ನವದೆಹಲಿ: ಹಳ್ಳಿಗಳಿಗೂ ಕೊರೊನಾ ವೈರಸ್ ಹರಡದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಯುತ್ತಿರುವ ವಿಡಿಯೋ ಕಾನ್ಫರೆನ್ಸ್ ನಲ್ಲಿ ಹೇಳಿದ್ದಾರೆ.
ಗ್ರಾಮೀಣ ಭಾಗಕ್ಕೆ ಕೊರೊನಾ ವೈರಸ್ ಹರಡದು ಎಂಬ ವಿಶ್ವಾಸ ಇದೆ, ಆದರೆ ಹರಡದಂತೆ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ. ವಲಸೆ ಕಾರ್ಮಿಕರಿಗೆ ಸಂಕಷ್ಟ ಇದೆ ನಿಜ, ಅವರು ತಮ್ಮ ಮನೆಗೆ ತೆರಳುವುದು ಮುಖ್ಯವಾಗಿದೆ. ಇದಕ್ಕಾಗಿ ಸಾಕಷ್ಟು ಮುಂಜಾಗ್ರತೆ ಕೈಗೊಂಡು ಊರುಗಳಿಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ, ಇದಕ್ಕಾಗಿಯೇ ಕೆಲವು ಬದಲಾವಣೆ ಮಾಡಲಾಯಿತು ಎಂದ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ಹರಡದಂತೆ ತಡೆಯುವಲ್ಲಿ ಭಾರತ ಇರುವರೆಗೆ ಯಶಸ್ವಿಯಾಗಿದೆ. ಇದು ಎಲ್ಲಾ ರಾಜ್ಯಗಳ ಸಿಎಂ ಗಳಿಂದ ಸಾಧ್ಯವಾಯಿತು ಎಂದು ಪ್ರಧಾನಿ ಹೇಳಿದರು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದರೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇದ್ದರೆ ದುರಂತ ಎದುರಾಗಲಿದೆ ಎಂದೂ ಇದೇ ವೇಳೆ ಎಚ್ಚರಿಸಿದರು.
ಮುಖ್ಯಮಂತ್ರಿಗಳ ಜೊತೆಗೆ ಸಂವಾದ ಮುಂದುವರಿದಿದ್ದು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ಡೌನ್ ಮುಂದುವರಿಕೆಗೆ ಒಲವು ತೋರಿದ್ದರೆ ಇನ್ನೂ ಕೆಲವು ರಾಜ್ಯದ ಮುಖ್ಯಮಂತ್ರಿಗಳು ಆಯಾ ರಾಜ್ಯಗಳ ಸಿಎಂಗಳಿಗೆ ಬಿಟ್ಟುಬಿಡಲು ಮನವಿ ಮಾಡಿದ್ದಾರೆ.
(ಮೂಲ : ANI )