ಸುಳ್ಯ: ಸುಳ್ಯ ನಗರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ಅಂಗಾರ ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಮತ್ತು ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಅವರಿಗೆ ಸೂಚನೆ ನೀಡಿದ್ದಾರೆ.
ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ಆಧಿಕಾರಿಗಳನ್ನು ಕರೆಸಿ ಶಾಸಕರು ಮಾತುಕತೆ ನಡೆಸಿದರು. ನಗರದ ಬೀದಿದೀಪ ಸಮಸ್ಯೆ, ಸ್ವಚ್ಛತೆ, ಅನಧಿಕೃತ ಬ್ಯಾನರ್, ಕುಡಿಯುವ ನೀರು, ಚರಂಡಿ ರಿಪೇರಿ ಇತ್ಯಾದಿ ತುರ್ತು ಕೆಲಸಗಳನ್ನು ಕೂಡಲೇ ಮಾಡಬೇಕು. ನೂತನ ಚುನಾಯಿತ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಮತ್ತು ನ ಪಂ ಸದಸ್ಯ ವಿನಯ್ ಕುಮಾರ್ ಕಂದಡ್ಕ, ನಗರ ಕಾರ್ಯದರ್ಶಿ ಹರೀಶ್ ಬೂಡುಪನ್ನೆ, ಬೂಡು ರಾಧಾಕೃಷ್ಣ ರೈ ನ.ಪಂ ಸದಸ್ಯರು, ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್ ಉಪಸ್ಥಿತರಿದ್ದು ಸದಸ್ಯರು ವಿವಿಧ ವಾರ್ಡ್ ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಸಕರ ಮತ್ತು ಅಧಿಕಾರಿಗಳ ಗಮನಕ್ಕೆ ತಂದರು.
ಕುಡಿಯುವ ನೀರಿನ ಟ್ಯಾಂಕ್ ಗಳ ಸ್ವಚ್ಛತೆ ಕಾಪಾಡಲು, ಮನೆಗಳಿಂದ ಕಸವನ್ನು ಬೇರ್ಪಡಿಸಿ ಶೇಖರಿಸಲು ಸೂಚಿಸಲಾಯಿತು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಕಸವನ್ನು ಬೇರ್ಪಡಿಸಿ ನೀಡದಿದ್ದರೆ ಸಂಗ್ರಹಿಸುವುದು ಬೇಡ ಎಂದು ಸದಸ್ಯರು ಸಲಹೆ ನೀಡಿದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.