ಚಿಕ್ಕಮಗಳೂರು: ಶಿಕ್ಷಣ ತಜ್ಞ ಕುವೆಂಪು ವಿವಿ ವಿಶ್ರಾಂತ ಕುಲಪತಿ ಸುಳ್ಯ ತಾಲೂಕಿನ ಚೊಕ್ಕಾಡಿ ಕೊಳಂಬೆ ಪ್ರೊ.ಕೆ.ಚಿದಾನಂದ ಗೌಡ, ಪುತ್ತೂರಿನ ಯಕ್ಷಗಾನ ಕಲಾವಿದ ಶ್ರೀಧರ ಭಂಡಾರಿ, ಬೆಳ್ತಂಗಡಿಯ ಭತ್ತದ ತಳಿ ಸಂರಕ್ಷಕ ಡಿ.ಕೆ.ದೇವರಾವ್ ಸಹಿತ 64 ಸಾಧಕ ಗಣ್ಯರು 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ನೇತೃತ್ವದಲ್ಲಿ ರಚಿಸಲಾಗಿದ್ದ 20 ತಜ್ಞರ ಸಲಹಾ ಸಮಿತಿ ಶಿಫಾರಸು ಮಾಡಿದ್ದ 128 ಸಾಧಕರ ಪಟ್ಟಿಯಲ್ಲಿ ಅಂತಿಮವಾಗಿ 29 ವಿವಿಧ ಕ್ಷೇತ್ರಗಳ 64 ಮಂದಿಯನ್ನು ರಾಜ್ಯ ಸರ್ಕಾರ ಗೌರವಕ್ಕೆ ಆಯ್ಕೆ ಮಾಡಿದೆ. ಅ. 25ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸ್ಕೃತರ ಆಯ್ಕೆ ಅಂತಿಮಗೊಳಿಸಲಾಗಿತ್ತು. ಪ್ರಮುಖವಾಗಿ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಡಾ. ಗುರುರಾಜ ಕರಜಗಿ, ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಎನ್. ಕುಮಾರ್, ಸಿತಾರ್ ವಿದ್ವಾನ್ ಛೋಟೆ ರಹಿಮತ್ ಖಾನ್, ಹಿರಿಯ ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್, ಅಂತಾರಾಷ್ಟ್ರೀಯ ಯೋಗ ಚಾಂಪಿಯನ್ ಖುಷಿ, ಹಿರಿಯ ಪತ್ರಕರ್ತ ಬಿ.ವಿ.ಮಲ್ಲಿಕಾರ್ಜುನಯ್ಯ ಮೊದಲಾದವರಿಗೆ ಪ್ರಶಸ್ತಿ ಲಭ್ಯವಾಗಿದೆ.
ಸಚಿವ ಸಿ.ಟಿ. ರವಿ ಸುದ್ದಿಗೋಷ್ಠಿಯಲ್ಲಿ ಪುರಸ್ಕೃತರ ಪಟ್ಟಿ ಪ್ರಕಟಿಸಿದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ರೂಪಿಸಿರುವ ಮಾರ್ಗಸೂಚಿಗಳ ಅನ್ವಯ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ನ.1ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೆತ್ತನೆ ಮಾಡಿದ 25 ಗ್ರಾಂ ಚಿನ್ನದ ಪದಕ ಒಳಗೊಂಡಿದೆ. ರಂಗಭೂಮಿ, ಜಾನಪದ ಹಾಗೂ ವಿವಿಧ ಕ್ಷೇತ್ರಗಳ ವಿಶಿಷ್ಠ ಸಾಧನೆಗೆ ಮೀಸಲಾದ ಸಂಕೀರ್ಣ ಕ್ಷೇತ್ರದಿಂದ ಗರಿಷ್ಠ ತಲಾ 6 ಸಾಧಕರು ಆಯ್ಕೆಯಾಗಿದ್ದರೆ, ವೈದ್ಯಕೀಯದಿಂದ ಐವರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ತಲಾ 4, ಕ್ರೀಡೆ ಹಾಗೂ ಹೊರನಾಡು ಕನ್ನಡಿಗರಿಗೆ 3, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಕೃಷಿ, ಯೋಗ, ಪರಿಸರ, ಸಂಘಸಂಸ್ಥೆಗೆ ತಲಾ 2, ಯಕ್ಷಗಾನ, ಬಯಲಾಟ, ಚಲನಚಿತ್ರ, ಕಿರುತೆರೆ, ಪತ್ರಿಕೋದ್ಯಮ, ಸಹಕಾರ, ನ್ಯಾಯಾಂಗ, ಗುಡಿ ಕೈಗಾರಿಕೆ ಹಾಗೂ ವಿಮರ್ಶಾ ಕ್ಷೇತ್ರದಿಂದ ಒಬ್ಬರನ್ನು ಪರಿಗಣಿಸಲಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.
29 ವಿವಿಧ ಕ್ಷೇತ್ರಗಳ 64 ಸಾಧಕರು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು, ನ.1ರಂದು ರಾಜ್ಯ ಸರ್ಕಾರ ಪ್ರಶಸ್ತಿ ವಿತರಿಸಿ ಗೌರವಿಸಲಿದೆ. ಸಾಹಿತ್ಯ, ರಂಗಭೂಮಿ, ಜಾನಪದ, ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಶಿಕ್ಷಣ, ಸಂಕೀರ್ಣ, ವೈದ್ಯಕೀಯ, ಕ್ರೀಡೆ, ಹೊರನಾಡು ಕನ್ನಡಿಗರು, ಸಮಾಜಸೇವೆ, ಕೃಷಿ, ಯೋಗ, ಪರಿಸರ, ಯಕ್ಷಗಾನ, ಬಯಲಾಟ, ಚಲನಚಿತ್ರ, ಕಿರುತೆರೆ, ಪತ್ರಿಕೋದ್ಯಮ, ಸಹಕಾರ, ನ್ಯಾಯಾಂಗ, ಸಂಘಸಂಸ್ಥೆ, ಗುಡಿ ಕೈಗಾರಿಕೆ ಹಾಗೂ ವಿಮರ್ಶಾ ಕ್ಷೇತ್ರದಿಂದ ಆಯ್ಕೆಯಾದ ಸಾಧಕರು. ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆ ವೇಳೆ ಯಾವುದೇ ಒತ್ತಡ, ಶಿಫಾರಸಿಗೆ ಮಣಿದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು. ಸಾಧಕರನ್ನು ಆಯ್ಕೆ ಮಾಡುವಾಗ ಸಾಮಾಜಿಕ ನ್ಯಾಯ, ಅರ್ಹತೆ, ಜಿಲ್ಲಾವಾರು ಪ್ರಾತಿನಿಧ್ಯ ಪರಿಗಣಿಸಲಾಗಿದೆ.
29 ವಿವಿಧ ಕ್ಷೇತ್ರಗಳಿಂದ 1512 ಜನ ಅರ್ಜಿ ಸಲ್ಲಿಸಿದ್ದರು. ಇದರೊಟ್ಟಿಗೆ ಪ್ರಶಸ್ತಿಗೆ ಅರ್ಹರಾಗಿದ್ದು ಎಲೆಮರೆಕಾಯಿಯಂತಿರುವವರ ಕುರಿತು ಮಾಹಿತಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗಿತ್ತು. ಅದರಲ್ಲಿ 357 ಜನರನ್ನು ಗುರುತಿಸಿ, 12 ಜನರಿಗೆ ಪ್ರಶಸ್ತಿ ನೀಡಲಾಗಿದೆ ಎಂದರು.
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…