ಎಷ್ಟೋ ವರುಷಗಳ ನಂತರ ಗೆಳೆಯರು ಭೇಟಿಯಾದಾಗ ಮಾತನಾಡುವ ವಿಷಯಗಳು ಇವೇ ತಾನೆ? ಇನ್ನೂ ಅಂದಿನ ಗುಟ್ಟಿನ ವಿಷಯಗಳು ಇಂದಿನ ತೆರೆದ ಸತ್ಯ ಗಳು ಒಂದೊಂದಾಗಿ ಅನಾವರಣ ಗೊಳ್ಳುತ್ತವೆ. ಟೀಚರ ಕಣ್ಣು ತಪ್ಪಿಸಿ ಅಂದು ತಿಂದ ಅಕ್ರೂಟ್, ಹುಣಸೆ ಬೀಜ, ಸಾಂತಾಣಿಯ ವಿಷಯಗಳನ್ನು ಹಂಚಿಕೊಳ್ಳಲು ಇಂದು ಸಂಕೋಚವೆನಿಸುವುದಿಲ್ಲ. ಬೋರ್ಡ್ ನಲ್ಲಿ ಮಾಸ್ಟರ್ ಬರಿಯುತ್ತಿರ ಬೇಕಾದರೆ ಮೊದಲ ಬೆಂಚಿನಿಂದ ಹಿಂದಿನ ಬೆಂಚಿಗೆ ರವಾನಿಸ್ಪಡುತ್ತಿದ್ದ ಕಾಗದದಲ್ಲಿ ಏನು ಬರೆದಿರುತ್ತಿತ್ತು ಎಂಬುದು ಬರೆದವನಿಗೂ ಓದಿದವನಿಗೂ ಮಾತ್ರ ಗೊತ್ತಿರುವ ಸತ್ಯವೆಂದರೆ ತಪ್ಪೇನಿಲ್ಲ. ಅಷ್ಟು ಗೌಪ್ಯತೆ ಕಾಪಾಡಲಾಗುತ್ತಿತ್ತು. ಇನ್ನೂ ಲೈಬ್ರೆರಿಯಲ್ಲಿ ಕಾದಂಬರಿ ಓದೋ ಗುಂಪೇ ದೊಡ್ಡದಿತ್ತು. ವಾರಕ್ಕೆ ಒಮ್ಮೆ ಮಾತ್ರ ಸಿಗುತ್ತಿದ್ದ ಪುಸ್ತಕ ಗಳನ್ನು ಕಾದು ಕುಳಿತು ಓದಿ ಪಕ್ಕದವಳಿಂದ ಆಕೆಯ ಪುಸ್ತಕವನ್ನೂ ಎರವಲು ಪಡೆದೂ ಓದಿಯಾಗುತ್ತಿತ್ತು. ವಾರದಲ್ಲಿ ಒಂದೇ ಪುಸ್ತಕ ಸಿಕ್ಕುವುದಾದರೂ ಏಳು ಪುಸ್ತಕಗಳನ್ನು ಓದಿದ ದಿನಗಳೂ ಕಮ್ಮಿಯಿಲ್ಲ. ಈಗದಂತೆ ಬಿಸಿಯೂಟದ ಸೌಲಭ್ಯ ವಿಲ್ಲದಿದ್ದುದರಿಂದ ಬುತ್ತಿ ಕಟ್ಟಿಕೊಂಡೇ ಶಾಲೆಗೆ ಹೋಗುವ ಅನಿವಾರ್ಯತೆ. ಯಾರಿಗೂ ಕಷ್ಟವೆನಿಸುತ್ತಿರಲಿಲ್ಲ. ಹಂಚಿ ತಿನ್ನುತ್ತ ಖುಷಿ ದುಪ್ಪಟ್ಟಾಗುತ್ತಿತ್ತು. ಎಷ್ಟೋ ವರುಷದ ನಂತರ ಸಿಕ್ಕ ಗೆಳತಿಯೊಂದಿಗೆ ಮಾತನಾಡುತ್ತಾ ಈ ವಿಷಯಗಳು ಒಂದೊಂದಾಗಿ ಬಂದು ಹೋದವು. ಆಕೆ ಮಾತು ಮುಗಿಸಿ ಹೋದ ಮೇಲೂ ಅದೇ ಗುಂಗು ಕಾಡುತ್ತಿತ್ತು. ನನಗೆ ತುಂಬಾ ಆಶ್ಚರ್ಯ ವಾದ ವಿಷಯ ಮತ್ತು ಕಾಡಿದ ವಿಷಯವೆಂದರೆ ಪ್ರಚಲಿತ ವಿಷಯಗಳ ಬಗ್ಗೆ ಮಾತೇ ಆಗಿರಲಿಲ್ಲ. ನಮ್ಮ ಉದ್ಯೋಗಗಳ ಬಗ್ಗೆ , ಮಕ್ಕಳ ವಿಧ್ಯಾಭ್ಯಾಸ, ಮನೆ ಮಂದಿ, ಸದ್ಯದ ಸ್ಥಿತಿ ಗತಿ, ರಾಜಕೀಯ ಯಾವುದೂ ಚರ್ಚೆಗೆ ಬರಲೇ ಇಲ್ಲವಲ್ಲ , !!!!!ಈ ವಿಷಯ ಹುಳದಂತೆ ತಲೆ ಕೊರೆಯಲಾರಂಭಿಸಿತು. ಕೂಡಲೆ ಗೆಳತಿಯ ವ್ಯಾಟ್ಸ ಆಪ್ ಗೆ ಸುದ್ದಿ ರವಾನಿಸಿದೆ. ತಕ್ಷಣ ಆಕೆಯ ಉತ್ತರ ಬರಬೇಕೆ! ಹೆಯ್ ಅಂತ ಯೋಚನೆಗಳೆಲ್ಲಾ ನಿನ್ನ ತಲೆಗೇ ಬರಲಿಕ್ಕೆ ಸಾಧ್ಯ. ನೀನು ಹೇಳಿದ ಎಲ್ಲಾ ವಿಷಯಗಳನ್ನು Facebook ಮತ್ತು what’s up ನಲ್ಲಿ ಮಾತಾಡಿಯಾಗಿದೆಯಲ್ಲಾ . ಬಾಕಿ ಯಾವುದೂ ಇರಲಿಲ್ಲ. ಅದರಲ್ಲಿ ಬಾಲ್ಯದ ವಿಷಯಗಳನ್ನು ಚರ್ಚಿಸಿದರೆ ಗಮ್ಮತ್ತಿಲ್ಲ. ಆ ಗುಟ್ಟಿನ ವಿಷಯಗಳನ್ನು ಮಾತನಾಡಲಿಕ್ಕೆ ಎದುರು ಸಿಕ್ಕಿದಾಗಲೇ ಆಗ ಬೇಕಷ್ಟೇ!!! ಅದೆಲ್ಲಾ ಸರಿ ಮತ್ತೆ ಯಾವಾಗ ಸಿಗೋಣ ಎಂದು ದುಬೈ ತಲುಪಿದ ಗೆಳತಿ ಮೆಸೇಜು ಹಾಕುವುದೇ.!?
ಆಕೆ ಹೇಳಿದ್ದೂ ತಪ್ಪಲ್ಲ. ಸದ್ಯದ ಆಗು ಹೋಗುಗಳು ಆಯಾ ದಿನವೇ ಚರ್ಚೆ ಗೆ ಬಂದಿರುತ್ತವೆ. ಬೆಳಗಿನ ನಮಸ್ಕಾರದಿಂದ ರಾತ್ರಿಯ ಶುಭರಾತ್ರಿ ಯವರೆಗೂ ವಿಷಯಗಳು ವಿನಿಮಯವಾಗುತ್ತಲೇ ಇರುತ್ತವೆ. ತಿಂಡಿ, ಊಟಗಳ ವಿವರಣೆ ಛಾಯಾಚಿತ್ರ ಸಹಿತ ಅನಾವರಣ ಗೊಂಡಿರುತ್ತವೆ. ಎಲ್ಲವೂ ‘ಓಪನ್ ಸೀಕ್ರೆಟ್’ ಸುದ್ದಿಗಳು. ಎಲ್ಲಿಂದ ಎಲ್ಲಿಗೋ ಲಿಂಕ್ ಗಳು. ಬೇಕೋ ಬೇಡವೋ ಎಲ್ಲರೂ ಎಲ್ಲವನ್ನೂ ರವಾನಿಸುವ ಹುಮ್ಮಸ್ಸು.
ಅದೇ ಸಮಯದಲ್ಲಿ ಆಕಾಶದಲ್ಲಿ ಮೂಡಿದ ಕಾಮನಬಿಲ್ಲಿನ ಸೌಂದರ್ಯ ನಮಗೆ ಗೋಚರಿಸದು. ನಮ್ಮ ಪರಿಸರಕ್ಕೆ ಅದಾಗ ತಾನೇ ಎಲ್ಲಿಂದಲೋ ಬಂದ ಹೊಸಹಕ್ಕಿಯನ್ನು ಗುರುತಿಸಲಾರೆವು. ಆಕಾಶದಲ್ಲಿನ ಮಿಂಚಿನಾಟಗಳು ನಮ್ಮ ಕಣ್ಣಿಗೆ ಸುಂದರವೆರನಿಸದು. ನಮ್ಮ ಹೂತೋಟದಲ್ಲೇ ಬೆಳೆದ ಹೂಗಳು ಚೆನ್ನವೆನಿಸದೆ ಕ್ಯಾಮರಾ ದಲ್ಲಿ ಸೆರೆ ಹಿಡಿದಾಗ ವಾವ್ ಎನಿಸುವುದು. ಮನೆಯಲ್ಲೇ ಮಾಡಿದ ಅದೇ ತಿಂಡಿಗಳ ಫೋಟೋ ಜಾಹೀರಾತುಗಳಲ್ಲಿ ಸುಂದರವಾಗಿ ಕಾಣುತ್ತವೆ, ( ಯಾರ ಬಾಯಲ್ಲೂ ನೀರೂರುವಂತೆ ಸಿಂಗರಿಸಿರುತ್ತಾರೆ).
ಹೀಗೆ ವಾಸ್ತವವನ್ನೂ ಜೀರ್ಣಿಸಲಾಗದೆ ಕಲ್ಪನೆಯನ್ನೂ ಅನುಭವಿಸದೆ ನಿನ್ನೆಯ ದಿನಗಳೇ ಉತ್ತಮವೆಂದು ಪೂರ್ವ ನಿರ್ಧರಿತ ಸೂತ್ರಕ್ಕೆ ಬದ್ಧರಾಗಿರುವ ಸ್ಥಿತಿಗೆ ಏನೆನ್ನೋಣ???