ಸುಳ್ಯ: ಪ್ರಕೃತಿಯ ಬಲು ಅಪರೂಪದ ಕೊಡುಗೆ ಸುಳ್ಯ ತಾಲೂಕಿನ ತೊಡಿಕಾನದ ಪುರಾಣ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ಮತ್ಸ್ಯ ತೀರ್ಥ ನದಿಯಲ್ಲಿರುವ ಮಹಶೀರ್ ಮೀನುಗಳು. ಬೇಸಿಗೆ ಬಂದರೆ ಈ ಮೀನುಗಳಿಗೂ ಜಲಕ್ಷಾಮದ ಭೀತಿಯನ್ನು ತಂದೊಡ್ಡುತ್ತದೆ. ಬೇಸಿಗೆಯಲ್ಲಿ ಉಂಟಾಗುವ ನೀರಿನ ಅಭಾವದಿಂದಾಗಿ ಈ ಮೀನುಗಳನ್ನು ಸಂರಕ್ಷಿಸುವುದೇ ಒಂದು ಸವಾಲಾಗಿದೆ. ಈ ಸಮಸ್ಯೆಯನ್ನು ನೀಗಿಸಲು ಕಳೆದ ಮೂರು ವರುಷಳಿಂದ ದೇವಸ್ಥಾನದ ಆಡಳಿತ ಮಂಡಳಿ ಇವುಗಳಿಗೆ ಶುದ್ಧ ನೀರನ್ನು ಪೂರೈಸುವ ಕಾರ್ಯವನ್ನು ನಡೆಸುತಿದೆ. ಮಹಶೀರ್ ಮೀನುಗಳು ವಾಸಿಸುವ ಅಣೆಕಟ್ಟಿಗೆ ಪೈಪ್‍ಗಳ ಮೂಲಕ ನೀರನ್ನು ತಂದು ಅವುಗಳನ್ನು ಕಾರಂಜಿಯಂತೆ ಚಿಮ್ಮಿಸಿ ಅಣೆಕಟ್ಟಿನ ನೀರು ಬಿಸಿ ಆಗದಂತೆ ಎಚ್ಚರ ವಹಿಸಲಾಗುತ್ತದೆ. ಈ ವರ್ಷಗಳಿಂದ ಬೇಸಿಗೆಯಲ್ಲಿ ನದಿಯ ಹರಿವು ಕಡಿಮೆ ಆಗಿದ್ದರೂ ಕೆಲವು ಮಳೆ ಸುರಿದ ಕಾರಣ ಬಂದ ಕಾರಣ ನದಿಯ ನೀರಿನ ಹರಿವು ಕೂಡ ಸ್ವಲ್ಪ ಹೆಚ್ಚಿದೆ.
ಹಿಂದೆಲ್ಲ ಕಡು ಬೇಸಿಗೆ ಬಂದರೆ ನೀರಿನ ಕೊರತೆಯಿಂದ ಈ ಮೀನುಗಳು ವಿಲವಿಲನೆ ಒದ್ದಾಡುವ ಪರಿಸ್ಥಿತಿ ಉಂಟಾಗಿತ್ತು. ಮತ್ಸ್ಯತೀರ್ಥ ಹೊಳೆಗೆ ದೇವಸ್ಥಾನದ ಪಕ್ಕದಲ್ಲಿರುವ ಅಣೆಕಟ್ಟಿನಲ್ಲಿ ಶೇಖರಣೆಯಾದ ನೀರಿನಲ್ಲಿ ಮೀನುಗಳು ಓಡಾಡುತ್ತವೆ. ಬೇಸಿಗೆಯಲ್ಲಿ ಎಲ್ಲೆಡೆ ನದಿ, ಹಳ್ಳ, ಕೊಳ್ಳಗಳು ಬತ್ತುತ್ತಿರುವಂತೆಯೇ ಮತ್ಸ್ಯತೀರ್ಥ ಹೊಳೆಯಲ್ಲಿಯೂ ನೀರಿನ ಹರಿವು ಕಡಿಮೆಯಾಗುವುದು ಮೀನುಗಳಿಗೆ ಕಂಠಕಪ್ರಾಯವಾಗಿ ಪರಿಣಮಿಸುತ್ತಿತ್ತು. ಈ ಮೀನುಗಳಿಗೆ ಬದುಕಲು ತಂಪಾದ ಶುದ್ಧ ಹರಿಯುವ ನೀರು ಬೇಕಾಗಿದೆ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ಮೀನುಗಳಿಗೆ ನೀರಿನ ಕೊರತೆ ಎದುರಾಗುತ್ತದೆ. ಇದನ್ನು ತಪ್ಪಿಸಲು ಮೂರು ವರುಷಗಳಿಂದ ದೂರದ ದೇವರಗುಂಡಿ ಜಲಪಾತದಿಂದ ಪೈಪ್ ಮೂಲಕ ನೀರನ್ನು ತಂದು ನದಿಗೆ ಹರಿಯಬಿಡಲಾಗತ್ತದೆ ಮತ್ತು ಟ್ಯಾಂಕಿನಲ್ಲಿ ಶೇಖರಿಸಿ ನೀರನ್ನು ಕಾರಂಜಿಯಂತೆ ಅಣೆಕಟ್ಟಿಗೆ ಚಿಮ್ಮಿಸಿ ಮೀನುಗಳು ಇರುವ ನೀರನ್ನು ಕೂಲ್ ಮಾಡಲಾಗುತಿದೆ. ಜನರು ಅತ್ಯಂತ ಪೂಜ್ಯ ಭಾವದಿಂದ ಕಾಣುವ ಮತ್ತು ಪ್ರಕೃತಿಯ ಅಪರೂಪದ ಸಂಪತ್ತಾದ ಈ ಮಹಶೀರ್ ಮೀನುಗಳನ್ನು ಸಂರಕ್ಷಿಸಲು ದೇವಸ್ಥಾನದ ವತಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ದೇವರಗುಂಡಿಯ ನೀರನ್ನು ಪೈಪ್‍ಗಳ ಮೂಲಕ ನೀರನ್ನು ತಂದು ನದಿಗೆ ಹಾಯಿಸುವ ಕ್ರಮ ಕೈಗೊಂಡ ಮೇಲೆ ಮೀನುಗಳಿಗೆ ನೀರಿನ ಕೊರತೆ ಎದುರಾಗಿಲ್ಲ ಎನ್ನುತ್ತಾರೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ.
ಹಿಂದೆಲ್ಲ ಬೇಸಿಗೆ ಕಾಲದಲ್ಲಿ ನೀರಿನ ಕೊರತೆಯಿಂದ ದೇವರ ಮೀನುಗಳಿಗೆ ಕುತ್ತು ಬಂದ ಹಲವು ನಿದರ್ಶನಗಳಿವೆ. 1999 ಮತ್ತು 2003 ರಲ್ಲಿ ಭೀಕರ ಬರಗಾಲ ಅಪ್ಪಳಿಸಿ ನೀರಿನ ಕೊರತೆ ಉಂಟಾಗಿ ಮೀನನ ಸಂತತಿಗೆ ತೀವ್ರ ತೊಂದರೆ ಎದುರಾಗಿತ್ತು. ವಿಶಿಷ್ಟ ಪ್ರಭೇದದ ಈ ಮೀನು ಒಮ್ಮೆ ನಾಶವಾದರೆ ಮತ್ತೆ ಅವುಗಳು ವೃದ್ಧಿಯಾಗುವುದು ಬಲು ಕಷ್ಟ. ಈ ಮೀನುಗಳಿಗೆ ಬದುಕಲು ಕಲುಷಿತಗೊಳ್ಳದ ಹರಿಯುವ ನೀರು ಅತೀ ಅಗತ್ಯ.
`ದೇವರ ಮೀನುಗಳು’
ತೊಡಿಕಾನದ ಮಲ್ಲಿಕಾರ್ಜುನ ಕ್ಷೇತ್ರದ ಸಮೀಪದಲ್ಲಿಯೇ ಹರಿಯುವ ಮತ್ಸ್ಯತೀರ್ಥ ನದಿ ಮತ್ತು ಮತ್ಸ್ಯಸಂಕುಲವನ್ನು ಜನರು ಬಲು ಪೂಜನೀಯ ಭಾವದಿಂದ ಕಾಣುತ್ತಾರೆ. ಶಿವಲಿಂಗವನ್ನು ಕಣ್ವ ಮಹರ್ಷಿಗಳು ತೊಡಿಕಾನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಶಿವನು ಮಹಾವಿಷ್ಣುವನ್ನು ಮತ್ಸ್ಯವಾಹನವನ್ನಾಗಿಸಿ ಅಂತರ್‍ಮಾರ್ಗದಲ್ಲಿ ಧಾವಿಸಿ ಬಂದನು ಎಂಬ ಪ್ರತೀತಿ ಇದೆ. ಹೀಗೆ ಮೀನಾಗಿ ಬಂದ ಮಹಾವಿಷ್ಣು ದೇವಸ್ಥಾನದ ಬಳಿಯ ನದಿಯಲ್ಲಿ ನೆಲೆಸುತ್ತಾನೆ ಎಂಬುದು ನಂಬಿಕೆ. ಆದುದರಿಂದಲೇ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅರ್ಚನೆಯಾದ ನೈವೇದ್ಯವನ್ನು ಮೀನುಗಳಿಗೆ ಅರ್ಪಿಸಲಾಗುತ್ತದೆ. ಭಕ್ತರು ಮೀನುಗಳಿಗೆ ಅಕ್ಕಿ ಹಾಗು ಇತರ ಆಹಾರ ಪದಾರ್ಥಗಳನ್ನು ಹಾಕಿ ಕೃತಾರ್ಥರಾಗುತ್ತಾರೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…