ಎಲಿಮಲೆ: ಧಾರ್ಮಿಕವಾದ ಹಾಗೂ ಸಾಮಾಜಿಕವಾದ ಹಲವು ಬಿಕ್ಕಟ್ಟುಗಳಿಗೆ ಸಾಹಿತ್ಯದಲ್ಲಿ ಪರಿಹಾರ ಇದೆ. ಆದರೆ ನಾವು ವಾಸ್ತವ ಬದುಕಿನಲ್ಲಿ ಪರಿಹಾರ ಹುಡುಕುತ್ತಿರುವುದರಿಂದ ಉತ್ತರ ಸಿಗುತ್ತಿಲ್ಲ ಎಂದು ಸಾಹಿತಿ ಗಿರೀಶ್ ರಾವ್ (ಜೋಗಿ) ಹೇಳಿದರು.
ಅವರು ಎಲಿಮಲೆ ಸರಕಾರಿ ಪ್ರೌಢ ಶಾಲೆಯಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಮ್ಮೇಳನ ಸ್ವಾಗತ ಸಮಿತಿ, ಎಲಿಮಲೆ ಸರಕಾರಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು 24 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಹಾಗೆ ನೋಡಿದರೆ ನಮ್ಮ ಎಲ್ಲಾ ಬಿಕ್ಕಟ್ಟಿಗೆ ಮತ್ತು ಸಂಕಟಗಳಿಗೆ ಕಾವ್ಯಗಳು, ಸಾಹಿತ್ಯ ಸಾಂತ್ವನ ನೀಡುತ್ತದೆ. ನಮ್ಮ ಶಿಕ್ಷಣ, ಉದ್ಯೋಗ ವ್ಯವಸ್ಥೆಯಿಂದ ಒಂದು ರೀತಿಯ ಅಪರಿಚಿತತೆಯನ್ನು ಮೈಮೇಲೆ ಎಳೆದುಕೊಂಡಿದ್ದೇವೆ ಎಂದ ಅವರು ತಂತ್ರಜ್ಞಾನದ ಕಾರಣದಿಂದ ಬದುಕಿನ ಸುಂದರ ಕಲ್ಪನೆಗಳಿಗೆ ಅಪರಿಚಿತರಾಗುತ್ತಿದ್ದೇವೆ. ಈ ಅಪರಿಚಿತತೆಯಿಂದ ಪಾರಾಗಲು ಸಾಹಿತ್ಯ ಮತ್ತು ಕಲೆಗಳು ಸೂತ್ರವನ್ನು ತಿಳಿಸುತ್ತದೆ ಎಂದರು. ನಮ್ಮ ನೋಡುವ ದೃಷ್ಟಿಯನ್ನು ಬದಲಿಸುವ ಮತ್ತು ನಮಗೆ ಗೊತ್ತಿಲ್ಲದ ಹೊಸ ಜಗತ್ತನ್ನು ಪರಿಚಯಸುತ್ತದೆ. ಚೌಕಟ್ಟನ್ನು ಮೀರಿ ಹೊಸ ತಲೆಮಾರು ಉತ್ತಮವಾದ ಬರಹದೆಡೆಗೆ ಆಕರ್ಷಿಸುತ್ತದೆ ಎಂದು ಹೇಳಿದರು. ಯಾರಿಂದಲೋ ಬಂದದನ್ನು ದಾಟಿಸುವ ಕೆಲಸವನ್ನಷ್ಟೇ ಮಾಡಿ ಡಿಜಿಟಲ್ ಕ್ರೌರ್ಯದ ಮಾನಸಿಕತೆ ಬೆಳೆದಿದೆ ಎಂದು ಅವರು ಹೇಳಿದರು. ಸಮಾಜದ ಕೆಡುಕನ್ನು ತಿದ್ದಲು ಸಾಹಿತಿಗಳಿಗೆ ಅವಕಾಶ ನೀಡದಿದ್ದರೆ ಸಮಾಜ ನಶಿಸಿ ಹೋಗುವ ಅಪಾಯವಿದೆ. ಆದುರಿಂದ ಸಾಹಿತಿಗೆ ಕಾರ್ಯನಿರ್ವಹಿಸಲು ಮುಕ್ತವಾದ ಅವಕಾಶ ನೀಡಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ಯಿಗೂ ಪ್ರಶ್ನಿಸುವ ಹಕ್ಕು ಇದೆ. ಅದಕ್ಕೆ ಸಮರ್ಪಕವಾದ ಉತ್ತರ ನೀಡಬೇಕು ಎಂದರು.
ಕೃ.ಶಾ.ಮರ್ಕಂಜ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್.ಅಂಗಾರ ಸ್ಮರಣ ಸಂಚಿಕೆ ಅನಾವರಣ ಮಾಡಿದರು. ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪೂರ್ವಾಧ್ಯಕ್ಷ ನಿತ್ಯಾನಂದ ಮುಂಡೋಡಿ ಅತಿಥಿಗಳಾಗಿ ಪಾಲ್ಗೊಂಡರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಲಲಿತಾಜ ಮಲ್ಲಾರ ಅನಿಸಿಕೆ ವ್ಯಕ್ತಪಡಿಸಿದರು.
ಪುಸ್ತಕ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿದ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಮರವಣಿಗೆ ಉದ್ಘಾಟಿಸಿದ ತಾಲೂಕು ಪಂಚಾಯತ್ ಸದಸ್ಯೆ ಯಶೋದಾ ಬಾಳೆಗುಡ್ಡೆ ಮಾತನಾಡಿದರು.
ಸ್ವಾಗತ ಸಮಿತಿ ಕಾರ್ಯದರ್ಶಿ ಶೈಲೇಶ್ ಅಂಬೆಕಲ್ಲು, ಕ.ಸಾ.ಪ. ಗೌರವ ಕೋಶಾಧಿಕಾರಿ ದಯಾನಂದ ಆಳ್ವ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಗುಡ್ಡೆಮನೆ, ಕಾರ್ಯದರ್ಶಿ ಜಯಂತ ತಳೂರು , ಜಿಲ್ಲಾ ಕ.ಸಾ.ಪ ವಕ್ತಾರ ನಿತ್ಯಾನಂದ ಕಾರಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ಸ್ವಾಗತಿಸಿದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ ಪ್ರಸ್ತಾವನೆಗೈದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಆಶಯ ನುಡಿಗಳನ್ನಾಡಿದರು. ಸುಳ್ಯ ತಾಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿ ಚಂದ್ರಶೇಖರ ಪೇರಾಲು ಸ್ಮರಣ ಸಂಚಿಕೆ ಸಂಪಾದಕ ನುಡಿಗಳನ್ನಾಡಿದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಮೆತ್ತಡ್ಕ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…