ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೊನಾ ವೈರಸ್ ಪರೀಕ್ಷೆಯ ಎಲ್ಲಾ ವರದಿಗಳು ನೆಗೆಟಿವ್ ಬಂದಿದೆ. ಬುಧವಾರ 11 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಬುಧವಾರ 151 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಮೂಲಕ ಒಟ್ಟು 495 ಮಂದಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಇದುವರೆಗೆ ಒಟ್ಟು 6069 ಮಂದಿ 28 ದಿನಗಳ ಹೋಂಕ್ವಾರಂಟೈನ್ ಮುಗಿಸಿದ್ದಾರೆ. ಈಗ ಜಿಲ್ಲೆಯಲ್ಲಿ ಒಟ್ಟು 63 ಮಂದಿ ಕ್ವಾರಂಟೈನ್ ನಲ್ಲಿ ಇದ್ದಾರೆ.
ಬುಧವಾರ ಉಸಿರಾಟದ ತೊಂದರೆ ಇರುವ ಒಟ್ಟು 12 ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 941 ಮಂದಿ ಫಿವರ್ ಕ್ಲಿನಿಕ್ ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ರಾಜ್ಯದಲ್ಲಿ ಬುಧವಾರ 9 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 427 ಕ್ಕೆ ಏರಿಕೆಯಾಗಿದೆ. ಇಂದು ಬೆಳಗ್ಗೆ ಏಳು ಮಂದಿಗೆ ಹಾಗೂ ಸಂಜೆ ಇಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. ಇದುವರೆಗೆ 17 ಜನರು ಮೃತಪಟ್ಟಿದ್ದು, 131 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿಲ್ಲ. ಕೇರಳದಲ್ಲಿ 11 ಪ್ರಕರಣ ದೃಢಪಟ್ಟಿದೆ. ಕಾಸರಗೋಡು ಜಿಲ್ಲೆಯಲ್ಲಿ 26 ಮಂದಿ ಸೋಂಕಿತರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 172 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 146 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.