ತಿರುವನಂತಪುರ: ಭಾರತದ ಕ್ರಿಕೆಟ್ ತಂಡದ ಮಧ್ಯಮ ವೇಗಿ ದೀಪಕ್ ಚಹಾರ್ ಮೂರು ದಿನಗಳಲ್ಲಿ ಎರಡನೇ ಬಾರಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಗಳಿಸುವ ಮೂಲಕ ತನ್ನ ಅಪೂರ್ವ ಫಾರ್ಮ್‌ನ್ನು ಮುಂದುವರಿಸಿದ್ದಾರೆ.
ಬಾಂಗ್ಲಾ ವಿರುದ್ಧ ರವಿವಾರ ನಾಗ್ಪುರದಲ್ಲಿ ನಡೆದ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ತನ್ನ ಮೊದಲ ಹ್ಯಾಟ್ರಿಕ್ ಪಡೆದಿದ್ದ ರಾಜಸ್ಥಾನದ ಬೌಲರ್ ದೀಪಕ್ ಚಹಾರ್ ಇಂದು ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ದೇಶಿಯ ಟೂರ್ನಮೆಂಟ್‌ನಲ್ಲಿ ಮತ್ತೊಮ್ಮೆ ಹ್ಯಾಟ್ರಿಕ್ ಗಳಿಸಿದರು. ಬಾಂಗ್ಲಾ ವಿರುದ್ಧ 7 ರನ್‌ಗೆ 6 ವಿಕೆಟ್ ಗಳಿಸಿದ್ದರು .
ರಾಜಸ್ಥಾನ ಮತ್ತು ವಿದರ್ಭ ತಂಡಗಳ ನಡುವೆ ನಡೆದ ಪಂದ್ಯವನ್ನು 13 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ದೀಪಕ್ ಚಹಾರ್ ನೆರವಿನಲ್ಲಿ ರಾಜಸ್ಥಾನ ತಂಡ ಎದುರಾಳಿ ವಿದರ್ಭವನ್ನು 13 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 99 ರನ್‌ಗಳಿಗೆ ನಿಯಂತ್ರಿಸಿತ್ತು.
ಚಹಾರ್ ಮೂರು ಓವರ್‌ಗಳ ಬೌಲಿಂಗ್ ನಡೆಸಿದ್ದರು. ಇದರಲ್ಲಿ ಒಂದು ಮೇಡನ್ ಓವರ್ ಆಗಿತ್ತು. ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಪಡೆದರು. ಇದರಲ್ಲಿ 4 ವಿಕೆಟ್‌ಗಳನ್ನು ಪಡೆದರು. ಇದರಲ್ಲಿ ಅಂತಿಮ ಮೂರು ಎಸೆತಗಳಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಹ್ಯಾಟ್ರಿಕ್ ಸಂಪಾದಿಸಿದರು.
ವಿದರ್ಭ 12 ಓವರ್‌ಗಳ ಮುಕ್ತಾಯಕ್ಕೆ 5 ವಿಕೆಟ್‌ಗಳ ನಷ್ಟದಲ್ಲಿ 93 ರನ್ ಗಳಿಸಿತ್ತು. 13ನೇ ಹಾಗೂ ಅಂತಿಮ ಓವರ್‌ನಲ್ಲಿ ದಾಳಿಗಿಳಿದ ಚಹಾರ್ ಮೊದಲ ಎಸೆತದಲ್ಲಿ ರಿಷಭ್ ರಾತೋಡ್(0) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಅದೇ ಓವರ್‌ನ 4ನೇ ಎಸೆತದಲ್ಲಿ ದರ್ಶನ್ ನಾಲ್‌ಕಾಂಡೆ (0) ಬಂದ ದಾರಿಯಲ್ಲೇ ವಾಪಸಾದರು. 5ನೇ ಎಸೆತದಲ್ಲಿ ಶ್ರೀಕಾಂತ್ ವಾಘ್(13) ವಿಕೆಟ್ ಒಪ್ಪಿಸಿದರು. 6ನೇ ಎಸೆತದಲ್ಲಿ ಅಕ್ಷಯ್ ವಾಡ್‌ಕರ್(0) ಖಾತೆ ತೆರೆಯದೆ ಬೌಲ್ಡ್ ಆಗುವುದರೊಂದಿಗೆ ಚಹಾರ್ ಹ್ಯಾಟ್ರಿಕ್ ಗಳಿಸಿದರು. ಇದರೊಂದಿಗೆ ದೀಪಕ್ ಚಹಾರ್ 3 ಓವರ್‌ಗಳಲ್ಲಿ 18 ರನ್‌ಗೆ 4 ವಿಕೆಟ್‌ಗಳನ್ನು ತನ್ನ ಖಾತೆಗೆ ಜಮೆ ಮಾಡಿದರು.
ವಿಜೆಡಿ ನಿಯಮದಂತೆ ಗೆಲುವಿಗೆ 13 ಓವರ್‌ಗಳಲ್ಲಿ 107 ರನ್ ಗಳಿಸಬೇಕಿದ್ದ ರಾಜಸ್ಥಾನ ತಂಡ 8 ವಿಕೆಟ್ ನಷ್ಟದಲ್ಲಿ 105 ಗಳಿಸುವ ಮೂಲಕ 1 ರನ್ ಅಂತರದಲ್ಲಿ ಸೋಲು ಅನುಭವಿಸಿತು. ದೀಪಕ್ ಚಹಾರ್ ಹ್ಯಾಟ್ರಿಕ್‌ನಿಂದ ವಿದರ್ಭವನ್ನು ರಾಜಸ್ಥಾನ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಮಣೆಂದರ್ ಸಿಂಗ್ 44 ರನ್, ಅಂಕಿತ್ ಲಾಂಬಾ 15ರನ್ ಮತ್ತು ಅರ್ಜಿತ್ ಗುಪ್ತಾ 12 ರನ್‌ಗಳ ಕೊಡುಗೆ ನೀಡಿದರೂ ತಂಡಕ್ಕೆ ಗೆಲುವು ದೊರೆಯಲಿಲ್ಲ. ಅಕ್ಷಯ್ ವಾಖರೆ 15ಕ್ಕೆ 3 ವಿಕೆಟ್ ಉಡಾಯಿಸಿ ರಾಜಸ್ಥಾನಕ್ಕೆ ಗೆಲುವು ನಿರಾಕರಿಸಿದರು.