ಉಜಿರೆ: ಕಳೆದ 45 ವರ್ಷಗಳಲ್ಲಿ ಉತ್ತರಕನ್ನಡ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರ ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ನೀಡಿದ ಧರ್ಮಸ್ಥಳದ ಎಸ್.ಡಿ.ಎಂ.ಸಂಚಾರಿ ಆಸ್ಪತ್ರೆಯನ್ನು ಭಾನುವಾರ ದೇವಸ್ಥಾನದ ಎದುರುಗಡೆ ನಡೆದ ಸರಳ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಧಾರವಾಡದ ಎಸ್.ಡಿ.ಎಂ. ವಿಶ್ವವಿದ್ಯಾಲಯದ ನಿರ್ದೇಶಕ (ಆಡಳಿತ) ಸಾಕೇತ್ ಶೆಟ್ಟಿ ಅವರಿಗೆ “ಕೀ”ಯನ್ನು ನೀಡುವ ಮೂಲಕ ಆಸ್ಪತ್ರೆಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ಸದ್ಯ ಉಭಯ ಜಿಲ್ಲೆಗಳಲ್ಲಿ ಹಲವಾರು ಆಸ್ಪತ್ರೆಗಳಿದ್ದು ಆರೋಗ್ಯ ಸೇವೆ ಲಭ್ಯ ಇರುವುದರಿಂದ ಸಂಚಾರಿ ಆಸ್ಪತ್ರೆಯನ್ನು ಧಾರವಾಡಕ್ಕೆ ಹಸ್ತಾಂತರಿಸಿದ್ದು, ಅಲ್ಲಿ ಸಮುದಾಯ ಆರೋಗ್ಯ ಸೇವೆ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ಸೇವೆ ನೀಡಲಾಗುವುದು ಎಂದು ಹೆಗ್ಗಡೆಯವರು ತಿಳಿಸಿದರು.
ಹೇಮಾವತಿ ವಿ. ಹೆಗ್ಗಡೆಯವರು, ಸುಪ್ರಿಯಾ ಹರ್ಷೇಂದ್ರಕುಮಾರ್, ಶ್ರದ್ಧಾ ಅಮಿತ್, ಕುಮಾರಿ ಮಾನ್ಯ, ನಿಶ್ಚಲ್‍ಕುಮಾರ್, ಡಾ. ಮೃಣಾಲಿನಿ, ಸಂಚಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾರಾಯಣ ಪ್ರಭು ಮತ್ತು ಸಿಬ್ಬಂದಿ, ಎಸ್.ಡಿ.ಎಮ್. ಮೆಡಿಕಲ್ ಟ್ರಸ್ಟ್ ನ ಕಾರ್ಯದರ್ಶಿ ಶಿಶುಪಾಲ ಪೂವಣಿ, ಮಾಜಿ ಕಾರ್ಯದರ್ಶಿಗಳಾದ ಅನಂತಪದ್ಮನಾಭ ಭಟ್ ಮತ್ತು ಎ.ವಿ. ಶೆಟ್ಟಿ, ದೇವಳದ ಪಾರುಪತ್ಯಗಾರ್ ಲಕ್ಷ್ಮೀನಾರಾಯಣರಾವ್ ಉಪಸ್ಥಿತರಿದ್ದರು.