ಸುಳ್ಯ: ಈ ದೇಶದಲ್ಲಿ ಸಾವಿರಾರು ಭಾಷೆಗಳಿದ್ದು ಹೆಚ್ಚಿನ ಭಾಷೆಗಳು ಅವನತಿಯ ಅಂಚಿನಲ್ಲಿದೆ. ಒಂದು ಭಾಷೆ ಅಳಿದರೆ ಒಂದು ಸಂಸ್ಕೃತಿ ಅಳಿದಂತೆ. ಹಾಗಾಗಿ ಇವುಗಳನ್ನು ರಕ್ಷಿಸಬೇಕಾದರೆ ವಿಧ್ಯಾರ್ಥಿಗಳು ಮತ್ತು ಯುವಕರು ಈ ಭಾಷೆಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಜ್ನಾನದೀಪ ವಿದ್ಯಾ ಸಂಸ್ಥೆಯ ಸಂಚಾಲಕ ಎ. ವಿ. ತೀರ್ಥ ರಾಮ ಹೇಳಿದ್ದಾರೆ.
ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗು ಸರಕಾರಿ ಪ್ರೌಢಶಾಲೆ ಎಲಿಮಲೆ ಇದರ ವತಿಯಿಂದ ನಡೆದ ವಿಧ್ಯಾರ್ಥಿ ಆಟಿ ಸಂಭ್ರಮ, ಅರೆಭಾಷೆ ಸಾಹಿತ್ಯ ಸಂಘ ಉದ್ಗಾಟನೆ ಹಾಗು ಶಾಲೆಗೆ ಪುಸ್ತಕ ಕೊಡುಗೆ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಪ್ರಧಾನ ಭಾಷಣ ಮಾಡಿದ ಅಕಾಡೆಮಿ ಸದಸ್ಯ ಎ.ಕೆ. ಹಿಮಕರ ಮಾತನಾಡಿ ಹಿಂದಿನ ಕಾಲದಲ್ಲಿ ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಅನಿವಾರ್ಯವಾಗಿ ಸೊಪ್ಪು ಗೆಡ್ಡೆ ಗೆಣಸುಗಳನ್ನು ತಿಂದು ತಮ್ಮ ಆರೋಗ್ಯವನ್ನು ಉಳಿಸಿಕೊಳ್ಳುತಿದ್ದರು.ಈಗ ಆಧುನಿಕ ಯುಗದಲ್ಲಿ ಇದು ಆಚರಣೆಯಾಗಿ ನಮ್ಮ ಮುಂದಿದೆ. ಹಿಂದಿನ ಕಾಲದ ಜನರು ಇದನ್ನು ಜೀವನಕ್ರಮವಾಗಿ ಪರಿಗಣಿಸಿದ್ದರು. ಈ ನಿಟ್ಟಿನಲ್ಲಿ ನಾವು ವೈಜ್ಞಾನಿಕ ಮನೋಭಾವ ವನ್ನು ಬೆಳೆಸಿಕೊಳ್ಳಲೇಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ. ಸಿ. ಜಯರಾಮ ಗ್ರಾಮೀಣ ಪ್ರದೇಶದ ಶಾಲೆಗಳಿಂದಲೇ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳಾಗಬೇಕು ಎಂದು ಹೇಳಿದರು. ತದನಂತರ ಆಟಿ ಕಳಂಜ ಪ್ರದರ್ಶನ ಸೋಭಾನೆ ಹಾಡು ಕವನವಾಚನ ರಸಪ್ರಶ್ನೆ ಹಾಗು ಆಟಿ ಖಾದ್ಯ ಪ್ರದರ್ಶನ ನಡೆಯಿತು.
ಸಮಾರಂಭದ ಕೊನೆಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಪುರುಷೊತ್ತಮ ಕಜೆ, ಅರೆಭಾಷೆ ಅಕಾಡೆಮಿ ಸದಸ್ಯಾರಾದ ಸುರೇಶ್ ಎಂ. ಎಚ್, ದಿನೇಶ್ ಹಾಲೆಮಜಲು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಚಂದ್ರಶೇಖರ್ ಪೇರಾಲ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರಶೇಖರ್, ಬೋಜಪ್ಪ ಗೌಡ, ವಿಶ್ವನಾಥ ನಂದಗೋಕುಲ, ಪವಿತ್ರ ಸುಳ್ಳಿ ಭರತ್ ಪಾರೆಮಜಲು ಹಾಗು ಪೂರ್ವ ವಿದ್ಯಾರ್ಥಿಗಳಾದ ಕಿರಣ್ ಗುಡ್ಡೆಮನೆ, ಜಯಂತ ತಳೂರು, ಜೀವನ್ ತಳೂರು,ರಂಜಿತ್ ಭಾಗವಹಿಸಿದ್ದರು.
ಗೋಪಿನಾಥ್ ಮೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ವಂದಿಸಿದರು. ಶಿಕ್ಷಕರಾದ ವಸಂತ್ ನಾಯಕ್, ತಿರುಮಲೇಶ್ವರಿ, ವಿರೂಪಾಕ್ಷ, ಸುಂದರ, ಶಶಿಕಲಾ, ಹಾಗು ವಾಸುದೇವ ಮಡಪ್ಪಾಡಿ ಸಹಕರಿಸಿದರು.