ಆ ದಿನ ಮರೆಯಲಾರದ್ದು. ಎರಡು ದಿನಗಳು ಕಾಲೇಜಿಗೆ ರಜೆ ಇದ್ದುದರಿಂದ ಊರಿಗೆ ಹಬ್ಬಕ್ಕೆಂದು ಬಂದಿದ್ದ ನೆನಪು. ಮಾರನೇಯ ದಿನ ವಾಪಸ್ ಹೊರಡುವ ತಯಾರಿಯಲ್ಲಿದ್ದಾಗ ಗೆಳತಿಯ ಫೋನ್ ಕರೆ. ನಾಳೆ ಹೊರಡ ಕಾಲೇಜಿಗೆ ಹೊರಡ ಬೇಡ , ಗಲಾಟೆಯಾಗುವ ಸಾಧ್ಯತೆ ಇದೆ. ಪುತ್ತೂರು ನಲ್ಲಿ ಕರ್ಪ್ಯೂ ಜಾರಿಯಾಗಿದೆ. ಸುಮ್ಮನೆ ಇಲ್ಲಿ ಬಂದು ಸಿಕ್ಕಿ ಹಾಕಿಕೊಳ್ಳ ಬೇಡ. ಸರಿ ವಿಷಯ ಏನು , ಯಾಕೆ ಗಲಾಟೆ? ಎಂಬ ನನ್ನ ಪ್ರಶ್ನೆ ಗೆ ಆಕೆಯ ನಿಟ್ಟುಸಿರೇ ಉತ್ತರ. ಮತ್ತೆ ಮತ್ತೆ ಕೇಳಿದ ನನ್ನ ಪ್ರಶ್ನೆಗೆ ನೋಡು ನಮ್ಮ ವಯಸ್ಸಿನ ಹುಡುಗಿಯೊಬ್ಬಳ ಕೊಲೆಯಾಗಿದೆ. ಜಾಸ್ತಿ ಹೇಳಲು ನನ್ನಿಂದಾಗದು ನಾಳೆ ಪೇಪರ್ ನಲ್ಲಿ ಓದಿಕೊ ಎಂದು ಕರೆ ಕಟ್ ಮಾಡಿದಳು.
22 ವರುಷಗಳ ಹಿಂದಿನ ಘಟನೆ. ಆ ದಿನಗಳಲ್ಲಿ ಮೊಬೈಲ್, 24*7 ನ್ಯೂ ಸ್ ಚಾನೆಲ್(ಹಳ್ಳಿಯಲ್ಲಿ) ಗಳಿರಲಿಲ್ಲ. ಫೋನ್ ಗಳೂ ಮನೆ ಮನೆಗಳನ್ನು ತಲುಪಿರಲಿಲ್ಲ. ವಿಷಯಗಳೇನಿದ್ದರೂ ಪತ್ರಿಕೆಗಳ ಮೂಲಕ, ರೇಡಿಯೋ, ಟಿವಿಗಳಲ್ಲಿ ಆಯಾ ಸಮಯಕ್ಕೆ ಬರುತ್ತಿದ್ದ ವಾರ್ತೆಗಳಲ್ಲಿ ಬಿತ್ತರವಾಗುತ್ತಿದ್ದ ವಿಷಯಗಳನ್ನು ಕೇಳಿಸಿಕೊಳ್ಳ ಬೇಕಿತ್ತು. ಅಲ್ಲಿ ಸೂಚ್ಯ ವಾಗಿ ವಿಷಯದ ಪ್ರಸ್ತಾಪ ವಿತ್ತಷ್ಟೆ. ಮರುದಿನ ಪತ್ರಿಕೆಯಲ್ಲಿ ವಿಸ್ತಾರವಾಗಿ ಹಾಕಿ ಘಟನೆಯನ್ನು ಓದಿದಾಗ ಆ ಕ್ಷಣಕ್ಕೆ ಎದೆ ಝಲ್ ಎನಿಸಿದ್ದು ಇಂದಿಗೂ ನೆನಪಿದೆ.
ಸೌಮ್ಯ ಭಟ್ ಎಂಬ ಹೆಣ್ಣು ಮಗಳ ಘೋರ ಹತ್ಯೆಗೆ ಕಾರಣವಾದ ಬಗ್ಗೆ ಊರಿಗೆ ಊರೇ ಹೊತ್ತಿ ಉರಿಯಿತು. ಫಲ ಮಾತ್ರ ಶೂನ್ಯ. ಸೌಮ್ಯ ಭಟ್ ಳ ಬದುಕು ದಾರುಣ ಅಂತ್ಯವಾದುದು ಮಾತ್ರ ಸತ್ಯ. ಹೆತ್ತವರಿಗೊಂದು ಶಾಶ್ವತ ಗಾಯವನ್ನುಳಿಸಿ ಮರೆಯಾದ ಸೌಮ್ಯಳ ಸಾವಿಗೆ ನ್ಯಾಯವೂ ಮರೀಚಿಕೆಯಾಗುಳಿಯಿತು. ಕೊಂದ ಮೂರು ಗಂಟೆಯಲ್ಲಿ ಆ ಕಟುಕನನ್ನು ಹಿಡಿದರೂ ಶಿಕ್ಷೆಯಾಗದೆ ಪರಾರಿಯಾದವ ಇಂದಿಗೂ ನಾಪತ್ತೆ….!
ಈ 20 ವರುಷಗಳಲ್ಲಿ ಅದೆಷ್ಟೋ ಅತ್ಯಾಚಾರ , ಕೊಲೆಗಳಿಗೆ ನಮ್ಮ ನಾಡು ಮೂಕ ಸಾಕ್ಷಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಪ್ರಕರಣಗಳಲ್ಲೂ ಅಪರಾಧಗಳಿಗೇನೂ ಆಗದೆ ಬಚಾವಾಗುವ ಸಾಧ್ಯತೆಯೇ ಅಧಿಕ. ಒಂದೆರಡಲ್ಲ ಬರೋಬ್ಬರಿ 20 ಕ್ಕೂ ಅಧಿಕ ಮಹಿಳೆಯರನ್ನು ಸಯನೈಡ್ ತಿನ್ನಿಸಿ ಕೊಂದ ಪಾಪಿ ಸಯನೈಡ್ ಮೋಹನನಿಗಿನ್ನೂ ನೇಣಾಗಿಲ್ಲ. ಆ ಮಹಿಳೆಯರೇನು ಪಾಪ ಮಾಡಿದ್ದರು. ಗೊತ್ತು ಗುರಿಯಿಲ್ಲದೆ ಯಾವುದೋ ಊರಿನ ಶೌಚಾಲಯಗಳಲ್ಲಿ ಹೆಣವಾಗಿ ಬಿದ್ದರಲ್ಲ. ಹೆಚ್ಚಿನ ಮಹಿಳೆಯರ ಗುರುತುಪತ್ತೆಯಾಗದೆ ಅನಾಥ ಶವವೆಂದು ಫೋಲಿಸ್ ಠಾಣೆಗಳಲ್ಲಿ ದಾಖಲೆಯಲ್ಲುಳಿದವಷ್ಟೇ. ಕೊಲೆಮಾಡಿದವರೇ ಒಪ್ಪಿಕೊಂಡರೂ ಶಿಕ್ಷಯಿಲ್ಲದೆ ಪಾರಾಗುತ್ತಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಯೆಂದರೆ ತಪ್ಪಾಗಲಾರದು. ತಪ್ಪು ಮಾಡಿ ಸಿಕ್ಕಿ ಬಿದ್ದರೂ ಶಿಕ್ಷೆಯಿಲ್ಲದೆ ಪಾರಾಗುವುದು ಅಪರಾಧಿಗಳ ನಿರ್ಲಜ್ಜ ಮನಸ್ಥಿತಿಯ ಹೆಚ್ಚಳಕ್ಕೆ ಕಾರಣವಾಗಿದೆ. ದೇಶವೇ ತಲೆ ತಗ್ಗಿಸುವಂತೆ ದೆಹಲಿಯಲ್ಲಿ ನಡೆದ ನಿರ್ಭಯಾ ಹತ್ಯಾ ಪ್ರಕರಣದ ಆರೋಪಿಗಳಿಗೆ ಏನಾಯಿತು ? ಇನ್ನೂ ಉನ್ನಾವೋ ಸಂತ್ರಸ್ತೆಯನ್ನು ಬೆಂಕಿ ಹಾಕಿ ಬಿಟ್ಟರೆ ಒಂದು ದಿನ ನರಳಿ ಆಸ್ಪತ್ರೆ ಯಲ್ಲಿ ನಿಧನರಾದರು. ಅಲ್ಲಿಗೆ ಸಾಕ್ಷಿಯ ಕೊರತೆಯದು ಅಪರಾಧಿಗಳು ಬಿಡುಗಡೆಯ ಮಾರ್ಗ ಸುಲಭ…. !!
ಒಂದೆರಡು ದಿನ ಮಾತನಾಡಿ ಮರೆತುಬಿಡುತ್ತಾರೆ ಎನ್ನುವಂತ ಧೋರಣೆ ಅಕ್ಷರಶಃ ಸತ್ಯ. ಇಂತಹ ಘಟನೆಗಳು ನಡೆದಾಗ ನಡೆಯುವ ಪ್ರತಿಭಟನೆಗಳು, ಮುಂಬತ್ತಿ ಮೆರವಣಿಗೆಯಲ್ಲಿಗೆ ನಮ್ಮ ಹೋರಾಟ ಕೊನೆಯಾಗುತ್ತದೆ ಎಂಬುದು ದಿಟ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೈದರಾಬಾದ್ ನಲ್ಲಿ ಪೋಲಿಸ್ ರು ದಿಶಾ ಹಂತಕರಿಗೆ ಒಂದು ಗತಿ ಕಾಣಿಸಿದ್ದಾರೆ. ಘಟನೆ ನಡೆದ ಹತ್ತೇ ದಿನದಲ್ಲಿ . ಅನಿವಾರ್ಯವಾಗಿ ಅಪರಾಧಿಗಳನ್ನು ಎನ್ ಕೌಂಟರ್ ಮಾಡಿ, ನಾಲ್ಕು ಹಂತಕರನ್ನು ಕೊಂದು ಹಾಕಿದ್ದಾರೆ. ಅಲ್ಲಿಗೆ ದಿಶಾ ಪ್ರಕರಣಕ್ಕೆ ಒಂದು ರೀತಿಯಲ್ಲಿ ನ್ಯಾಯ ಸಿಕ್ಕಂತಾಯಿತು.
ಕಾನೂನು ಇರಬೇಕು, ಹೇಗೆಂದರೆ ತಪ್ಪುಮಾಡುವುದು ಬಿಡಿ ಆ ನಿಟ್ಟಿನಲ್ಲಿ ಯೋಚಿಸಲೂ ಹೆದರಬೇಕು ಅಂತಹ ಕಠಿಣ ಕಾನೂನಿನ ಅಗತ್ಯ ಬಹಳವಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಬದುಕಿನ ಹಕ್ಕು ಎಲ್ಲರಿಗೂ ಇದೆ. ದೇಶ ಬದಲಾಗಿದೆ. ಜೀವನ ಕ್ರಮ ಬದಲಾಗಿದೆ. ಎಲ್ಲೆಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಆದರೆ ಮಹಿಳೆಯ ಪರಿಸ್ಥಿತಿ 22 ವರ್ಷ ಗಳ ಹಿಂದೆ ಹೇಗಿತ್ತೋ ಹಾಗೆ ಇದೆ. ಯಾರೂ ಸುರಕ್ಷಿತರಲ್ಲ. 5 ರ ಬಾಲೆಯಾದರೂ ಸರಿ 80 ರ ವೃದ್ದೆಯಾದರೂ ಬಿಡರು. ಎಲ್ಲರ ಪರಿಸ್ಥಿತಿ ಯೂ ಒಂದೇ. ಯಾರು ಎಲ್ಲಿಯೂ ಸೇಫ್ ಅಲ್ಲ. ದೇಶದಲ್ಲಿ ಮೂಡುತ್ತಿರುವ ಬದಲಾವಣೆ ಮಹಿಳೆಯರ ಬದುಕಿನಲ್ಲೂ ಕಾಣಲಿ ಎಂಬ ನಿರೀಕ್ಷೆ ಯೊಂದಿಗೆ…………….
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ