ಡೆಂಗ್ಯೂ ಎಂಬುದೊಂದು ಹೆಮ್ಮಾರಿ ರೋಗವೆಂದು ಜಗತ್ತಿನಾದ್ಯಂತ ಭಯದ ಆಲೋಚನೆಗಳು ದಟ್ಟವಾಗಿವೆ. ಈ ರೀತಿ ಭಯದ ಬೀಜ ಬಿತ್ತುವುದು ಸರಿಯೇ ಅಥವಾ ತಪ್ಪೇ? ” ಭಯಗೊಂಡವರ ಭಯವನ್ನು ನಿವಾರಿಸಿ ಆತ್ಮವಿಶ್ವಾಸವನ್ನು ಧೈರ್ಯವನ್ನು ತುಂಬಬೇಕಾದ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರು ಈ ರೀತಿ ಭಯ ಗೊಳಿಸಬಾರದು ಅಲ್ಲವೇ?” ಎಂಬ ಆಲೋಚನೆಗಳು ಯಾರಿಗಾದರೂ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಒಂದು ಹಂತದ ಭಯ ಇಲ್ಲದಿದ್ದರೆ ಜಾಗೃತಿ ಎಂಬುದು ಕನಸಿನ ಮಾತು ಎಂದು ನಾನು ಹೇಳಿದರೆ ದಯವಿಟ್ಟು ಬೇಸರಿಸಬೇಡಿ ಮತ್ತು “ನೀವು ವೈದ್ಯರಾಗಿ ನಮ್ಮನ್ನು ಬೆದರಿಸಿದರೆ ಜಾಗ್ರತೆ” ಎಂದು ನನ್ನನ್ನು ಬೆದರಿಸಬೇಡಿ!
ವೈದ್ಯಕೀಯವಾಗಿ ಡೆಂಗ್ಯೂ ಉಂಟುಮಾಡುವ ಗಂಭೀರತೆಗಳ ಅರಿವು ನಿಮಗಿದೆಯೇ?:ಮಾರಣಾಂತಿಕವಾದ ಅಥವಾ ಜೀವನಪೂರ್ತಿ ಉಳಿಯಬಹುದಾದ ದುಷ್ಪರಿಣಾಮಗಳ ಮೂಟೆಯನ್ನು ಈ ರೋಗವು ತನ್ನ ಬೆನ್ನಿನಲ್ಲಿ ಹೊತ್ತುಕೊಂಡಿದೆ. ಆದರೆ ಇದಾವುದರ ಪೂರ್ಣಪ್ರಮಾಣದ ಅರಿವು ಜನರಿಗೆ ಸ್ಪಷ್ಟವಾಗಿ ತಿಳಿದಿಲ್ಲ. ಪ್ಲೇಟ್ಲೆಟ್ ಕಣಗಳ ಸಂಖ್ಯೆ ರಕ್ತದಲ್ಲಿ ಕಡಿಮೆಯಾಗುತ್ತದೆಂದು ಜನರಿಗೆ ಗೊತ್ತು. ಅದು ತುಂಬಾ ಕಡಿಮೆಯಾದರೆ ಅದನ್ನು ಹೊರಗಿನಿಂದ ಕೊಡಬೇಕೆಂಬುದು ಜನರಿಗೆ ಗೊತ್ತು. ಆದರೆ ಪ್ಲೇಟ್ಲೆಟ್ ಕಣ ಕಡಿಮೆಯಾದರೆ ಏನಾಗುತ್ತದೆ? ಡೆಂಗ್ಯೂ ವೈರಸ್ ಏನೆಲ್ಲಾ ಹಾನಿಯನ್ನು ದೇಹದಲ್ಲಿ ಉಂಟುಮಾಡುತ್ತದೆ? ಅದರ ಜಟಿಲತೆ ಗಳು ಏನು? ಎಂಬುದರ ಜ್ಞಾನವು ಸಾಮಾನ್ಯ ಜನತೆಗೆ ಇದ್ದ ಹಾಗೆ ಕಾಣುವುದಿಲ್ಲ. ಇದೆಲ್ಲದಕ್ಕೂ ಮಿಕ್ಕಿ ವೈರಸ್ ರೋಗಾಣು ಎಂದರೆ ಏನು ಎಂಬುದು ಜನರಿಗೆ ಗೊತ್ತಿಲ್ಲ. ಎಲ್ಲವನ್ನೂ ಮತ್ತು ಎಲ್ಲಾ ರೋಗಲಕ್ಷಣಗಳನ್ನು ಗ್ಯಾಸ್ಟ್ರಿಕ್ ಎನ್ನುವ ಕಾಯಿಲೆಗೆ ಸಮೀಕರಿಸುವ ಒಂದು ಗುಂಗಿನಲ್ಲಿ ಜನರಿಗೆ ಕಾರಣಗಳು ಕೂಡ ಬೇಕಾಗಿಲ್ಲ. ಕಾಯಿಲೆಗೆ ಉಷ್ಣ ಮತ್ತು ಶೀತ ಗಳು ಕಾರಣಗಳೆಂಬ ಒಂದು ಅಜ್ಞಾನದ ಸಮೂಹ ಸನ್ನಿಯ ನಡುವೆ ಜಾಗೃತಿ ಮೂಡಿಸುವ ನೆಪದಲ್ಲಿ ವೈದ್ಯರು ಗಂಟಲು ಹರಿದುಕೊಂಡು ಕೂಗಾಡಿದರೆ ಅದಕ್ಕೆ ಕಿವಿಗೊಡುವ ಸೂಕ್ಷ್ಮತೆ ಇದ್ದ ಜನರನ್ನು ಕಾಣಲು ಸಾಧ್ಯವಾಗುವುದು ಅಪರೂಪ.ಆದ ಕಾರಣದಿಂದಲೇ ಡೆಂಗ್ಯೂ ರೋಗದಿಂದ ಮರಣದ ಪ್ರಮಾಣಗಳು ಹೆಚ್ಚುತ್ತಿವೆ.
ಡೆಂಗ್ಯೂ ವೈರಸ್ ಏನು ಮಾಡುತ್ತದೆ?:ಡೆಂಗ್ಯೂ ರೋಗಕ್ಕೆ ಕಾರಣವಾದ ವೈರಸ್ ರೋಗಾಣು ಪ್ಲೇಟ್ಲೆಟ್ ಕಣಗಳನ್ನು ನಾಶ ಮಾಡುತ್ತದೆ .ಆದಕಾರಣ ಪ್ಲೇಟ್ಲೆಟ್ ಕಣಗಳ ಸಂಖ್ಯೆ ರಕ್ತದಲ್ಲಿ ಕಡಿಮೆಯಾಗುತ್ತದೆ. “ಕಡಿಮೆಯಾಗಲಪ್ಪ,ನಮಗೇನು ತೊಂದರೆ?” ಎಂದು ಪ್ರಶ್ನಿಸುತ್ತೀರೇನು?
ಹಾಗಾದರೆ ಕೇಳಿ. ಪ್ಲೇಟ್ಲೆಟ್ ಕಣಗಳು ರಕ್ತಹೆಪ್ಪುಗಟ್ಟುವಿಕೆಗೆ ಕಾರಣವಾಗಿ, ರಕ್ತಸ್ರಾವ ವಾಗುವುದನ್ನು ತಡೆಗಟ್ಟುತ್ತದೆ. ಆದುದರಿಂದ ಪ್ಲೇಟ್ಲೆಟ್ ಕಣಗಳ ಸಂಖ್ಯೆ ಕಡಿಮೆಯಾದರೆ ರಕ್ತಸ್ರಾವ ನಿಲ್ಲಲಾರದು. ವಿಷಯ ಹೀಗಿರುವಾಗ ನೀವುಗಳು” ನನಗೇನು ಗಾಯವಾಗಿಲ್ಲ ರಕ್ತಸ್ರಾವವಾಗುವ ಭಯ ನನಗಿಲ್ಲ “ಎಂದು ನಿಶ್ಚಿಂತೆಯಲ್ಲಿರಬೇಕಾಗಿಲ್ಲ. ಆ ರಕ್ತಸ್ರಾವ ಹೊರಗಿನ ಗಾಯದಿಂದ ಆಗಬೇಕೆಂದಿಲ್ಲ. ಶರೀರದ ಒಳಗೆ ಯಾವ ಅಂಗದಲ್ಲಿ ಬೇಕಾದರೂ ಆಗಬಹುದು. ಆಗ ಅದನ್ನು ಆಂತರಿಕ ರಕ್ತಸ್ರಾವ ಎನ್ನುತ್ತೇವೆ .ಇದು ಬಹಳ ಅಪಾಯಕಾರಿ ಸ್ಥಿತಿ.
ಅಂಗಗಳಿಗೆ ಹಾನಿ:ಡೆಂಗ್ಯೂವೈರಸ್ ಗಳು ಚರ್ಮ ಹೃದಯ ಮಿದುಳು ಕಣ್ಣು ಇತ್ಯಾದಿ ಅಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ.ಅಂಗಗಳಲ್ಲಿ ನ ಮ್ಯೂಕಸ್ ಮೆಂಬ್ರೇನ್ ಅಥವಾ ಶ್ಲೇಷ್ಮಲ ಪೊರೆಗೆ ಹಾನಿಯನ್ನು ತರುತ್ತದೆ. ಈ ಕಾರಣಕ್ಕೆ ಆ ಅಂಗಗಳಲ್ಲಿ ನ ಕೋಶಗಳು ಒಡೆದುಕೊಳ್ಳುತ್ತದೆ ಅಥವಾ ಸಾಯುತ್ತವೆ. ರಕ್ತಸ್ರಾವ ಉಂಟಾಗುತ್ತದೆ ಹಾಗೂ ದೇಹದ ಒಳಗಿನ ಅವಕಾಶಗಳಲ್ಲಿ ನೀರು ತುಂಬಿಕೊಳ್ಳುತ್ತದೆ.
ಹೃದಯವು ವಿಶೇಷವಾದ ಮಾಂಸಪೇಶಿಗಳಿಂದ ಮಾಡಲ್ಪಟ್ಟಿದೆ. ಅವುಗಳು ಹಾನಿಗೆ ಒಳಗಾಗುವುದರಿಂದ ಹೃದಯವು ತನ್ನ ಕಾರ್ಯದಲ್ಲಿ ವ್ಯತ್ಯಯ ತೋರುತ್ತದೆ. ಹೃದಯವು ರಕ್ತವನ್ನು ಪಂಪ್ ಮಾಡುವ ಶಕ್ತಿ ಕುಂಠಿತವಾಗುತ್ತದೆ. ಕೆಲವೊಬ್ಬರಲ್ಲಿ ಇದು ಕೆಲವು ತಿಂಗಳು ಅಥವಾ ಒಂದು ವರ್ಷದಲ್ಲಿ ಮರಳಿ ಸಹಜ ಸ್ಥಿತಿಗೆ ಬರುತ್ತದೆ. ಆದರೆ ದುರದೃಷ್ಟಶಾಲಿಗಳಾದ ಕೆಲವರಲ್ಲಿ ಮತ್ತೆ ಸರಿಪಡಿಸಲಾಗದ ಅಪಾಯಕಾರಿ ಹಂತವನ್ನು ತಲುಪುತ್ತದೆ. ಅವರು ಜೀವನಪೂರ್ತಿ ಹೃದಯ ದೌರ್ಬಲ್ಯದಿಂದ ನರಳುತ್ತಾರೆ. ಹೃದಯದಲ್ಲಿನ ವಿದ್ಯುತ್ ಸಂವೇದನೆಗಳನ್ನು ಪ್ರವಹಿಸುವ ನರಗಳು ಹಾನಿಗೊಳಗಾಗುವದರಿಂದ ಅವರಲ್ಲಿ ಅಸಹಜವಾದ ನಾಡಿಬಡಿತ ಕಂಡುಬರುತ್ತದೆ.
ಅದೇ ರೀತಿ, ಮೂತ್ರಪಿಂಡಗಳು ಹಾನಿಗೊಳಗಾದ ರೆ ಮೂತ್ರಪಿಂಡಗಳ ವೈಫಲ್ಯ ಕಂಡು ಬರುತ್ತದೆ. ಕೇವಲ ಮೂತ್ರಜನಕಾಂಗ ವ್ಯವಸ್ಥೆಯ ತೊಂದರೆಯಿಂದ ಅಪಾಯ ಉಂಟಾಗುವುದಿಲ್ಲ: ಆದರೆ ಮೂತ್ರಪಿಂಡಗಳ ವೈಫಲ್ಯ ಮಾರಣಾಂತಿಕವಾಗಬಹುದು.
ಅಪರೂಪಕ್ಕೆ ಉಂಟಾಗುವ ದುಷ್ಪರಿಣಾಮಗಳು: ಕಣ್ಣುಗಳ ದೃಷ್ಟಿ ಶಾಶ್ವತವಾಗಿ ನಷ್ಟವಾಗಬಹುದು. , ಸೊಂಟದ ಕೆಳಗಿನ ಭಾಗಗಳು ತನ್ನ ಬಲವನ್ನು ಕಳೆದುಕೊಳ್ಳಬಹುದು, ಜಿ.ಬಿ .ಸಿಂಡ್ರೋಮ್ ಎಂಬ ವಿಶಿಷ್ಟ ಪಕ್ಷವಾತ ಲಕ್ಷಣಗಳು ಕಾಣಿಸಿಕೊಳ್ಳಬಹುದು, ಗರ್ಭಿಣಿಯರಲ್ಲಿ ಈ ವೈರಾಣು ಪ್ಲಾಸೆಂಟಾವನ್ನು ದಾಟಿ ಹೋಗುವ ಕಾರಣ ಗರ್ಭಸ್ಥ ವಾದ ಶಿಶುವಿಗೆ ಹಾನಿಯುಂಟುಮಾಡಬಹುದು. ಆದಕಾರಣ ಗರ್ಭಿಣಿಯರಲ್ಲಿ ವಿಶೇಷ ಜಾಗರೂಕತೆ ಅಗತ್ಯ.
ಲಕ್ಷಣಗಳು ಹಾಗೂ ಜಾಗ್ರತೆ:
1. ಮೂರರಿಂದ ಏಳು ದಿನಗಳಿಗಿಂತ ಹೆಚ್ಚು ದಿನ ಮುಂದುವರಿಯುವ ಜ್ವರ
2. ತೀವ್ರವಾದ ತಲೆನೋವು ಅಥವಾ ಕಣ್ಣುಗಳ ಹಿಂಬದಿಯ ಅತಿಯಾದ ನೋವು.
3. ಮಾಂಸಖಂಡಗಳು ಹಾಗೂ ಗಂಟುಗಳಲ್ಲಿ ನೋವು
4. ಹಸಿವೆ ಇಲ್ಲದಾಗುವುದು
5. ವಾಂತಿ ಮತ್ತು ಭೇದಿ
6. ಚರ್ಮದಲ್ಲಿ ಕೆಂಪಗಿನ ಗಂಧೆಗಳು ಕಾಣಿಸಿಕೊಳ್ಳುವುದು
7. ಮೂಗು ,ವಸಡು ಗಳಿಂದ ರಕ್ತಸ್ರಾವ, ರಕ್ತಮಿಶ್ರಿತ ಮೂತ್ರ ಅಂದರೆ ಕೆಂಪಾಗಿ ಇರುವ ಮೂತ್ರ, ಕೆಮ್ಮಿದಾಗ ಕಫದಲ್ಲಿ ರಕ್ತ ಬರುವುದು, ವಾಂತಿ ಮಾಡಿದಾಗ ರಕ್ತ ಬರುವುದು ,ಮಲವಿಸರ್ಜನೆಯಲ್ಲಿ ರಕ್ತ.
ಈ ಮೇಲಿನ ಲಕ್ಷಣಗಳು ಡೆಂಗುವಿನಲ್ಲಿ ನಮ್ಮನ್ನು ವಿಶೇಷ ಮುನ್ನೆಚ್ಚರಿಕೆ ಗೆ ಸೂಚನೆ ನೀಡುತ್ತವೆ.
ಮುಂಜಾಗ್ರತೆಗಳು:
1.ಸೊಳ್ಳೆಗಳ ಕಡಿತದಿಂದ ತಪ್ಪಿಸಲು ಶರೀರದ ಹೆಚ್ಚು ಭಾಗವನ್ನು ಬಟ್ಟೆಗಳಿಂದ ಮುಚ್ಚಿಕೊಳ್ಳಿ. ಉದ್ದ ತೋಳಿನ ಶರ್ಟ್, ಪ್ಯಾಂಟ್ ,ಸಾಕ್ಸ್, ಹ್ಯಾಟ್ , ಶೂಸ್ ಅಥವಾ ಟೋಪಿಗಳನ್ನು ಧರಿಸುವುದರಿಂದ ಇದನ್ನು ಸಾಧಿಸಬಹುದು.
2. ಸೊಳ್ಳೆಗಳನ್ನು ದೂರವಿಡುವ ರಿಪೆಲ್ಲಾಂಟ್ 10% ಡೈಈಥೈಲ್ ಟಾಲ್ಯುವಾಮೈಡ್ ಬಳಸಬಹುದು.
3. ಕ್ರಿಮಿನಾಶಕ ಸಿಂಪಡಿಸಿದ ಸೊಳ್ಳೆ ಪರದೆಗಳನ್ನು ಬಳಸಬಹುದು.
4. ಕಿಟಕಿಗಳಿಗೆ ಹಾಗು ದ್ವಾರಗಳಿಗೆ ಸೊಳ್ಳೆ ಪ್ರತಿಬಂಧಕ ಜಾಲರಿಗಳನ್ನು ಅಳವಡಿಸಬಹುದು.
5. ಅತಿಯಾದ ಸುಗಂಧದ್ರವ್ಯಗಳನ್ನು ಒಳಗೊಂಡ ಸಾಬೂನು ಅಥವಾ ಇತರ ಸುಗಂಧ ದ್ರವ್ಯಗಳನ್ನು ಬಳಸಬಾರದು .ಏಕೆಂದರೆ ಅವುಗಳು ಸೊಳ್ಳೆಗಳನ್ನು ಆಕರ್ಷಿಸುತ್ತವೆ.
6. ಸೊಳ್ಳೆಗಳನ್ನು ಸಾಯಿಸಬಹುದಾದ ಪರ್ಮಿತ್ರಿನ್ ಎಂಬ ರಾಸಾಯನಿಕ ದ್ರಾವಣದಿಂದ ಸಿಂಪಡಿಸಲ್ಪಟ್ಟ ಬಟ್ಟೆ ಹಾಗೂ ಶೂ ಗಳನ್ನು ಬಳಸಿ
7. ಮುಸ್ಸಂಜೆಯ ಹೊತ್ತಿನಲ್ಲಿ ಅಥವಾ ರಾತ್ರಿಯಾಗುವ ಮೊದಲು ಮನೆಯಿಂದ ಹೊರಗೆ ಇರುವುದನ್ನು ಆದಷ್ಟು ತಪ್ಪಿಸಿ
8. ಕೊಳಚೆ ಇಲ್ಲದ, ಶುಚಿಯಾದ , ನಿಂತ ನೀರಿನಲ್ಲಿ ಸೊಳ್ಳೆಗಳು ವಂಶಾಭಿವೃದ್ಧಿ ಮಾಡುತ್ತವೆ. ಆದಕಾರಣ ಎಲ್ಲಿಯೂ ಕೂಡ ನೀರು ನಿಲ್ಲದಂತೆ ಜಾಗ್ರತೆ ವಹಿಸಿ. ನೀರು ನಿಂತಿದ್ದ ಲ್ಲಿ ಅದು ಹರಿದು ಹೋಗಲು ಅನುವು ಮಾಡಿಕೊಡಿ. ಟೈಯರ್, ಒಡೆದ ಪ್ಲಾಸ್ಟಿಕ್ ಬಕೆಟ್ ,ಎಳನೀರಿನ ಚಿಪ್ಪು , ತೆಂಗಿನಕಾಯಿಯ ಗೆರಟೆ ಅಥವಾ ಅಂತಹ ಯಾವುದೇ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ .ಏಕೆಂದರೆ ಅವುಗಳಲ್ಲಿ ನೀರು ನಿಂತು ಸೊಳ್ಳೆಗಳ ಕುಣಿದಾಟಕ್ಕೆ ಒಂದು ರಂಗಸ್ಥಳ ವಾಗಬಹುದು. ಅವುಗಳಿಗೆ ಸೂಕ್ತ ವಿಲೇವಾರಿ ಮಾಡಿ.ಮನೆಯ ಟಾರಸಿಯಲ್ಲಿ ನೀರು ನಿಲ್ಲದಂತೆ ಸೂಕ್ತ ಜಾಗ್ರತೆವಹಿಸಿ.
9. ಈಗ ಮಾರುಕಟ್ಟೆಯಲ್ಲಿ ವಿದ್ಯುತ್ ಪ್ಲಗ್ ಗೆ ಸಿಕ್ಕಿಸುವಂತಹ ಸೊಳ್ಳೆ ನಾಶಕಗಳಿವೆ. ಅವುಗಳು ಕಪ್ಪು ಹೊಗೆಯನ್ನು ಉಂಟುಮಾಡುವುದಿಲ್ಲ. ಆದಕಾರಣ ಸುರಕ್ಷಿತವಾಗಿದೆ.
10. ಅಡಿಕೆ ಸಿಪ್ಪೆ ಅಥವಾ ಯಾವುದೇ ಅಂತಹ ವಸ್ತುಗಳನ್ನು ರಾಶಿ ಹಾಕಿ ಹೊಗೆಯನ್ನು ಉಂಟುಮಾಡಿ ಸೊಳ್ಳೆಗಳನ್ನು ತಡೆಗಟ್ಟುವ ಪ್ರಯತ್ನ ಒಳ್ಳೆಯದಲ್ಲ .ಏಕೆಂದರೆ ಅದರಿಂದ ಉಂಟಾಗುವ ಕಪ್ಪು ಹೊಗೆಯು ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರಬಹುದು ಹಾಗೂ ಕಾರ್ಬನ್ ಮಾನಾಕ್ಸೈಡ್ ಎಂಬ ವಿಷಾನಿಲದ ಕಾರಣದಿಂದ ನಮ್ಮ ಹಾಗೂ ಮನೆಯ ಮಕ್ಕಳ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರಬಹುದು.
ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ
B. A. M. S., D. Pharm., M. S. (Ayu)
ಆಯುರ್ವೇದ ತಜ್ಞ ವೈದ್ಯರು
ಪ್ರಸಾದ್ ಹೆಲ್ತ್ಕೇರ್ ,ಪುರುಷರಕಟ್ಟೆ ,ಪುತ್ತೂರು ಮೊಬೈಲ್ :9740545979