇರಿಸಿ ಸಂಪೂರ್ಣ ಹಿಂದೂ ಸಮಾಜಕ್ಕೆ ಚೈತನ್ಯ ತುಂಬುವ, ಆ ಮೂಲಕ ಸಮರ್ಪಿತ ಬೃಹತ್ ಕಾರ್ಯಕರ್ತರ ಪಡೆಯನ್ನು ಕಟ್ಟುವ ಉದ್ದೇಶ ಹೊಂದಿರುವ ಐತಿಹಾಸಿಕ ಕಾರ್ಯಕ್ರಮವಾಗಿದೆ. ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಅರಿವನ್ನು ಮೂಡಿಸಿದೆ. ಶುಭ ಸಮಾರಂಭಗಳ ಸಮಯದಲ್ಲಿ ಕುಣಿತ ಭಜನೆಗಳ ಮೂಲಕ, ಡಿಜೆ, ಪಾಶ್ಚಾತ್ಯ ಸಂಗೀತ, ಕುಡಿತ, ದುಶ್ಚಟಕ್ಕೆ ಬಲಿಯಾಗದಂತೆ ಭಜನೆ ಶಕ್ತಿಯಾಗಿದೆ. ಹಿಂದೂ ಸಮಾಜವನ್ನು ಸುಖಿ, ಸಮೃದ್ಧಿ, ಸ್ವಸ್ಥ, ವ್ಯಾಜ್ಯ ರಹಿತ, ವ್ಯಸನ ಮುಕ್ತ, ಸಂಸ್ಕಾರಯುಕ್ತ, ಸಾಮರಸ್ಯ ಯುಕ್ತ ಮಾಡುವ ಬಹುದೊಡ್ಡ ಗುರಿಯನ್ನು ಹೊಂದಿದ್ದೇವೆ ಎಂದು ಭಜನಾ ಸಂಭ್ರಮದ ವಿಭಾಗ ಸಂಯೋಜಕ ಪ್ರವೀಣ್ ಸರಳಾಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭಜನಾ ಸಂಭ್ರಮ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಸಹಜ್ ರೈ ಬಳಜ್ಜ, ನಿರ್ವಹಣಾ ಸಮಿತಿ ಕಾರ್ಯಾದ್ಯಕ್ಷ ಮಂಜುನಾಥ ರೈ, ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಅವರು ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…