* ಸ್ಪೆಷಲ್ ಕರೆಸ್ಪಾಂಡೆಂಟ್ , ಸುಳ್ಯನ್ಯೂಸ್.ಕಂ
ಸುಳ್ಯ: ನಗರ ಪಂಚಾಯತ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸುಳ್ಯದಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿದ್ದು ಪಕ್ಷಗಳು ಸಮರ್ಥ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಆರಂಭಿಸಿದೆ.
ಸುಳ್ಯ ಕಾಂಗ್ರೆಸ್ ಪಕ್ಷ ಒಂದು ಹಂತದ ಸಭೆ ನಡೆಸಿ ನಗರ ಪಂಚಾಯತ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆದರೆ ಕೆಲವು ವಾರ್ಡ್‍ಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಉದ್ದ ಇರುವುದು ಪಕ್ಷದ ನೇತೃತ್ವದಕ್ಕೆ ತಲೆ ನೋವು ಉಂಟು ಮಾಡಿದೆ. ಹಲವು ಮಂದಿ ಸ್ಥಳೀಯ ನಾಯಕರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ವಾರ್ಡ್‍ಗಳಲ್ಲಿ ಮೂರಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದು ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸಲು ತೀವ್ರ ಕಸರತ್ತು ನಡೆಸಬೇಕಾಗಿ ಬಂದಿದೆ ಎನ್ನಲಾಗುತಿದೆ. ಒಬ್ಬರೇ ಆಕಾಂಕ್ಷಿಗಳಿರುವಲ್ಲಿ, ಮೀಸಲು ಇರುವ ಕೆಲವು ವಾರ್ಡ್‍ಗಳಲ್ಲಿ ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗಿದೆ. ನಾವೂರು, ಬೋರುಗುಡ್ಡೆ, ಬೀರಮಂಗಲ, ಕೆರೆಮೂಲೆ, ಬೂಡು ವಾರ್ಡ್‍ಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಇದರಿಂದ ಯಾವುದೇ ಗೊಂದಲಕ್ಕೆ ಎಡೆ ಮಾಡದೆ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಪಕ್ಷದ ನೇತೃತ್ವದ ಮುಂದೆ ಇದೆ. ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ಎಸ್.ಸಂಶುದ್ದೀನ್, ಮಾಜಿ ಸದಸ್ಯರಾದ ಕೆ.ಎಂ.ಮುಸ್ತಫಾ, ಕೆ.ಗೋಕುಲ್‍ದಾಸ್, ದಿನೇಶ್ ಅಂಬೆಕಲ್ಲು ಈ ಬಾರಿಯೂ ಸಂಭಾವ್ಯರ ಪಟ್ಟಿಯಲ್ಲಿದ್ದಾರೆ. ಅಲ್ಲದೆ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್, ಆರ್.ಕೆ.ಮಹಮ್ಮದ್, ಲಕ್ಷ್ಮಣ್ ಶೆಣೈ, ಶರೀಫ್ ಕಂಠಿ, ಭವಾನಿಶಂಕರ ಕಲ್ಮಡ್ಕ, ರಿಯಾಝ್ ಕಟ್ಟೆಕ್ಕಾರ್, ಧೀರಾ ಕ್ರಾಸ್ತಾ ಹೀಗೆ ಹಲವು ಮಂದಿ ಪ್ರಮುಖರ ಹೆಸರು ಆಕಾಂಕ್ಷಿತರ ಪಟ್ಟಿಯಲ್ಲಿದೆ. ಇವರಲ್ಲಿ ಯಾರು ಅಂತಿಮ ಪಟ್ಟಿಯಲ್ಲಿ ಇರುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.
ಕಳೆದ ಮೂರು ಬಾರಿಯೂ ನಷ್ಟವಾದ ಅಧಿಕಾರವನ್ನು ಈ ಬಾರಿಯಾದರೂ ಮರಳಿ ಪಡೆಯಬೇಕು ಎಂಬ ಸಂಕಲ್ಪದಲ್ಲಿ ಕಾರ್ಯ ಪ್ರವೃತ್ತರಾಗಿರುವ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಗಳ ತಂಡವನ್ನು ಕಣಕ್ಕಿಳಿಸಬೇಕಾಗಿ ಬಂದಿದೆ. ಆದುದರಿಂದ ಪಕ್ಷವು ಕಣಕ್ಕಿಳಿಸುವ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಬೇಕೆಂಬ ಸ್ಪಷ್ಟ ಸಂದೇಶವನ್ನು ಸ್ಥಳೀಯ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ನೀಡಿದೆ ಎಂದು ತಿಳಿದು ಬಂದಿದೆ.