ಬೆಳ್ಳಾರೆ: ನಮ್ಮೆಲ್ಲರ ಒಗ್ಗೂಡಿಸುವ ಶಕ್ತಿ ದೇವರ ಆರಾಧನೆಗಿದೆ. ಭಕ್ತಿಯ ಆರಾಧನೆಗೆ ದೇವರು ಅಸ್ತು ಅನ್ನುತ್ತಾನೆ. ಭಕ್ತಿಗೆ ಮೀರಿದ ಶಕ್ತಿ ಬೇರೊಂದಿಲ್ಲ. ತಪಸ್ಸಿನ ಶಕ್ತಿ ಭಕ್ತಿಗೂ ಇದೆ ಎಂದು ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗಣರಾಜ ಕುಂಬ್ಳೆ ಹೇಳಿದರು.
ಬಾಳಿಲ ಮುಪ್ಪೇರ್ಯ ನಾಗರೀಕ ಸೇವಾ ಸಮಿತಿಯ ವತಿಯಿಂದ ನಡೆದ 36ನೇ ವರ್ಷದ ಗಣೇಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮುಖ್ಯ ಅತಿಥ ಸುಳ್ಯ ಶಾಸಕ ಎಸ್.ಅಂಗಾರ ಮಾತನಾಡಿ ಕೇವಲ ತೋರ್ಪಡಿಕೆಗಾಗಿ ರಾಷ್ಟ್ರಭಕ್ತಿಯನ್ನು ವಿಜೃಂಭಿಸಲಾಗುತ್ತಿದೆ. ಅದನ್ನು ಬಿಟ್ಟು ಪ್ರಾಮಾಣಿಕವಾಗಿ ನಾವೆಲ್ಲ ರಾಷ್ಟ್ರ ರಕ್ಷಣೆಗೆ ಸನ್ನದ್ಧರಾಗಬೇಕು. ನಮ್ಮ ತಾಯಿ ನಾಡು ರಕ್ಷಣೆಯ ಜವಾಬ್ದಾರಿ ನಮ್ಮದೇ ಎಂದರು.
ಕಾರ್ಯಕ್ರಮದಲ್ಲಿ ಚಿತ್ರಕಕಲಾ ಕ್ಷೇತ್ರದ ಸಾಧಕ ಉಮೇಶ್ ಕಾಪಡ್ಕ, ಅಂತರಾಷ್ಟ್ರೀಯ ಕ್ರೀಡಾಪಟು ಸುಭಾಷ್ ಕಂಡಿಕಟ್ಟ, ಬಾಳಿ ವಿದ್ಯಾಬೋಧಿನಿ ಪ್ರೌಢಶಾಲಾ ದೈಹಿಕ ಶಿಕ್ಷಕ ಹರಿಪ್ರಸಾದ್ ರೈ ಹಾಗು ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಸಮಿತಿಯ ಅಧ್ಯಕ್ಷ ಗಂಗಾಧರ ಮುಪ್ಪೇರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಭೂ ಬ್ಯಾಂಕ್ ಅಧ್ಯಕ್ಷ ಹಾಗು ಜಿಲ್ಲಾ ಪಂಚಾಯತ್ ಅರಂತೋಡು ಕ್ಷೇತ್ರದ ಸದಸ್ಯ ಹರೀಶ್ ಕಂಜಿಪಿಲಿ, ಬಾಳಿಲ ಗ್ರಾಮ ಪಂಚಾಯತ್ ಸದಸ್ಯೆ ವಾರಿಜ ಬೊಳಿಯಕಂಡ ಉಪಸ್ಥಿತರಿದ್ದರು. ಜಾಲ್ಸೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ, ರವೀಂದ್ರ ರೈ ಟಪಾಲುಕಟ್ಟೆರಮೇಶ್ ರೈ ಅಗಲ್ಪಾಡಿ ಹಾಗು ಸಹನ್ ರೈ ಸನ್ಮಾನ ಪತ್ರಗಳನ್ನು ವಾಚಿಸಿದರು.
ಸಮಿತಿಯ ಗೌರವಾಧ್ಯಕ್ಷ ಪಿಜಿಎಸ್‍ಎನ್ ಪ್ರಸಾದ್ ಪ್ರಸ್ತಾವಿಸಿದರು. ಸದಸ್ಯ ಶ್ರೀನಾಥ್ ರೈ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್ ಮುಪ್ಪೇರ್ಯ ವಂದಿಸಿದರು. ಉಪನ್ಯಾಸಕ ರಾಮ್‍ಪ್ರಸಾದ್ ಕಾಂಚೋಡು ಹಾಗು ರಾಜೇಶ್ ಅಯ್ಯನಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.