ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ನಾಗರಿಕ ಸೇವಾ ಪರೀಕ್ಷೆಗಳ ಬಗೆಗಿನ ಉಚಿತ ತರಬೇತಿ ಕೇಂದ್ರ ‘ಯಶಸ್’ ಇದರ ಈ ಬಾರಿಯ ಆಯ್ಕೆ ಪ್ರಕ್ರಿಯೆಯ ಮೊದಲ ಹಂತದ ಪ್ರವೇಶ ಪರೀಕ್ಷೆ ಡಿ.25ರಂದು ನಡೆಯಲಿದ್ದು ಆಸಕ್ತ ವಿದ್ಯಾರ್ಥಿಗಳಿಗೆ ಡಿ.20ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಒಂಬತ್ತನೆಯ ತರಗತಿಯಲ್ಲಿ ಕನಿಷ್ಟ 60% ಅಂಕ ಗಳಿಸಿ ಪ್ರಸ್ತುತ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ಪ್ರವೇಶ ಬಯಸುವ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು yashas.vivekanandaedu.org ನಿಂದ ಡೌನ್‍ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಸಂಬಂಧಿತ ಶಾಲೆಯ ಮುಖ್ಯ ಶಿಕ್ಷಕರ ಸಹಿಯೊಂದಿಗೆ ಯಶಸ್ ಕಛೇರಿಗೆ ಅಂಚೆ ಮೂಲಕ ತಲುಪುವಂತೆ ಕಳುಹಿಸಬಹುದು. ಅಥವಾ ಆನ್‍ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.
ಡಿ.25ರಂದು ನಡೆಯುವ ಈ ಪರೀಕ್ಷೆ ಪುತ್ತೂರಿನ ವಿವೇಕಾನಂದ ಪಿ.ಯು.ಕಾಲೇಜು, ಕಲ್ಲಡ್ಕದ ಶ್ರೀರಾಮ ಪದವಿಪೂರ್ವ ಕಾಲೇಜು, ಕಾಸರಗೋಡಿನ ಪೆರ್ಲದ ನಾಲಂದ ಕಾಲೇಜ್ ಆಫ್ ಆಟ್ರ್ಸ್, ಸೈನ್ಸ್ ಆಂಡ್ ಕಾಮರ್ಸ್, ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜು, ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜು, ಸುಳ್ಯದ ಶಾರದ ಪ್ರೌಢಶಾಲೆ, ಕಡಬದ ಸರಸ್ವತಿ ವಿದ್ಯಾಲಯ, ಮಣಿಪಾಲದ ಎಂ.ಐ.ಟಿ. ಹಾಗೂ ಬೆಳ್ತಂಗಡಿಯ ವಾಣಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 12.30 ವರೆಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಈ ಮೇಲಿನ ಯಾವುದೇ ಕೇಂದ್ರದಲ್ಲೂ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಇರುತ್ತದೆ.
ಅಂತಿಮ ಹಂತದ ಪರೀಕ್ಷೆಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನಾಗರಿಕ ಸೇವಾ ಕ್ಷೇತ್ರಗಳಾದ ಐಎಎಸ್, ಐಪಿಎಸ್ ಮೊದಲಾದವುಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ತರಬೇತಿ ನೀಡುತ್ತಿದೆ. ಅಂತಿಮವಾಗಿ ಆಯ್ಕೆಯಾಗುವ ಇಪ್ಪತ್ತೈದು ಮಂದಿ ವಿವೇಕಾನಂದ ಸಂಸ್ಥೆಯಲ್ಲಿ ತಮ್ಮ ಪಾರಂಪರಿಕ ಪಿ.ಯು., ಪದವಿ ಮೊದಲಾದ ಶಿಕ್ಷಣದೊಂದಿಗೆ ಯಶಸ್ ತರಬೇತಿಯನ್ನು ಪಡೆಯಲಿದ್ದಾರೆ. ಪ್ರತಿನಿತ್ಯ ಯಶಸ್ ತರಬೇತಿ ನಡೆಯಲಿದ್ದು ಅದು ಸಂಪೂರ್ಣ ಉಚಿತವಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ : 08251 298599, 9901852117 ಸಂಪರ್ಕಿಸಬಹುದಾಗಿದೆ.