ಸುಳ್ಯ: ಹೋಟೆಲ್ ತ್ಯಾಜ್ಯವನ್ನು ನದಿ ಬದಿಯಲ್ಲಿ ಎಸೆದವರಿಗೆ 5 ಸಾವಿರ ರೂ ದಂಡ ವಿಧಿಸಲಾಗಿದೆ. ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕಠಿಣ ನಿಲುವು ತಳೆದಿರುವ ತಾಲೂಕು ಆಡಳಿತ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಹೋಟೆಲ್ ತ್ಯಾಜ್ಯವನ್ನು ಕಾಂತಮಂಗಲದಲ್ಲಿ ಪಯಸ್ವಿನಿ ನದಿಗೆ ಎಸೆಯುತ್ತಿದ್ದಾರೆಂಬ ಮಾಹಿತಿ ಪಡೆದ ಸುಳ್ಯ ಪೋಲೀಸರು ಧಾಳಿ ನಡೆಸಿ ತ್ಯಾಜ್ಯ ಎಸೆದವರನ್ನು ವಶಕ್ಕೆ ಪಡೆದು ಕೇಸು ದಾಖಲಿಸಿ ತಹಶೀಲ್ದಾರ್ ಮುಂದೆ ಹಾಜರು ಪಡೆಸಿದರು. ಈ ಆರೋಪಿಗಳಿಗೆ ತಹಶೀಲ್ದಾರ್ 5 ಸಾವಿರ ರೂ ದಂಡ ವಿಧಿಸಿ ಆದೇಶ ನೀಡಿದರು.
ಕಾಂತಮಂಗಲದಲ್ಲಿ ಪಯಸ್ವಿನಿ ನದಿಯ ಬದಿಯಲ್ಲಿ ಹೋಟೆಲ್ ತ್ಯಾಜ್ಯ ಹಾಗೂ ಅದರ ಜತೆ ಕೋಳಿ ತ್ಯಾಜ್ಯ ವನ್ನು ಹಾಕಲಾಗುತ್ತಿತ್ತು. ವಾಹನದಲ್ಲಿ ತಂದು ಹೋಟೆಲ್ ತ್ಯಾಜ್ಯವನ್ನು ಎಸೆಯುವುದು ಗಮನಕ್ಕೆ ಬಂದ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದರು. ಎಸ್ಐ .ಎಂ.ಆರ್.ಹರೀಶ್ ನಿರ್ದೇಶನದ ಮೇರೆಗೆ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ತ್ಯಾಜ್ಯ ಎಸೆದ ಆರು ಮಂದಿಯನ್ನು ವಶಕ್ಕೆ ಪಡೆದು ಕೇಸು ದಾಖಲಿಸಿ ತಹಶೀಲ್ದಾರ್ ಎದುರು ಹಾಜರು ಪಡಿಸಿದರು.
ಸುಳ್ಯ ನಗರದ ಇತರೆಡೆಯಲ್ಲಿಯೂ ತ್ಯಾಜ್ಯ ಎಸೆಯುವ ಮಾಹಿತಿ ಇದೆ. ನಾವು ಎಲ್ಲ ಕಡೆ ನಿಗಾ ವಹಿಸಲಾಗುತ್ತಿದ್ದು ಕಸ ಎಸೆಯುವುದು ಗಮನಕ್ಕೆ ಬಂದರೆ ಸಾರ್ವಜನಿಕರು ಕೂಡಾ ಮಾಹಿತಿ ನೀಡಬೇಕು ಎಂದು ಪೋಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಎಚ್ಚರಿಸಿದ್ದಾರೆ.