Uncategorized

ತಂಬಾಕನ್ನು ಇನ್ನೂ ಏಕೆ ನಾವು ಸಾಕಬೇಕು…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

” ಮದ್ಯದಿಂದ ಬರುವ ಆದಾಯ ಅದು ವಿಷದ ಆದಾಯ”.
ಇದನ್ನು ಹೇಳಿದವರು ಬೇರಾರೂ ಅಲ್ಲ.
ನಾವೆಲ್ಲ ರಾಷ್ಟ್ರಪಿತ ಎಂದು ಆರಾಧಿಸುತ್ತಿರುವ ಮಹಾತ್ಮ ಗಾಂಧಿ.
ಇದು ಏನನ್ನು ಸೂಚಿಸುತ್ತದೆ?

Advertisement

“ಮದ್ಯ” ಎಂದರೆ ಮದ್ಯ ಮಾತ್ರ ಎಂದು ಅರ್ಥವಲ್ಲ. ನಮ್ಮ ಸಮಾಜದ ಸಾಂಸ್ಕೃತಿಕ ಹಾಗೂ ನೈತಿಕ ಅವನತಿಗೆ ಕಾರಣವಾಗುವ ಸಮಾನವಾದ ಇತರ ವ್ಯಸನಗಳು ಕೂಡಾ ಸೇರಿಕೊಳ್ಳುತ್ತವೆ. ಅದರಲ್ಲಿ ತಂಬಾಕು ಕೂಡ ಬಂತು.

ಆದರೆ ಇಡೀ ಸಮಾಜವನ್ನು ದುರ್ಗತಿಗೆ ತಳ್ಳ ಬಲ್ಲ ಇಂಥ ಗಂಭೀರವಾದ ಪಿಡುಗುಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೇ ಅಡಿಕೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಹಲುಬುತ್ತಾ ಇರುವುದು ವಿರೋಧಾಭಾಸವೇ ಸರಿ.” ಅಯ್ಯಯ್ಯೋ ಮಧ್ಯಪಾನ ನಿಷೇಧ ಸಾಧ್ಯವೇ ಇಲ್ಲ” ಎಂದು ಪರ್ವತ ತಲೆಮೇಲೆ ಬಿದ್ದವರಂತೆ ಯಾರಾದರೂ ಆಡಿಕೊಳ್ಳುವುದು ಕಂಡರೆ ನಿಜಕ್ಕೂ ನಗು ಬರುತ್ತದೆ.

ತಟ್ಟನೆ ಮದ್ಯ ಮಾರಾಟ ಇಲ್ಲದಿರುವ ದೇಶಗಳ ಹೆಸರುಗಳು ಪಥದಲ್ಲಿ ಹಾದುಹೋಗುತ್ತವೆ. ನಮ್ಮ ಮೇಲಿನ ನಂಬಿಕೆಯ ಕೊರತೆಗೆ ಹಾಗೂ ಆ ನಮ್ಮ ಇಚ್ಛಾ ಶಕ್ತಿಯ ದುರ್ಬಲತೆಗೆ ಸಮರ್ಥನೆಗಳನ್ನು ನೀಡುತ್ತಾ ಹೋಗುವುದು, ನಮ್ಮ ದೇಶವು ವ್ಯಸನಮುಕ್ತ ರಾಷ್ಟ್ರವಾಗುವುದನ್ನು ಅಸಾಧ್ಯವಾಗಿಸಿದೆ.

ಸಿಗರೇಟಿನ ಪ್ರತಿ ದಮ್ಮಿಗೆ ಪ್ರತಿಯೊಬ್ಬ ಧೂಮಪಾನಿಯು 7000 ರಾಸಾಯನಿಕಗಳನ್ನು ತನ್ನ ದೇಹದೊಳಕ್ಕೆ ತಳ್ಳುತ್ತಾನೆ ಅವುಗಳಲ್ಲಿ 70 ರಾಸಾಯನಿಕಗಳು ಕ್ಯಾನ್ಸರ್ ಕಾರಕಗಳು ಎಂಬ ಭಯಾನಕ ಸತ್ಯ ಯಾರಿಗೂ ತಿಳಿದಿಲ್ಲ. ಹಾನಿಕಾರಕ ವಿಷ ರಾಸಾಯನಿಕಗಳು ರಕ್ತಕ್ಕೆ ಸೇರಿದ ತಕ್ಷಣ ನಮ್ಮ ದೇಹದ ಕೋಶಗಳ ಒಳಗಿನ ಡಿಎನ್ಎ ಎಂಬ ಪ್ರಧಾನ ನಿರ್ವಾಹಕನನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಅನೇಕ ತೆರನಾದ ಕ್ಯಾನ್ಸರ್ ಗಳನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿವೆ. 10 ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳಲ್ಲಿ 9 ಪ್ರಕರಣಗಳು ತಂಬಾಕಿನ ಕಾರಣದಿಂದ ಬಂದಿರುತ್ತವೆ. ಮಾತ್ರವಲ್ಲ ತಂಬಾಕು ದೇಹದ ಯಾವ ಭಾಗದಲ್ಲಾದರೂ ಕ್ಯಾನ್ಸರ್ ಉಂಟು ಮಾಡಬಹುದು ಎಂಬ ಕಟು ಸತ್ಯ ಬಹುಮಂದಿಗೆ ತಿಳಿದಿಲ್ಲ. ಕೆಲವು ಜನ ತಿಳಿದಿದ್ದರೂ

” ಎಂದಾದರೊಂದು ದಿನ ಸಾಯಬೇಕು. ಬದುಕಿದ್ದಾಗ ಗಮ್ಮತ್ತು ಮಾಡುವ” ಎಂಬ ಧಾಟಿಯಲ್ಲಿ ಇರುತ್ತಾರೆ. ಆದರೆ ಇವರ ” ಮತ್ತು ” ,ಇವರ ಕುಟುಂಬದವರ ಗಮ್ಮತ್ತನ್ನು ಕಸಿದುಕೊಳ್ಳುತ್ತದೆ ಎಂಬ ಕಠೋರ ಸತ್ಯವೂ ಇವರ ಗೋಚರಕ್ಕೆ ಬರುವುದಿಲ್ಲ. ಅಧ್ಯಯನದ ಪ್ರಕಾರ 16 ವಿಧದ ಕ್ಯಾನ್ಸರ್ ಗಳು ನೇರವಾಗಿ ತಂಬಾಕಿನ ಕಾರಣದಿಂದಲೇ ಬರುವಂಥವು. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ವಿಶ್ವದಾದ್ಯಂತ ಪ್ರತಿ ವರ್ಷ 7 ಮಿಲಿಯ ಜನರು ತಂಬಾಕಿನ ಕಾರಣದಿಂದಲೇ ಸಾವಿನಂಚಿಗೆ ಹೋಗುತ್ತಾರೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇದರ ಪ್ರಕಾರ ಕ್ಯಾನ್ಸರ್ ಪ್ರಕರಣವು ಭಾರತದಲ್ಲಿ ಕಳೆದ 26 ವರ್ಷಗಳಲ್ಲಿ ಇಮ್ಮಡಿಗೊಂಡಿದೆ. ಸ್ತನ, ಗರ್ಭಕೋಶ ,ಬಾಯಿ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಗಳು ಸೇರಿ 41 ಶೇಕಡಾದಷ್ಟು ಕ್ಯಾನ್ಸರ್ ರೋಗದ ಹೊರೆಯು ತಂಬಾಕಿಗೆ ಸಂಬಂಧಿಸಿದ್ದು. ಶ್ವಾಸಕೋಶ, ಧ್ವನಿಪೆಟ್ಟಿಗೆ ,ಬಾಯಿ, ಗಂಟಲು ,ಮೂತ್ರಕೋಶ, ಮೇದೋಜೀರಕಗ್ರಂಥಿ ,ಜಠರ ,ಗರ್ಭಕೋಶದ ಕುತ್ತಿಗೆಯ ಭಾಗದ ಕ್ಯಾನ್ಸರ್ ಗಳು ಇದರಲ್ಲಿ ಸೇರಿವೆ. ಬಾಯಿಯ ಮೂಲಕ ತಂಬಾಕನ್ನು ಜಗಿಯುವುದರಿಂದ ಬಾಯಿ, ಅನ್ನನಾಳ, ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಗಳು ಉಂಟಾಗುತ್ತವೆ. ಆದರೆ ಸಂತೋಷದ ಸಂಗತಿಯೆಂದರೆ ಈ ಮೇಲೆ ಹೇಳಿದ ಕ್ಯಾನ್ಸರ್ ಗಳು ತಡೆಗಟ್ಟಬಹುದಾದ ಕಾರಣಗಳನ್ನು ಹೊಂದಿದೆ. ಕೆಟ್ಟ ಸುದ್ದಿ ಎಂದರೆ ಅರಿವು ಮೂಡಿಸುವಂತಹ ಕಾರ್ಯಾಗಾರಗಳು ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಮಾಡುವಂತಹ ಸಕಲ ಪ್ರಯತ್ನಗಳು ಕೂಡ ಭಾರತದಲ್ಲಿ ಸೋತು ಸುಣ್ಣವಾಗಿ ಹೋಗಿ, ತಂಬಾಕು ಸೇವನೆಯು ರಾಜಾರೋಷವಾಗಿ ಸಮಾಜದಲ್ಲಿ ವಿಜೃಂಭಿಸುತ್ತಿದೆ.

ಯುಕ್ತ ಕ್ರಮಗಳು: ಕಳೆದ ಹತ್ತು ವರ್ಷಗಳಲ್ಲಿ ಭಾರತವು ಸ್ವಾಗತಿಸ ಬಹುದಾದ ಕ್ರಮಗಳನ್ನು ತಂಬಾಕು ನಿರ್ಮೂಲನೆಗೆ ಕೈಗೊಂಡಿದೆ. ಈ ಕ್ರಮಗಳಲ್ಲಿ

  1. ತಂಬಾಕಿನ ಹಾನಿಕಾರಕ ಪರಿಣಾಮಗಳನ್ನು ಜಾಹೀರಾತುಗಳ ಮೂಲಕ ತೋರಿಸುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ., ನಿರ್ದಿಷ್ಟ ವಯಸ್ಸಿನ ಕೆಳಗಿನವರಿಗೆ ತಂಬಾಕು ಮಾರಾಟ ನಿಷೇಧ- ಇವುಗಳನ್ನು ಅಪರಾಧವಾಗಿ ಪರಿಗಣಿಸಿದೆ.
  2. ಅದೇ ರೀತಿ ,ಸಿನಿಮಾ ನಿರ್ಮಾಪಕರು ಹಾಗೂ ಕಲಾವಿದರ ಪ್ರತಿರೋಧದ ಹೊರತಾಗಿಯೂ, ಚಲನಚಿತ್ರಗಳಲ್ಲಿ ಧೂಮಪಾನದ ದೃಶ್ಯಗಳು ” ಆರೋಗ್ಯಕ್ಕೆ ಹಾನಿಕಾರಕ” ಎಂಬ ಕೆಳ ಬರಹವನ್ನು ಹೊಂದುವುದು ಕಡ್ಡಾಯವಾಗಿದೆ.
  3. ಅದರಲ್ಲೂ ಬಹುಮುಖ್ಯವಾಗಿ ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ 85 ಶೇಕಡ ಅಪಾಯದ ಎಚ್ಚರಿಕೆ ನೀಡುವ ಸಂಕೇತ ಚಿತ್ರಗಳು ನಮೂದಿಸಲ್ಪಡಬೇಕಾಗುತ್ತದೆ. ಇಂತಹ ಗ್ರಾಫಿಕ್ ಚಿತ್ರಗಳು ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿ ಅದರ ಸೇವನೆಯನ್ನು ಕಡಿಮೆ ಮಾಡುವಂತೆ ಒತ್ತಡ ಹಾಕುತ್ತವೆ. ಮಕ್ಕಳನ್ನು ಧೂಮಪಾನದ ಸಾಹಸಕ್ಕೆ ಕೈಹಾಕದಂತೆ ತಡೆಯುತ್ತವೆ.

ಭಾರತದಲ್ಲಿ ತಂಬಾಕು ನಿಷೇಧ ಪ್ರಾಮುಖ್ಯ ಏಕೆ?: ತಂಬಾಕು ಸೇವನೆಯ ವಿಷಯಕ್ಕೆ ಸಂಬಂಧಿಸಿದಂತೆ ಭಾರತವನ್ನು ಜಾಗತಿಕ ಮಟ್ಟದಲ್ಲಿ ಇತರ ರಾಷ್ಟ್ರಗಳೊಂದಿಗೆ ಹೋಲಿಸಿ ನೋಡಿದರೆ ನಾವೆಲ್ಲರೂ ಆತಂಕಗೊಳ್ಳುವ ವಿಷಯ ಕಂಡುಬರುತ್ತದೆ. ಚೀನಾವನ್ನು ಬಿಟ್ಟರೆ ತಂಬಾಕನ್ನು ಬೇರೆಬೇರೆ ರೂಪಗಳಲ್ಲಿ ಸೇವಿಸುವ ಹೆಚ್ಚು ಜನರಿರುವ ಎರಡನೆಯ ರಾಷ್ಟ್ರ ಭಾರತ.! ಸೇವನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಎರಡನೇ ಸ್ಥಾನ! ಭಾರತ ಮಾತೆ ತನ್ನ ಮಕ್ಕಳ ವಿವೇಕ ದಾರಿದ್ರ್ಯವನ್ನು ಕಂಡು ಎಷ್ಟು ಮರುಗುತ್ತಿರುವಳೋ ಏನೋ….

ಸಂಪೂರ್ಣ ತಂಬಾಕು ನಿಷೇಧದ ಹೊರತಾಗಿಯೂ ಬೇರೆ ದಾರಿಗಳು ಇವೆ: ತಂಬಾಕಿನ ಮೇಲಣ ತೆರಿಗೆಗಳು ಬಹು ಚರ್ಚೆಯ ಮತ್ತು ವಿಮರ್ಶೆಯ ವಸ್ತುವಾಗಿಬಿಟ್ಟಿದೆ .ತಂಬಾಕು ಉತ್ಪನ್ನಗಳ ಮೇಲೆ ವಿಧಿಸುವ ಅಧಿಕ ತೆರಿಗೆಯು ತಂಬಾಕು ಬಳಕೆಯನ್ನು ಕನಿಷ್ಠ ಮಿತಿಗಿಳಿಸುವ ತಂತ್ರವನ್ನು ಹೊಂದಿದೆ. ಯುವಕರಲ್ಲಿ ಹಾಗೂ ಬಡವರಲ್ಲಿ ಇದು ನೂರಕ್ಕೆ ನೂರರಷ್ಟು ಸತ್ಯ ಮತ್ತು ಪರಿಣಾಮಕಾರಿ. ಹೆಚ್ಚಿಸಿದ ತೆರಿಗೆಯಿಂದಾಗಿ ತಂಬಾಕಿನ ಬೆಲೆಯನ್ನು ಹತ್ತು ಶೇಕಡಾದಷ್ಟು ಹೆಚ್ಚಿಸಿದಂತಾಗಿ ,ತಂಬಾಕು ಬಳಕೆಯನ್ನು ಅಧಿಕ ಆದಾಯದ ರಾಷ್ಟ್ರಗಳಲ್ಲಿ ನಾಲ್ಕು ಶೇಕಡಾದಷ್ಟು ಹಾಗೂ ಕಡಿಮೆ ಆದಾಯದ ರಾಷ್ಟ್ರಗಳಲ್ಲಿ 5 ಶೇಕಡದಷ್ಟು ಕಡಿಮೆಗೊಳಿಸುತ್ತದೆ ಎಂದು ವರದಿಗಳು ತಿಳಿಸುತ್ತವೆ. ತೆರಿಗೆಯು ಎಷ್ಟು ಅಧಿಕ ಗೊಳ್ಳಬೇಕೆಂದರೆ ತಂಬಾಕಿನ ಮಾರಾಟ ಬೆಲೆಯು ತೀರಾ ಹೆಚ್ಚಳಗೊಳ್ಳಬೇಕು. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದ ಪ್ರಕಾರ ತೆರಿಗೆಯು ಕನಿಷ್ಠಪಕ್ಷ ಗರಿಷ್ಠ ಮಾರಾಟ ದರದ 70 ಶೇಕಡಾದಷ್ಟು ಹೆಚ್ಚಬೇಕು. ಆದರೆ ತಂಬಾಕು ಜಿಎಸ್ಟಿ ವ್ಯಾಪ್ತಿಯಲ್ಲಿ ಬರುವುದರಿಂದ , ಈ ರೀತಿ ಮಿತಿಮೀರಿ ತೆರಿಗೆಯನ್ನು ಹಾಕುವುದನ್ನು ನಿರ್ಬಂಧಿತ ಗೊಳಿಸಿದೆ. ಆದಕಾರಣ ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಗಿಂತಲೂ ಕಡಿಮೆ ತೆರಿಗೆಯನ್ನು ತಂಬಾಕಿಗೆ ಭಾರತದಲ್ಲಿ ವಿಧಿಸಲಾಗಿದೆ. ಆದುದರಿಂದ ಭಾರತವು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇನ್ನೂ ಹೆಚ್ಚಿಸಬೇಕಾಗಿದೆ.

ಇನ್ನೂ ಏನೇನು ಮಾಡಬಹುದು?:  ನಾವು ಧೂಮಪಾನ ತ್ಯಜಿಸುವವರಿಗೆ ಸಾಂಸ್ಥಿಕವಾದ ನೆರವನ್ನು ನೀಡಬೇಕು. ಅದಕ್ಕಾಗಿ ಕಾಲೇಜುಗಳಲ್ಲಿ ,ಆಸ್ಪತ್ರೆಗಳಲ್ಲಿ ,ಕಚೇರಿಗಳಲ್ಲಿ “ತಂಬಾಕು ತ್ಯಜಿಸಿ “ಎನ್ನುವ ಕೇಂದ್ರಗಳನ್ನು ಸ್ಥಾಪಿಸ ಬೇಕು. ತ್ಯಜಿಸುವ ಅಪೇಕ್ಷೆ ಇದ್ದವರಿಗೆ ವೃತ್ತಿಪರ ಸಹಾಯವನ್ನು ಹಾಗೂ ಸಲಹೆಗಳನ್ನು ನೀಡುವ ವ್ಯವಸ್ಥೆ ರಚನೆಯಾಗಬೇಕು. ಒತ್ತಡದಲ್ಲಿ ಇದ್ದವರಿಗೆ ಒತ್ತಡ ನಿವಾರಣೆಗೆ ಯೋಗ ಹಾಗೂ ಅಧ್ಯಾತ್ಮದ ಹಾದಿಯನ್ನು ತೆರೆದು ತೋರಿಸಬೇಕು. ಇದನ್ನು ಮಾಡಿದರೆ ಭಾರತವನ್ನು ಬಹುದೊಡ್ಡ ಅಪಾಯದಿಂದ ಪಾರು ಮಾಡಿದಂತೆ. ” ಲೈಫ್ ಇನ್ಶೂರೆನ್ಸ್” ಬದಲಿಗೆ ” ಲೈಫ್ ಎಶ್ಶೂರೆನ್ಸ್ ” ಎಂಬ ಮಹತ್ವದ ಕೊಡುಗೆಯನ್ನು ನೀಡಿದಂತಾಗುವುದು ಅಲ್ಲವೇ?

” ಕಾಯಿಲೆ ಬಂದಾಗ ಮಾತ್ರ
ಉಪಯೋಗಕ್ಕೆ ಬರುವುದು “ಇನ್ಶೂರೆನ್ಸ್”
ಕಾಯಿಲೆ ತಡೆಗಟ್ಟಲು ಮಾತ್ರ
ಬೇಕೇ ಬೇಕು ಜೀವನಕ್ಕೆ “ಅಶ್ಯೂರೆನ್ಸ್”
ಅದಕ್ಕಾಗಿ ಕೊಡಬಾರದು
ತಂಬಾಕು ಸೇವನೆಗೆ “ಲೈಸೆನ್ಸ್”
ಇಷ್ಟು ಮಾಡಿದರು ಹಠ ಹಿಡಿದು
ತಂಬಾಕು ಸೇವಿಸುವುದು “ನಾನ್ಸೆನ್ಸ್”
ಸಾರ್ವಜನಿಕ ಸ್ಥಳಗಳಲ್ಲಿ
ಹೊಗೆ ಬಿಟ್ಟರೆ ಎಲ್ಲರಿಗೂ “ನ್ಯೂಸೆನ್ಸ್ “
ಇನ್ನಾದರೂ ಮೂಡಿಬರಲಿ
ಹೊಸಭಾವ, ಹೊಸ ಬುದ್ಧಿ” ನ್ಯೂ” ” ಸೆನ್ಸ್”.

ತಂಬಾಕು ಸೇವನೆಯಿಂದ ಬಂದಷ್ಟೇ ಕಷ್ಟಗಳು, ತಂಬಾಕು ನಿಷೇಧದ ಹಾದಿಯಲ್ಲೂ ಬರುತ್ತವೆ! ಆದರೆ ಇದು ಹೇಗಿದೆಯೆಂದರೆ ಆರಂಭದಲ್ಲಿ ವಿಷ, ಪರಿಣಾಮದಲ್ಲಿ ಅಮೃತ……

 

ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ
B. A. M. S., D. Pharma., M. S. (Ayu)
ಆಯುರ್ವೇದ ತಜ್ಞ ವೈದ್ಯರು
ಪ್ರಸಾದ್ ಆಯುರ್ವೇದ ಹೆಲ್ತ್ ಕೇರ್
ಪುರುಷರಕಟ್ಟೆ ,ಪುತ್ತೂರು .ದ.ಕ.
ಮೊಬೈಲ್.9740545979

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

4 hours ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

19 hours ago

“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್

ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…

19 hours ago

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…

19 hours ago

ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…

19 hours ago