ನಮ್ಮ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ 80 ವರ್ಷ. ಅವರಿಗೆ ಹುಟ್ಟುಹಬ್ಬದ ಶುಭಾಶಯ….
ಸುಳ್ಯ: ಖ್ಯಾತ ಕವಿ, ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿಯವರಿಗೆ ಇಂದು 80 ವರುಷ. ತನ್ನ ಕವನಗಳ ಮೂಲಕ ಲಕ್ಷಾಂತರ ಕನ್ನಡಿಗರ ಮನಸೂರೆಗೊಂಡ ನಾಡಿನ ಹೆಮ್ಮೆಯ ಕವಿ ಚೊಕ್ಕಾಡಿಯವರಿಗೆ ಅವರ ಅಭಿಮಾನಿಗಳು, ಶಿಷ್ಯರು ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
(ಕೃಪೆ – ಲಹರಿ ಭಾವಗೀತೆಗಳು)
ನೂರಾರು ಭಾವಗೀತೆಗಳು, ಕವಿತೆಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಸಂಪನ್ನಗೊಳಿಸಿದ ಹೆಮ್ಮೆಯ ಕವಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತಿದೆ. 80ರ ಹರೆಯದಲ್ಲೂ ಮಗು ಮನಸಿನ, ಯುವಕರ ಉತ್ಸಾಹದಲ್ಲಿರುವ ಚೊಕ್ಕಾಡಿಯವರು ಸಾಹಿತ್ಯ ಕೃಷಿಯಲ್ಲಿ ತಲ್ಲೀನರಾಗಿದ್ದಾರೆ. ಅವರ ಕವನ ಸಂಕಲನ ‘ಕಲ್ಲು ಮಂಟಪ’ ಜನ್ಮ ದಿನದಂದೇ ಬಿಡುಗಡೆಯಾಗಲಿದೆ ಎಂಬುದು ಅವರ ಸಾಹಿತ್ಯ ಅಭಿಮಾನಿಗಳ ಸಂತಸವನ್ನು ಇನ್ನಷ್ಟು ಹೆಚ್ಚಿಸಲಿದೆ.
ಚೊಕ್ಕಾಡಿ ಬದುಕು-ಬರಹ: ವಿಶೇಷ ಕಾರ್ಯಕ್ರಮ ಇಂದು
ಸುಬ್ರಾಯ ಚೊಕ್ಕಾಡಿ ಅವರ ಜನ್ಮದಿನದ ಪ್ರಯುಕ್ತ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಫ್ರೆಂಡ್ಸ್ ಕ್ಲಬ್ ಪೈಲಾರು ಇವರ ಜಂಟಿ ಸಹಯೋಗದಲ್ಲಿ ಸುಬ್ರಾಯ ಚೊಕ್ಕಾಡಿಯವರ ಬದುಕು-ಬರಹಗಳ ಬಗ್ಗೆ ಅವಲೋಕನ ಎಂಬ ವಿಶೇಷ ಕಾರ್ಯಕ್ರಮವನ್ನು ಜೂನ್ 29 ಸೋಮವಾರ ಸಂಜೆ ಗಂಟೆ 5.00 ಕ್ಕೆ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಅವರ ತವರಿನಲ್ಲೇ ಗೌರವಿಸುವ ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತು ಮತ್ತು ಫ್ರೆಂಡ್ಸ್ ಕ್ಲಬ್ ಜೊತೆಯಾಗಿ ಹಮ್ಮಿಕೊಂಡಿದೆ. ಇದೇ ಸಂದರ್ಭ ಅವರ ಕವನ ಸಂಕಲನ “ಕಲ್ಲು ಮಂಟಪ” ಬಿಡುಗಡೆಯಾಗಲಿದೆ.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಚೊಕ್ಕಾಡಿಯವರ ಸಾಹಿತ್ಯ ಲೋಕದ ಪಯಣದ ಬಗ್ಗೆ ಮಾತನಾಡಿ ಅವರ ಕವನ ಸಂಕಲನ ಕಲ್ಲು ಮಂಟಪ ವನ್ನು ಹಿರಿಯ ಸಾಹಿತಿ, ಉಪನ್ಯಾಸಕ ಡಾ.ಪೂವಪ್ಪ ಕಣಿಯೂರು ಬಿಡುಗಡೆ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಯುವ ಬರಹಗಾರ-ಶಿಕ್ಷಕ ಅರವಿಂದ ಚೊಕ್ಕಾಡಿ ಹಾಗೂ ಬೆಳ್ತಂಗಡಿ ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಬೆಳಾಲು ಭಾಗವಹಿಸಲಿದ್ದಾರೆ. ಖ್ಯಾತ ಗಾಯಕ ರಮೇಶ್ ಮೆಟ್ಟಿನಡ್ಕ ಚೊಕ್ಕಾಡಿಯವರ ಭಾವಗೀತೆ ಗಳನ್ನು ಹಾಡಲಿದ್ದು,ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಸೀಮಿತ ಸಂಖ್ಯೆಯಲ್ಲಿ ಚೊಕ್ಕಾಡಿಯವರ ಅಭಿಮಾನಿಗಳು, ಶಿಷ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಸಾಹಿತ್ಯ ಪರಿಷತ್ತು ಪ್ರಕಟಣೆ ತಿಳಿಸಿದೆ.
ಜನ್ಸಾಲೆ – ಮುನಿಸು ತರವೇ ಮುಗುದೇ…..