ಗುತ್ತಿಗಾರು: “ನಿಮಗೆ ಮತ ನೀಡಿ ಜನಪ್ರತಿನಿಧಿಗಳನ್ನಾಗಿ ಮಾಡಿದ್ದೇವೆ. ಈ ಪ್ರಮಾದ ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.ಆದರೆ ಇದೊಂದು ಬಾರಿ ತೀರಾ ಹದಗೆಟ್ಟ ರಸ್ತೆಯನ್ನು ಸರಿಪಡಿಸಿ.. ನಿಮ್ಮ ದಮ್ಮಯ್ಯ….” ಇದು ಗುತ್ತಿಗಾರು ಬಳಿಯ ಚತ್ರಪ್ಪಾಡಿಯಲ್ಲಿ ಕಂಡುಬಂದ ಪತ್ರ.
ಇಂತಹದ್ದೊಂದು ದಯನೀಯ ಸ್ಥಿತಿ ಯಾವ ಮತದಾರರಿಗೂ ಬರಬಾರದು. ಕಳೆದ ಸುಮಾರು 10 ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ….!. ಒಂದು ರಸ್ತೆ ಅಭಿವೃದ್ಧಿಗೆ ಅದೂ ಸುಮಾರು 6 ಕಿ ಮೀ ಉದ್ದದ ರಸ್ತೆ…!. ಇದು ಗುತ್ತಿಗಾರು-ಕಮಿಲ-ಬಳ್ಪ ರಸ್ತೆಯ ಅವ್ಯವಸ್ಥೆ. ಇದೀಗ ಗುತ್ತಿಗಾರಿನಿಂದ ಕಮಿಲ ಬಳ್ಪ ರಸ್ತೆಯಾಗಿ ತೆರಳುವ ಚತ್ರಪ್ಪಾಡಿ ಸೇರಿದಂತೆ ವಿವಿದೆಡೆ ವಾಹನದಲ್ಲಿ ಓಡಾಡಲೇ ಸಾಧ್ಯವಾಗದ ಸ್ಥಿತಿ ಇದೆ. ಕಳೆದ ಮಳೆಗಾಲದಿಂದಲೇ ಈ ಅವ್ಯವಸ್ಥೆ ಇದೆ. ಕಳೆದ ಬಾರಿಯೇ ಈ ಬಗ್ಗೆ ಜನರೇ ಎಚ್ಚರಿಸಿದ್ದರು. ಹೀಗಿದ್ದರೂ 25 ವರ್ಷಗಳಿಂದ ಸುಳ್ಯದ ಶಾಸಕರಾಗಿರುವ ಎಸ್ ಅಂಗಾರ ಅವರು ಗಮನಹರಿಸಿಲ್ಲ ಎನ್ನುವ ಆರೋಪ ಮತದಾರರದ್ದಾರೆ, ಇದು ಜಿಲ್ಲಾ ಪಂಚಾಯತ್ ರಸ್ತೆ. ಕಳೆದ ಬಾರಿ ಜಿಲ್ಲಾ ಪಂಚಾಯತ್ ಚುನಾವಣೆಯ ಸಮಯದಲ್ಲಿ ಹಾಗೂ ಅದಕ್ಕಿಂತಲೂ ಹಿಂದೆ ಈ ರಸ್ತೆ ದುರಸ್ತಿಗೆ ಬೇಡಿಕೆ ಇತ್ತು. ಹೀಗಿದ್ದರೂ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರೂ ಗಮನಹರಿಸಿಲ್ಲ. ಈಗಂತೂ ಜಿಲ್ಲಾ ಪಂಚಾಯತ್ ಸದಸ್ಯರು ಯಾರು ಎಂಬ ಪ್ರಶ್ನೆಯನ್ನೇ ಮತದಾರರು ಕೇಳಬೇಕಾದ ಸ್ಥಿತಿ ಬಂದಿದೆ ಎಂದು ರಸ್ತೆ ಬಳಕೆದಾರರು ಮಾತನಾಡುತ್ತಿದ್ದಾರೆ. ಇನ್ನು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಈ ರಸ್ತೆ ಬರುವುದಿಲ್ಲ. ಹೀಗಿದ್ದರೂ ಗ್ರಾಮ ಪಂಚಾಯತ್ ಆಡಳಿತ ತಕ್ಕಮಟ್ಟಿಗೆ ಸ್ಪಂದಿಸಿದೆ, ಆದರೆ ಅನು್ದಾನವಿಲ್ಲದೆ ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಹಾಗಿದ್ದರೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕಾದವರು ಯಾರು ? ಎಂಬುದು ಮತದಾರರ ಪ್ರಶ್ನೆ. ಈ ಕಾರಣದಿಂದಲೇ ಈಗ ಅಸಹಾಯಕ, ಹತಾಶ ಮತದಾರರು ಬ್ಯಾನರ್ ಅಳವಡಿಸಿದ್ದಾರೆ.
ಒಟ್ಟು ಸುಮಾರು 6 ಕಿಮೀ ಉದ್ದದ ರಸ್ತೆ ಇದು. ಇದರಲ್ಲಿ ಈಗಾಗಲೇ ಸುಮಾರು 1.5 ಕಿಮೀ ಉದ್ದದ ರಸ್ತೆ ಅಭಿವೃದ್ಧಿಯಾಗಿದೆ. ಶಾಸಕರು ಅನುದಾನ ನೀಡಿದ್ದಾರೆ. ಈಗ ಉಳಿದಿರುವುದು ಕೇವಲ 4.5 ಕಿಮೀ ರಸ್ತೆ. ಇದರಲ್ಲೂ ಸುಮಾರು 90 ಮೀಟರ್ ಈಗ ಕಾಂಕ್ರೀಟೀಕರಣಕ್ಕೆ ಅನುದಾನ ಲಭ್ಯವಾಗಿದೆ. ಇಡೀ ರಸ್ತೆ ಡಾಮರೀಕರಣಕ್ಕೆ ಕಳೆದ ವರ್ಷ ಇಲಾಖೆಯೇ ನೀಡಿದ ಅಂದಾಜುಪಟ್ಟಿಯಂತೆ 70 ಲಕ್ಷ ರೂಪಾಯಿ ಬೇಕಾಗಿದೆ. ಅನುದಾನ ಲಭ್ಯವಾದರೆ ರಸ್ತೆ ಅಭಿವೃದ್ಧಿ ಮಾಡಬಹುದು ಎಂದು ಇಲಾಖೆ ಹೇಳಿದೆ. ಹಾಗಿದ್ದರೂ ಅನುದಾನ ಲಭ್ಯವಾಗಿಲ್ಲ. 2019 ರ ಡಿಸೆಂಬರ್ ಅವಧಿಗೆ ಈ ಭಾಗದ ಜನರು ರಸ್ತೆ ದುರಸ್ಥಿಗೆ ಒತ್ತಾಯ ಮಾಡಿದಾಗ 80 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಡಿಸೆಂಬರ್ ಅಂತ್ಯದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ, ನಂತರ ಕಾಮಗಾರಿ ನಡೆಯಲಿದೆ ಎಂಬ ಭರವಸೆ ಇಲಾಖೆಯಿಂದಲೂ ಜನಪ್ರತಿನಿಧಿಗಳಿಂದಲೂ ಲಭ್ಯವಾಗಿತ್ತು. ಆದರೆ ಈಗ 2020 ಜನವರಿ ಅಂತ್ಯವಾದರೂ ಟೆಂಡರ್ ಆಗಿರುವ ಬಗ್ಗೆ ಮಾಹಿತಿ ಇಲ್ಲ…!. ಈ ರಸ್ತೆ ಮೇಲ್ದರ್ಜೆಗೇರುವ ಬಗ್ಗೆ ಆಗಾಗ ಹೇಳಲಾಗುತ್ತಿದೆ. 2016 ರಿಂದಲೇ ಈ ಪ್ರಸ್ತಾವನೆ ಇದ್ದು ಇಂದಿಗೂ ಅದೇ ಸ್ಥಿತಿಯಲ್ಲಿದೆ ಎಂದು ಇಲಾಖೆಯ ಮೂಲಗಳು ಹೇಳುತ್ತವೆ…!.
ಯಾಕಿಷ್ಟು ಅವಸರ , ತಾಲೂಕಿನಲ್ಲಿ ಒಂದೇ ರಸ್ತೆಯಲ್ಲ ಎಂಬ ಪ್ರಶ್ನೆ ಜನಪ್ರತಿನಿಧಿಗಳು ಸಹಜವಾಗಿಯೇ ಕೇಳುತ್ತಾರೆ. ಈ ರಸ್ತೆ ಎರಡು ಪ್ರಮುಖ ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಸ್ತೆ ಬಂದ್ ಆದಾಗ ಇದೇ ರಸ್ತೆ ಮೂಲಕ ವಾಹನಗಳು ಓಡಾಟ ನಡೆಸುತ್ತಿದೆ. ಮತದಾರರೂ ಈಗ ಯೋಚಿಸುತ್ತಿದ್ದಾರೆ ಕಳೆದ ಬಾರಿ ಲೋಕಸಭಾಚುನಾವಣೆ ಹಾಗೂ ಅದಕ್ಕೂ ಮುನ್ನ ಚುನಾವಣೆಯ ಸಮಯದಲ್ಲಿ ಚುನಾವಣೆಯ ನೀತಿ ಸಂಹಿತೆ ಕಾರಣದಿಂದ ರಸ್ತೆ ದುರಸ್ತಿಯಾಗುವುದಿಲ್ಲ, ಚುನಾವಣೆ ಮುಗಿದ ನಂತರ ಆಗುತ್ತದೆ ಎಂಬ ಭರವಸೆ ನೀಡಿದ್ದರು. ಅಂತಹ ಚುನಾವಣೆ 3 ಮುಗಿದರೂ ರಸ್ತೆ ಮಾತ್ರಾ ಹಾಗೆಯೇ ಉಳಿದುಕೊಂಡಿದೆ. ಏಕೆಂದರೆ ಲೋಕಸಭಾ ಚುನಾವಣೆಯ ನಂತರ 1 ಕೋಟಿ ರೂಪಾಯಿಯಲ್ಲಿ ಈಗ ಕಮಿಲದಿಂದ ಬಳ್ಪದವರೆಗೆ ರಸ್ತೆ ದುರಸ್ತಿಯಾಗಬೇಕಿತ್ತು….! ಇಂದಿಗೂ ರಸ್ತೆ ಸ್ಥಿತಿ ಹಾಗೆಯೇ ಇದೆ. ಅಂದು ಹೇಳಿದವರು ಈಗ ಮೌನವಾಗಿದ್ದಾರೆ… ಆಗುತ್ತದೆ ಎಂದಷ್ಟೇ ಹೇಳುತ್ತಾರೆ…! . ಆದರೆ ಜನರೇ ಹಲವು ಬಾರಿ ಶ್ರಮದಾನದ ಮೂಲಕ ದುರಸ್ತಿ ಮಾಡಿದರು.
ಇನ್ನೀಗ ಗ್ರಾಮ ಪಂಚಾಯತ್ ಚುನಾವಣೆ ಹತ್ತಿರವಾಗುತ್ತಿದೆ. ಚುನಾವಣೆ ಘೊಷಣೆಯಾದ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಯಾವುದೇ ಟೆಂಡರ್ ಹಾಗೂ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗುವುದಿಲ್ಲ. ಚುನಾವಣೆ ಮುಗಿಯುವ ಹೊತ್ತಿಗೆ ಮಳೆ ಆರಂಭವಾಗುತ್ತದೆ , ಹೀಗಾಗಿ ಈ ಬಾರಿಯೂ ರಸ್ತೆ ಅಭಿವೃದ್ಧಿ ನೆನೆಗುದಿಗೆ ಬೀಳದಂತೆ ಮತದಾರರೇ ಎಚ್ಚರಿಕೆ ವಹಿಸಿದ್ದಾರೆ. ರಸ್ತೆಯಲ್ಲಿ ಈ ಬಾರಿ ಯಾವುದೇ ರಾಜಕೀಯ ಇಲ್ಲದೆ ಒಂದಾಗುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸುಮಾರು 10 ವರ್ಷಗಳಿಂದ ಮತದಾರರ ಬೇಡಿಕೆ ಇದ್ದರೂ ಏಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆ. ಕೊನೆಯ ಬೇಡಿಕೆಯಾಗಿ ಈಗ ದಮ್ಮಯ್ಯ ಹಾಕಿದ್ದಾರೆ. ಈಗಲಾದರೂ ಇಲಾಖೆಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಾರಾ ?