ಮಂಗಳೂರು: ಡೆಂಘೆ, ಮಲೇರಿಯಾ ಮುಂತಾದ ರೋಗಗಳನ್ನು ತಡೆಗಟ್ಟಲು ಶಾಲಾ-ಕಾಲೇಜುಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ.)ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಜಿಲ್ಲೆಯಲ್ಲೆಡೆ ಅದರಲ್ಲೂ ಮುಖ್ಯವಾಗಿ ಮಂಗಳೂರು ನಗರದೆಲ್ಲೆಡೆ ಡೆಂಘೆ ವ್ಯಾಪಕವಾಗಿ ಹರಡುತ್ತಿದೆ. ಡೆಂಘೆಗೆ ತುತ್ತಾಗಿ ಇತ್ತೀಚೆಗೆ ಸಾವು ಉಂಟಾಗಿದೆ. ನಗರದ ಖಾಸಗಿ ಶಾಲೆಯಲ್ಲಿ ಕಲಿಯುವ 7ನೇ ತರಗತಿಯ ವಿದ್ಯಾರ್ಥಿನಿ ಡೆಂಘೆಗೆ ಬಲಿಯಾಗಿದ್ದಾಳೆ. ಈ ಸಂದರ್ಭದಲ್ಲಿ ಜನರಿಗೆ ಡೆಂಘೆ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ತಿಳಿಸುವ ಅಗತ್ಯವಿದೆ. ಆ ಕೆಲಸ ಈಗಾಗಲೇ ನಡೆಯುತ್ತಿದೆಯಾದರೂ, ಜಿಲ್ಲೆಯೆಲ್ಲೆಡೆ ಇರುವ ಶಾಲಾ-ಕಾಲೇಜುಗಳಲ್ಲಿ ಈ ಕುರಿತು ಜಾಗೃತಿ ಅಭಿಯಾನ ನಡೆಸುವ ಅಗತ್ಯವಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ಸದಸ್ಯರು ಮನವಿ ಮಾಡಿದ್ದಾರೆ.
ಜಿಲ್ಲೆಯ ಹಲವು ಶಾಲಾ ಕಾಲೇಜುಗಳಲ್ಲಿ ಅಲ್ಲಲ್ಲಿ ನೀರು ನಿಂತಿರುವುದು ಕಂಡುಬರುತ್ತಿದೆ. ಉದಾಹರಣೆಗೆ ನಗರದ ಸರಕಾರಿ ಮಹಿಳಾ ಕಾಲೇಜು ಬಲ್ಮಠದಲ್ಲಿ ಮಳೆಯಿಂದಾಗಿ ನೀರು ಮೈದಾನದಲ್ಲಿ ತುಂಬಿಕೊಂಡಿದೆ. ಇದರಿಂದಾಗಿ ವಿದ್ಯಾರ್ಥಿನಿಯರಿಗೆ ಅಲ್ಲಿ ನಡೆಯಲೂ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿ ಜಿಲ್ಲೆಯ ಹಲವು ಶಾಲಾ-ಕಾಲೇಜುಗಳಲ್ಲಿವೆ. ಶಾಲಾ-ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಾರೆ. ವಿದ್ಯಾರ್ಥಿಗಳ ಅರೋಗ್ಯಕ್ಕೆ ತೊಂದರೆಯಾದರೆ ಅವರ ವಿದ್ಯಾರ್ಜನೆಗೆ ತೊಡಕು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಶಾಲಾ-ಕಾಲೇಜಿನ ವಾತಾವರಣ ಸ್ವಚ್ಛವಾಗಿಡುವುದು ಅತ್ಯಗತ್ಯ.
ಜಿಲ್ಲೆಯ ಜನರ ಹಾಗೂ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳ ಹಿತದೃಷ್ಟಿಗಾಗಿ ಜಿಲ್ಲಾಡಳಿತ ಡೆಂಗ್ಯೂ ಮಲೇರಿಯಾದಂತಹ ರೋಗಗಳನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯ ಶಾಲಾ-ಕಾಲೇಜುಗಳ ವಾತಾವರಣವನ್ನು ಸ್ವಚ್ಛವಾಗಿಡಲು ಕ್ರಮಕೈಗೊಳ್ಳಬೇಕಾಗಿ ವಿನಂತಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ.) ನ ದ. ಕ. ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ್, ಜಿಲ್ಲಾ ಕಾರ್ಯದರ್ಶಿ ವಿಕಾಸ್ ಕುತ್ತಾರ್, ಜಿಲ್ಲಾ ಉಪಾಧ್ಯಕ್ಷ ಸಿನಾನ್ ಬೆಂಗ್ರೆ, ಜಿಲ್ಲಾ ಸಮಿತಿ ಸದಸ್ಯರು ತಿಲಕ್ ಕುತ್ತಾರ್, ಸೋಮೇಶ್ ಪಂಜಿಮೊಗರು ಉಪಸ್ಥಿತರಿದ್ದರು.