ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಬಂದ 90 ಪರೀಕ್ಷಾ ವರದಿಗಳಲ್ಲಿ 1 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಉಡುಪಿ ಜಿಲ್ಲೆ ಕೊರೊನಾ ವೈರಸ್ ಮುಕ್ತವಾಗಿ ಹಸಿರು ವಲಯವಾಗುತ್ತಿದೆ. ರಾಜ್ಯದಲ್ಲಿ ಶನಿವಾರ ಒಂದೇ ದಿನ 26 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500 ಕ್ಕೆ ಏರಿಕೆಯಾಗಿದೆ. ಕಾಸರಗೋಡಿನಲ್ಲಿ ಶನಿವಾರ ನೆಮ್ಮದಿಯ ದಿನವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 211 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಹೀಗಾಗಿ ಒಟ್ಟು 584 ಮಂದಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಶನಿವಾರ 16 ಮಂದಿಗೆ ಉಸಿರಾಟದ ಸಮಸ್ಯೆ ಇರುವ ಪ್ರಕರಣ ಕಂಡುಬಂದಿದೆ. ಜಿಲ್ಲೆಯ ಜ್ವರ ಕ್ಲಿನಿಕ್ ನಲ್ಲಿ 1406 ಮಂದಿ ಚಿಕಿತ್ಸೆ ಪಡೆದಿದ್ದು 42 ಮಂದಿ ನಿಗಾದಲ್ಲಿದ್ದಾರೆ.
ರಾಜ್ಯದಲ್ಲಿ ಶನಿವಾರ ಒಂದೇ ದಿನ 6 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿಯೇ 13 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಳಗಾವಿಯಲ್ಲಿ 9, ಮಂಡ್ಯದಲ್ಲಿ 1, ಮೈಸೂರಿನಲ್ಲಿ 1 ದಕ್ಷಿಣ ಕನ್ನಡ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಖಾಸಗಿ ವಾಹಿನಿಯ ಕ್ಯಾಮಾರಮ್ಯಾನ್ ಗೂ ಕೊರೊನಾ ಪಾಸಿಟಿವ್ ಕಂಡುಬಂದಿದ್ದುಅವರೊಂದಿಗೆ ಸಂಪರ್ಕ ಹೊಂದಿರುವ 30ಕ್ಕೂ ಹೆಚ್ಚು ಪತ್ರಕರ್ತರಿಗೆ ಹೋಂ ಕ್ವಾರಂಟೈನ್ ನಲ್ಲಿರುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ.
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರ ಗಡಿಯತ್ತ ಸಾಗಿದ್ದು, ಒಂದೇ ದಿನ 1,490 ಹೊಸ ಪಾಸಿಟಿವ್ ಪ್ರಕರಣ ದಾಖಲಾಗುವುದರೊಂದಿಗೆ ಶನಿವಾರ ದೇಶದಲ್ಲಿ ಸೋಂಕಿತರ ಸಂಖ್ಯೆ 24,942ಕ್ಕೆ ಏರಿಕೆಯಾಗಿದೆ.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 56 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ 779ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.