ಹೊರಗೆ ಧಗಧಗಿಸುವ ಸುಡು ಬಿಸಿಲು, ಜೊತೆಗೆ ಕೊರೊನಾ ಬಿಸಿ. ಎಲ್ಲವನ್ನೂ ನಿಯಂತ್ರಿಸುವ ಪರಿಸ್ಥಿತಿ.
ಹತ್ತು ಹನ್ನೆರಡು ವರ್ಷಗಳ ಹಿಂದೆ ನಮ್ಮ ಹಳ್ಳಿಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು ಚಿಕೂನ್ ಗುನ್ಯಾ . ಅದರ ಪರಿಣಾಮವನ್ನು ಇಂದಿಗೂ ಅನುಭವಿಸುತ್ತಿದ್ದೇವೆ. ಜ್ವರದೊಂದಿಗೆ ಬಂದ ಗಂಟು ನೋವು, ಬೆನ್ನು ನೋವುಗಳಿಂದ ಮುಕ್ತಿಯೇ ಇಲ್ಲ. ಕೆಲವರು ನಿರಂತರವಾಗಿ ಸೇವಿಸಿದ ಪ್ಯಾರಾಸಿಟಮೋಲ್ ಹಾಗೂ ನೋವು ನಿವಾರಕ ಮಾತ್ರೆಗಳ ಪರಿಣಾಮದಿಂದ ತಮ್ಮ ಅಮೂಲ್ಯ ಅಂಗಾಂಗಗಳು ಘಾಸಿಗೊಳ್ಳುವಂತೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಸ್ಟೀರಾಯ್ಡ್ ಗಳ ಬಳಕೆಯನ್ನು ಅರಿವಿಲ್ಲದೆ ಬಳಸಿದ್ದಿದೆ. ಇವುಗಳು ದೇಹದ ಮೇಲೆ ಬೀರಿದ ಪರಿಣಾಮ ಮಾತ್ರ ಭೀಕರ. ಈ ಚಿಕೂನ್ ಗುನ್ಯಾ ನಮ್ಮ ಹಳ್ಳಿಗಳಲ್ಲಿ ಶ್ರಮಿಕ ವರ್ಗದ, ದಿನನಿತ್ಯ ಗದ್ದೆ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವವರಿಗೆ ಬಂದದ್ದು. ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದ್ದ ಈ ಜ್ವರ ಹಳ್ಳಿಗೆ ಹಳ್ಳಿಯನ್ನೇ ಮಲಗಿಸಿ ಬಿಟ್ಟಿತು. ಅಲ್ಲೋ ಇಲ್ಲೋ ಕೆಲವೇ ಕೆಲವು ಜನರು ಜ್ವರಕ್ಕೆ ತುತ್ತಾಗದೆ ಬಾಕಿಯಾಗಿದ್ದರು. ಕಿರಾತಕಡ್ಡಿ ಕಷಾಯ, ಅರಶಿನ ಕಷಾಯ, ಕಹಿ ಬೇವು ಕಷಾಯ ಹೀಗೆ ಯಾರು ಏನೇ ಹೇಳಿದರೂ ಮಾಡಿ ಕುಡಿದು ತಮ್ಮನ್ನು ಪ್ರಯೋಗಕ್ಕೆ ಒಡ್ಡುವ ಮನಸ್ಥಿತಿ ಯನ್ನು ಜನರು ತಲುಪಿದ್ದರು. ಜ್ವರ ಬಾರದೇ ಇದ್ದವರೂ ತೋಟಕ್ಕೆ ಹೋಗಲು ಹೆದರುವ ಪರಿಸ್ಥಿತಿ ಇತ್ತು. ಅಂದು ದೈಹಿಕವಾಗಿ ಮಾತ್ರವಲ್ಲ ಆರ್ಥಿಕವಾಗಿಯೂ ಬೃಹತ್ ಪ್ರಮಾಣದ ಹೊಡೆತ ಸಮಾಜದ ಮೇಲೆ ಬಿದ್ದಿತು. ದುಡಿದು ತಿನ್ನುವ ಕೈಗಳು ಕೆಲಸ ಮಾಡಲಾಗದೆ ಸಾಲಕ್ಕೆ ಕೈ ಒಡ್ಡುವ ಸಂದರ್ಭ ಎದುರಾಯಿತು. ಹಳ್ಳಿ ಜನರನ್ನು ಹೈರಾಣಾಗಿಸಿತ್ತು. ಸೊಳ್ಳೆಗಳೆಂದರೆ ಬೆಚ್ಚಿ ಬೀಳುವ ಸಂದರ್ಭ ಊರಿನಲ್ಲಿ ಎದುರಾಗಿತ್ತು. ಆ ದಿನಗಳಲ್ಲಿ ಸೊಳ್ಳೆ ಕಡಿತದಿಂದ ತಪ್ಪಿಸಿಕೊಂಡರೆ ಚಿಕೂನ್ ಗುನ್ಯಾದಿಂದ ಪಾರಾದಂತೆ ಎಂಬ ಭಾವನೆ. ಆದರೆ ಈಗ ಎದುರಾಗಿರುವ ಕರೊನಾ ನೇರವಾಗಿ ಗಾಳಿಯಲ್ಲಿ, ಸಂಪರ್ಕಕ್ಕೆ ಬಂದವರು ಸುಲಭವಾಗಿ ಈ ರೋಗಕ್ಕೆ ತುತ್ತಾಗಿಬಿಡುತ್ತಾರೆ.
ಈ ನಡುವೆ ಎಬೋಲ, ಸಾರ್ಸ್, ಹಕ್ಕಿ ಜ್ವರ, ಬಾವಲಿ ಜ್ವರ , ಡೆಂಗ್ಯೂ, ಬಂದು ಕಂಗೆಡಿಸಿದುವು. ಮಾಮೂಲಾಗಿ ಬರುತ್ತಿದ್ದ ಮಲೇರಿಯಾ, ಜಾಂಡೀಸ್, ನ್ಯುಮೋನಿಯಾಗಳು ಈ ಜ್ವರಗಳೊಂದಿಗೆ ಬಂದು ಬದುಕನ್ನು ಕಂಗೆಡಿಸುತ್ತಿವೆ.
ಈಗ ಕೆಲವು ದಿನಗಳಿಂದ ಕೇಳುತ್ತಿರುವ ಹೆಸರು ಕರೊನಾ(ಕೊವಿಡ್ 19). ಮನುಷ್ಯನಿಂದ ಮನುಷ್ಯ ನಿಗೆ ಹರಡುವ ಈ ವೈರಸ್‌ಗಳ ನಿಯಂತ್ರಣದತ್ತ ಜನರು ಜಾಗೃತರಾಗಿದ್ದರೆ ಇದು ಕಷ್ಟವಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುವ ಈ ವೈರಸ್ ನಿಂದ ಒಂದು ಗ್ಯಾಪ್ ಕಾಯ್ದುಕೊಳ್ಳುವ ಅಗತ್ಯವಿದೆ. ಒಂದು ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಬೇಕಾಗಿದೆ. ಇದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿ ಮೋದಿಯವರು ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ಮಾರ್ಚ್ 22 ರಂದು ಜನತಾ ಕರ್ಪ್ಯೂ ಸಾರಿದ್ದಾರೆ. ಜನರಿಂದ ಜನರಿಗಾಗಿ ಈ ಜನತಾ ಕರ್ಫ್ಯೂ. ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಜನರು ಮನೆಯಿಂದ ಹೊರಬಾರದೆ ಈ ಸವಾಲನ್ನು ಎದುರಿಸಲು ಸಿದ್ಧರಾಗಬೇಕು. ಸ್ವಯಂ ನಿಯಂತ್ರಣವನ್ನು ನಮಗೆ ನಾವೇ ವಿಧಿಸಿಕೊಳ್ಳುವ ಒಂದು ಅಮೂಲ್ಯ ಕಾರ್ಯ. ಕೊರೊನಾ ವೈರಸ್ ವಿರುದ್ಧದ ಹೋರಾಟ. ಆರೋಗ್ಯ ರಕ್ಷಣೆಯ ಕುರಿತು ಇದೇ ಮೊದಲ ಬಾರಿಗೆ ಕರ್ಫ್ಯೂ ವಿಧಿಸುವಂತಹ ಪರಿಸ್ಥಿತಿ ಈ ಕರೊನಾ ಮಹಾಮಾರಿ ತಂದೊಡ್ಡಿದೆ.
ಸ್ವಯಂ ರಕ್ಷಣೆಯ ಜವಾಬ್ದಾರಿಯತ್ತ ಯೋಚಿಸಬೇಕಾಗಿದೆ. ಈ ಸೋಂಕಿನ ತಡೆಗೆ ಸ್ವಚ್ಛತೆ ಕಾಯ್ದುಕೊಂಡಿರುವುದೇ ಮುಖ್ಯ. ಸೋಂಕಿತ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳುವ ಮೂಲಕ ನಮ್ಮನ್ನು ಕಾಪಾಡಿಕೊಳ್ಳಬೇಕಾಗಿದೆ. ಆಯುರ್ವೇದ ಪದ್ಧತಿಯಲ್ಲಿ ಉಪಯೋಗಿಸುವ ಕಷಾಯ, ಅರಿಷ್ಠಗಳ ಸೇವನೆ ,ಪೌಷ್ಟಿಕ ಆಹಾರಗಳ ಸೇವನೆಗಳಿಂದ ನಮ್ಮಲ್ಲಿ ಜೀವನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ನಮ್ಮಲ್ಲಿ ಜೀವ ನಿರೋಧಕ ಶಕ್ತಿ ಇದ್ದಾಗ ಈ ವೈರಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಬರುತ್ತದೆ. ಅದಕ್ಕಾಗಿ ನಮ್ಮ ಪುರಾತನ ನೈಸರ್ಗಿಕ ಆಹಾರ ಕ್ರಮಗಳತ್ತ ಮುಖ ಮಾಡುವ ಅಗತ್ಯ ಎದುರಾಗಿದೆ.
ಯಾರೂ ಕೂಡ ಕರೊನಾವನ್ನು ಲಘುವಾಗಿ ತೆಗೆದು ಕೊಳ್ಳುವಂತಿಲ್ಲ. ತಮಾಷೆಯ ವಿಷಯವಂತೂ ಖಂಡಿತಾ ಅಲ್ಲ. ಹಾಗೆಂದು ಹೆದರಲೂ ಬಾರದು. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಸರ್ಕಾರ ಹಮ್ಮಿಕೊಂಡ ವಿವಿಧ ಜಾಗೃತಿ ಕಾರ್ಯಕ್ರಮಗಳಿಗೆ ನಾವೆಲ್ಲರೂ ಕೈ ಜೋಡಿಸುವ ಕಾರ್ಯವನ್ನು ತಪ್ಪದೆ ಮಾಡೋಣ. ದೇಶದ ಒಳಿತಿಗಾಗಿ ನಮ್ಮ ಕಿಂಚಿತ್ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸ್ವಲ್ಪವೂ ಬೇಸರಿಸದೆ ಈ ಕಾರ್ಯದಲ್ಲಿ ಪಾಲ್ಗೊಳ್ಳೋಣ.
- ಅಶ್ವಿನಿ ಮೂರ್ತಿ ಅಯ್ಯನಕಟ್ಟೆ