ಇವತ್ತು ಈ ಜಾಗವನ್ನು ನಾವು ತೆಗೆದುಕೊಂಡಿದ್ದೇವೆ. ನಮ್ಮ ಸಂತಸವನ್ನು ಹಂಚಿಕೊಳ್ಳಲು. ಏಕೆ ಹಂಚಿಕೊಳ್ಳಬೇಕು ಎಂದರೆ, ರಚನಾತ್ಮಕ ಮಾಧ್ಯಮವನ್ನು ಬೆಂಬಲಿಸಿದ್ದಕ್ಕಾಗಿ.
ವೆಬ್ ಸೈಟ್, ಆನ್ ಲೈನ್ ಮಾಧ್ಯಮ ಸೇರಿದಂತೆ ಎಲ್ಲಾ ಮಾಧ್ಯಮಗಳು ನೆಗೆಟಿವ್ ಸುದ್ದಿಗಳನ್ನೇ ಪ್ರಕಟಿಸುತ್ತವೆ ಎಂಬ ಒಂದು ಮಾತಿತ್ತು. ನಾವು ಈ ಮಾಧ್ಯಮಕ್ಕೆ ಕಾಲಿಟ್ಟಾಗಲೂ ಅದೇ ಭಾವನೆ ಇತ್ತು. ಆದರೆ ನಮ್ಮ ಉದ್ದೇಶ ರಚನಾತ್ಮಕವಾಗಿ ಸಮಾಜದಲ್ಲಿ ಕೆಲಸ ಮಾಡುವುದಾಗಿತ್ತು. ಸಾಮಾಜಿಕ ಕಳಕಳಿಯ ಉದ್ದೇಶದಿಂದಲೇ ಸುದ್ದಿಗಳನ್ನು ನೀಡಬೇಕು ಎಂಬ ಉದ್ದೇಶವಿತ್ತು. ನಮ್ಮ ಉದ್ದೇಶವನ್ನು ನೀವು ಬೆಂಬಲಿಸಿದ್ದೀರಿ. ರಚನಾತ್ಮಕ ಮಾಧ್ಯಮ, ಪಾಸಿಟಿವ್ ಸಂಗತಿಗಳನ್ನು ನೀಡುವ ಮಾಧ್ಯಮದ ಅಗತ್ಯತೆಯನ್ನು ನೀವು ನಮಗೆ ಬೆಂಬಲಿಸುವ ಮೂಲಕ ತಿಳಿಸಿದ್ದೀರಿ. ಹೀಗಾಗಿಯೇ ಅತೀ ಕಡಿಮೆ ಅವಧಿಯಲ್ಲಿ ಒಟ್ಟು 2.5 ಲಕ್ಷ ಓದುಗರನ್ನು ತಲುಪಿದ್ದೇವೆ ಎಂದು ವಿಶ್ವಾಸದಿಂದ ಹೇಳಬಹುದು. ನಾವು ಎಲ್ಲವನ್ನೂ ಗಮನಿಸುತ್ತಾ ಯಾರನ್ನೂ ಅನುಕರಿಸದೆ ನಡೆಯುತ್ತಿದ್ದೇವೆ. ಈ ನಡೆಗೆ ನಿಮ್ಮ ಬೆಂಬಲ ಇನ್ನೂ ಇರಲಿ. ನಮ್ಮ ತಂಡವೂ ಹಾಗೆಯೇ ಸ್ಪಷ್ಟವಾದ ಗುರಿ ಹಾಗೂ ಉದ್ದೇಶವನ್ನಿಟ್ಟುಕೊಂಡೇ ಕೆಲಸ ಮಾಡುತ್ತಿದೆ. ಹೀಗಾಗಿಯೇ ಯಶಸ್ಸು ಕಾಣಲು ಸಾಧ್ಯವಾಯಿತು, ನಿಮ್ಮೆಲ್ಲರನ್ನು ತಲುಪಲು ಸಾಧ್ಯವಾಯಿತು.
ಕೆಲವೊಮ್ಮೆ ಮನುಷ್ಯ ಸಹಜ ತಪ್ಪುಗಳಾಗಬಹುದು, ತಕ್ಷಣವೇ ತಿದ್ದಿಕೊಳ್ಳುತ್ತೇವೆ. ಉದ್ದೇಶಪೂರ್ವಕವಾಗಿ ಟೀಕೆ ಮಾಡುವುದಿಲ್ಲ. ವೈಯಕ್ತಿಕ ನಿಂದನೆ ಮಾಡುವುದಿಲ್ಲ. ಅಪರಾಧ ಸುದ್ದಿಗಳನ್ನು ವೈಭವೀಕರಣ ಮಾಡುವುದಿಲ್ಲ ಎಂಬುದನ್ನು ಮತ್ತೆ ಮತ್ತೆ ದೃಢವಾಗಿ ಹೇಳುತ್ತೇವೆ.
ಪ್ರತೀ ಬಾರಿ ಮಾಧ್ಯಮದ ಬಗ್ಗೆ ಮಾತನಾಡಿದಾಗ “ಯಾಕೆ ನೆಗೆಟಿವ್ ಜರ್ನಲಿಸಂ” ಹೆಚ್ಚಾಗ್ತಿದೆ ಅಂತ ಮಾತು ಬರುತ್ತದೆ. ಕೇವಲ ಟೀಕೆ ಮಾತ್ರವೇ ಇರುತ್ತದೆ, ರಚನಾತ್ಮಕ ಸಲಹೆ , ಪಾಸಿಟಿವ್ ಸಂಗತಿಗಳಿಗೆ ಜಾಗ, ಗ್ರಾಮೀಣ ಭಾಗದ ಅನೇಕ ಸಮಸ್ಯೆಗಳಿಗೆ ಪರಿಹಾರ, ಜನರ ನಡುವಿನ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಏಕೆ ಪ್ರಯತ್ನ ಮಾಡುವುದಿಲ್ಲ ಎಂಬ ಮಾತುಗಳು ಬರುತ್ತವೆ.
ಈಗ ಆ ಬೇಡಿಕೆ ನಿಜ ಅನಿಸಿದೆ. ಕೃಷಿ, ಗ್ರಾಮೀಣ, ನಗರ ಹೀಗೆ ಎಲ್ಲೆಡೆಯಿಂದ ನಾವು ರಚನಾತ್ಮಕ, ಧನಾತ್ಮಕವಾಗಿ ನೀಡುತ್ತಿರುವ ಸುದ್ದಿಗಳನ್ನು ನೀವು ಬೆಂಬಲಿಸುತ್ತಿರುವುದು ನಮಗೆ ಸಾಕ್ಷಿಯಾಗಿದೆ. ಮಾಧ್ಯಮವು ಮುಂದೆ ಧನಾತ್ಮಕವಾಗಿ ಯೋಚಿಸಬೇಕಾದ ಕಾಲ ಬಂದಿದೆ. ಜಲಸಂರಕ್ಷಣೆ, ಪರಿಸರ, ಶಿಕ್ಷಣ , ಗ್ರಾಮೀಣ ಬದುಕು, ನಗರ ಯೋಜನೆ, ಸ್ವಚ್ಛತೆ, ಕೃಷಿ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ನಾವು ಧನಾತ್ಮಕವಾಗಿ, ರಚನಾತ್ಮಕವಾಗಿ ಹೆಜ್ಜೆ ಇಡುತ್ತೇವೆ. ನಿಮ್ಮ ಸಹಕಾರದೊಂದಿಗೆ.
ಇನ್ನಷ್ಟು ಗುಣಮಟ್ಟ, ಇನ್ನಷ್ಟು ಅಂದವಾಗಿ ಮೂಡಿಬರಲು ಜಾಹೀರಾತು ಮೂಲಕ ಸಹಕಾರವೂ ಬೇಕಾಗಿದೆ. ಸುದ್ದಿ ಪ್ರಕಟಕ್ಕಾಗಿಯೇ ಜಾಹೀರಾತು ಬೇಕಿಲ್ಲ. ನಮ್ಮನ್ನು ಬೆಂಬಲಿಸಲು ಯಥಾ ಸಾಧ್ಯ ಜಾಹೀರಾತು ನಮಗೂ ನೀಡಿ ಸಹಕರಿಸಿ ಎಂಬುದು ನಮ್ಮ ಮನವಿ. ಮುಂದೆ ಸ್ಥಳೀಯವಾಗಿ ಪಾಸಿಟಿವ್ ಚಾನೆಲ್ , ಮುದ್ರಣ ಮಾಧ್ಯಮದ ಕಡೆಗೂ ತೆರಳುವ ಯೋಚನೆ ಇದೆ.ಆಗಲೂ ನಿಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತೇವೆ.
- ಮಹೇಶ್ ಪುಚ್ಚಪ್ಪಾಡಿ , ಸುಳ್ಯನ್ಯೂಸ್.ಕಾಂ