ಬೆಳ್ಳಾರೆ: ದೈಹಿಕ ಆರೋಗ್ಯದ ಜೊತೆಗೆ ಸಾಮಾಜಿಕ ಆರೋಗ್ಯ ಬೆಳೆಸಿಕೊಳ್ಳುವುದು ಬಹುಮುಖ್ಯ. ಬಡವರ ಆರೋಗ್ಯದ ಸಮಸ್ಯೆಗಳಿಗೆ ಸ್ಪಂದಿಸಲು ರೋಟರಿ ಸಂಸ್ಥೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ವೈದ್ಯಕೀಯ ಶಿಬಿರಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ನೀಡುತ್ತಿರುವುದು ಅಭಿನಂದನಾರ್ಹ ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಹೇಳಿದರು.
ರೋಟರಿ ಕ್ಲಬ್ ಬೆಳ್ಳಾರೆ ಟೌನ್, ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ಸೇವಾ ಟ್ರಸ್ಟ್ ಮುರುಳ್ಯ, ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ಇವುಗಳ ಆಶ್ರಯದಲ್ಲಿ ಮುರುಳ್ಯದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರ, ನೇತ್ರ ತಪಾಸಣೆ, ಕನ್ನಡಕ ವಿತರಣೆ ಹಾಗು ಕ್ಯಾನ್ಸರ್ ರೋಗದ ಬಗ್ಗೆ ಅರಿವು ಕಾರ್ಯಕ್ರಮ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ಕ್ಯಾನ್ಸರ್ ರೋಗ ತಜ್ಞ ಡಾ| ಕಾರ್ತಿಕ್ ಕೆ.ಎಸ್ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಮಾಹಿತಿ ನೀಡಿದರು. ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಬಿ. ನರಸಿಂಹ ಜೋಶಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲೆ 3181ರ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ| ಪಿ.ಕೆ ಕೇಶವ, ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ಸೇವಾ ಟ್ರಸ್ಟ್ ಅಧ್ಯಕ್ಷ ಡಾ| ಪಿ ರಾಮಚಂದ್ರ ಭಟ್, ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ| ಪಿ. ಗೌರಿ ಪೈ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಕೆ.ಎಂ.ಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನಮೋಹನ ಡಿ.ಬಿ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಕಾರ್ಯದರ್ಶಿ ಗೋಪಾಲಕೃಷ್ಣ ಪಿ.ಎಸ್ ಉಪಸ್ಥಿತರಿದ್ದರು.
ಬೆಳ್ಳಾರೆ ಸದಾಶಿವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ ಸುಬ್ರಹ್ಮಣ್ಯ ಜೋಶಿ ಪ್ರಸ್ತಾವಿಸಿ, ಸ್ವಾಗತಿಸಿದರು. ಶ್ರೀ ಲಕ್ಷ್ಮೀ ನರಸಿಂಹ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಅನೂಪ್ ಬಿ ವಂದಿಸಿದರು. ರಾಜೇಶ್ ಅಯ್ಯನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಉಚಿತ ತಪಾಸಣೆ: ಶಿಬಿರದಲ್ಲಿ ನೂರಾರು ಮಂದಿಗೆ ಈಸಿಜಿ ಮೂಲಕ ಹೃದ್ರೋಗ ತಪಾಸಣೆ, ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆ, ಸ್ತ್ರೀರೋಗ ತಪಾಸಣೆ, ಸಾಮಾನ್ಯ ರೋಗಗಳ ತಪಾಸಣೆ, ನೇತ್ರ ತಪಾಸಣೆ, ಉಚಿತ ಕನ್ನಡಕ ವಿತರಣೆ ನಡೆಯಿತು.