ಸುಳ್ಯ: ನದಿಗಳು ಜೀವಜಾಲವನ್ನು ಪೋಷಿಸುತ್ತವೆ ಮತ್ತು ಬದುಕಿಸುತ್ತವೆ. ಆದುದರಿಂದ ನದಿಯನ್ನು ಮಾಲಿನ್ಯಗೊಳಿಸುವುದು ದೇಶದ್ರೋಹಕ್ಕೆ ಸಮಾನವಾದ ಅಪರಾಧ. ನದಿ ಮಲಿನಗೊಳಿಸುವವರನ್ನು ಪತ್ತೆಮಾಡಿ ಉಗ್ರಶಿಕ್ಷೆ ನೀಡಬೇಕು ಮತ್ತು ಅತಿ ಹೆಚ್ಚು ದಂಡ ವಸೂಲಿ ಮಾಡಬೇಕು ಎಂದು ಅರ್ಥಶಾಸ್ತ್ರಜ್ಞ ಡಾ. ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು.
ಅವರು ಕನ್ನಡ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ವತಿಯಿಂದ ಪೆರಾಜೆಯಲ್ಲಿ ಏರ್ಪಡಿಸಿದ ‘ನದಿ ಮಾಲಿನ್ಯ ತಡೆಗಟ್ಟುವುದು ಹೇಗೆ’ ಎಂಬ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡಿದರು. 1974ರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯಿದೆ ಹಾಗೂ 1984ರ ಪರಿಸರ ಸಂರಕ್ಷಣಾ ಕಾಯಿದೆಯ ಪ್ರಕಾರ ಜಲಮಾಲಿನ್ಯ ಉಗ್ರ ಶಿಕಾರ್ಹ ಅಪರಾಧ. ಸುಳ್ಯದ ಜೀವನದಿ ಪಯಸ್ವಿನಿ ಮಾಲಿನ್ಯದಿಂದಾಗಿ ಮೃತನದಿಯಾಗುವುದರಲ್ಲಿದೆ. ತಮ್ಮ ಕಣ್ಣೆದುರಲ್ಲೇ ಸಂಭವಿಸುತ್ತಿರುವ ಈ ಘೋರ ದುರಂತದ ಬಗ್ಗೆ ಜನನಾಯಕರು ಮತ್ತು ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತಾಳಿರುವುದು ಅಕ್ಷಮ್ಯ. ಇನ್ನು ಮುಂದಾದರೂ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಮುಂದಿನ ಪೀಳಿಗೆಗೆ ಪಯಸ್ವಿನಿಯನ್ನು ನಿರ್ಮಲವಾಗಿಸಿ ಕೊಡುಗೆ ನೀಡುವಂತಾಗಲಿ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ.ಕ. ಜಿಲ್ಲಾ ಸ್ವಾಭಿಮಾನಿ ಬಳಗದ ಅಧ್ಯಕ್ಷ ಮಹಮ್ಮದ್ ಕುಕ್ಕಪಳ್ಳಿ ಮಾತನಾಡಿ ನಮ್ಮ ಸಾಮಾಜಿಕರಿಗೆ ಪರಿಸರ ಮಾಲಿನ್ಯದ ಪರಿವೆಯೇ ಇಲ್ಲ. ನಾವು ಮುಂದಿನ ಪೀಳಿಗೆಗೆ ಎಂತಹ ಬರಡು ಭೂಮಿಯನ್ನು ಬಿಟ್ಟು ಹೋಗುತ್ತಿದ್ದೇವೆ ಎಂದರೆ ಮನುಕುಲದ ಅಂತ್ಯ ಸಮೀಪಿಸಿತೇನೋ ಎಂಬ ಭೀತಿ ಮೂಡುತ್ತಿದೆ ಎಂದರು.
ಉನೈಸ್ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಮಹಮ್ಮದ್ ಆಲಿ ಪೆರಾಜೆ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸುರೇಶ ಪೆರಮುಂಡ ಉಪಸ್ಥಿತರಿದ್ದರು. ಅಶೋಕ ಪೀಚೆಮನೆ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸೀತಾರಾಮ ಕದಿಕಡ್ಕ ಪ್ರಾರ್ಥನೆ ಮಾಡಿದರು. ಶರೀಫ್ ಪೆರಾಜೆ ವಂದಿಸಿದರು.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.