ಬೆಳ್ಳಾರೆ: ನಾವು ಬದುಕಿದ್ದಷ್ಟೂ ಕಾಲ ಏನನ್ನಾದರೂ ಸಾಧಿಸಲೇಬೇಕು. ಜೀವದಲ್ಲಿ ನಮ್ಮನ್ನು ನಾಲ್ಕು ಜನಮೆಚ್ಚಬೇಕು ಮತ್ತು ಗೌರವಿಸಬೇಕು. ಆಗ ನಮ್ಮ ಜನ್ಮಕ್ಕೆ ಸಾರ್ಥಕತೆ ದೊರೆಯುವುದು ಎಂದು ಚಲನಚಿತ್ರ ನಟ ಪ್ರವೀಣ್ ತೇಜ್ ಹೇಳಿದರು.
ಬೆಳ್ಳಾರೆ ಜೇಸಿಐ ಸಪ್ತಾಹ ಪ್ರಯುಕ್ತ ಕೋಟೆಮುಂಡುಗಾರು ದಕಜಿಹಿಪ್ರಾ ಶಾಲೆಯಲ್ಲಿ ಖ್ಯಾತ ವೈದ್ಯ ಡಾ| ನಾರಾಯಣ ಭಟ್ ಸ್ಮರಣಾರ್ಥ ನಡೆದ ಉಚಿತ ವೈದ್ಯಕೀಯ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾದ ಗೃಹರಕ್ಷಕದಳದ ದಕ್ಷಿಣ ಕನ್ನಡ ಜಿಲ್ಲಾ ಕಮಾಂಡೆಂಟ್ ಡಾ| ಮುರಳಿಮೋಹನ ಚೂಂತಾರು ಮಾತನಾಡಿ ಸಾರ್ವಜನಿಕರಿಗೆಂದೇ ಏರ್ಪಡಿಸುವ ಉಚಿತ ವೈದ್ಯಕೀಯ ಶಿಬಿರದ ಲಾಭವನ್ನು ಜನತೆ ಪಡೆದುಕೊಳ್ಳಬೇಕು. ಅರೋಗ್ಯವನ್ನು ಸದಾ ಸ್ವಾಸ್ಥ್ಯವಾಗಿಡಬೇಕು ಎಂದರು. ಡಾ| ನಾರಾಯಣ ಭಟ್ ಭಾವಚಿತ್ರಕ್ಕೆ ಅವರ ಪತ್ನಿ ಮಹಾಲಕ್ಷ್ಮೀ ಪುಷ್ಪಾರ್ಚನೆಗೈದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ಜೆಸಿಐ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ವಹಿಸಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸುಳ್ಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ವಿಶ್ವನಾಥ ರೈ ಕಳಂಜ, ಚರ್ಮರೋಗ ತಜ್ಞ ಡಾ| ನವೀನ್, ಕಳಂಜ ಯುವಕ ಮಂಡಲ ಅಧ್ಯಕ್ಷ ಲಕ್ಷ್ಮೀಶ ಕಜೆಮೂಲೆ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಗಂಗಾಧರ ತೋಟದಮೂಲೆ, ಜೇಸಿಐ ಪೂರ್ವಾಧ್ಯಕ್ಷ ಜಯರಾಮ ಉಮಿಕ್ಕಳ, ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧ.ಎಂ ಉಪಸ್ಥಿತರಿದ್ದರು.
ಚಲನಚಿತ್ರ ನಿರ್ಮಾಪಕ ಮುರಳಿಧರ್ ಪ್ರಸ್ತಾವಿಸಿ ಸ್ವಾಗತಿಸಿದರು. ಅಂದಾಜು ಒಂದೂವರೆ ಸಾವಿರ ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿದರು.