ಸುಳ್ಯ: ಚುಕು ಬುಕು ಶಬ್ದ ಕೇಳಿ ಮಲೆನಾಡ ಮೂಲಕ ರೈಲು ಬಂಡಿ ಓಡುವುದು ಯಾವಾಗ.. ಹೀಗೊಂದು ಪ್ರಶ್ನೆ ಕಳೆದ ಒಂದು ದಶಕದಿಂದ ಕೇರಳ ಮತ್ತು ಕರ್ನಾಟಕದ ಜನರು ಕೇಳುತ್ತಲೇ ಬಂದಿದ್ದಾರೆ.
ದಶಕದ ಹಿಂದೆ ಗಡಿನಾಡ ಜನರ ಮನಸಲ್ಲಿ ಮತ್ತು ಕನಸಲ್ಲಿ ಬಿತ್ತಿದ ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆಯ ಸುತ್ತಲೂ ಜನರ ನಿರೀಕ್ಷೆ ಗಿರಕಿ ಹೊಡೆಯುತ್ತಲೇ ಇದೆ. ದಶಕಗಳ ಹಿಂದೆ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕನಸಿನ ಯೋಜನೆ ಬಳಿಕ ಸದ್ದಿಲ್ಲದೆ ನೆನೆಗುದಿಗೆ ಬಿದ್ದಿತ್ತು. ಆದರೆ ಒಂದು ವರ್ಷದಿಂದ ಮತ್ತೆ ಯೋಜನೆ ನಿಧಾನಕ್ಕೆ ಸುದ್ದಿಯಾಗುತ್ತಲೇ ಇದೆ. ಯೋಜನೆಗೆ ಅನುದಾನ ನೀಡಲು ಕೇರಳ ಸರ್ಕಾರ ಒಪ್ಪುವ ಮೂಲಕ ಅನುಷ್ಠಾನ ಆಗುವುದಿಲ್ಲ ಎಂದೇ ನಂಬಲಾಗಿದ್ದ ಯೋಜನೆಗೆ ಮತ್ತೆ ಜೀವ ಬಂದಿತ್ತು. ಕಾಞಂಗಾಡು-ಕಾಣಿಯೂರು ರೈಲ್ಚೇ ಯೋಜನೆಯ ಪ್ರಾಥಮಿಕ ಸರ್ವೆ 2015 ರಲ್ಲಿ ಪೂರ್ತಿಗೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಯೋಜನೆ ಅನುಷ್ಠಾನ ಮಾಡಬಹುದು ಎಂಬ ನಿಲುವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಭೂಸ್ವಾಧೀನ ಮತ್ತು ಇತರ ನಿರ್ಮಾಣ ಕಾಮಗಾರಿಗಳಿಗಾಗಿ ಬೇಕಾಗುವ ತನ್ನ ಪಾಲನ್ನು ನೀಡಲು ಸಿದ್ದ ಎಂದು ಕೇರಳ ಸರ್ಕಾರ ಕಳೆದ ವರ್ಷ ಘೋಷಿಸಿ ರೈಲ್ವೇ ಸಚಿವಾಲಯಕ್ಕೆ ಪತ್ರ ನೀಡಿತ್ತು. ಕರ್ನಾಟಕ ಸರ್ಕಾರವೂ ಪೂರಕವಾಗಿ ಸ್ಪಂದಿಸಿದರೆ ಸದ್‍ಭವಿಷ್ಯದಲ್ಲಿ ಇಲ್ಲಿ ರೈಲು ಬಂಡಿ ಓಡುವ ನಿರೀಕ್ಷೆ ಹುಟ್ಟಿದೆ. ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ನಡೆಸುತ್ತಿರುವ ಕಾಞಂಗಾಡ್-ಕಾಣಿಯೂರು ರೈಲ್ವೇ ಹಳಿ ನಿರ್ಮಾಣ ಕ್ರಿಯಾ ಸಮಿತಿ ಪದಾಧಿಕಾರಿಗಳು ಸರಕಾರಗಳ, ಜನಪ್ರತಿನಿಧಿಗಳ ಕದ ತಟ್ಟುತ್ತಲೇ ಇದ್ದಾರೆ. ಇದೀಗ ಕಾಸರಗೋಡಿನ ನೂತನ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಕೂಡ ಧನಾತ್ಮಕವಾಗಿ ಸ್ಪಂದಿಸಿದ್ದು ಯೋಜನೆ ಅನುಷ್ಠಾನಕ್ಕೆ ಎಲ್ಲಾ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ.
1300 ಕೋಟಿ ಯೋಜನೆ:
2015ರಲ್ಲಿ ಯೋಜನೆಯ ಸಮೀಕ್ಷೆ ಪೂರ್ತಿಗೊಂಡಾಗ ಅನುಷ್ಠಾನಕ್ಕೆ 1300 ಕೋಟಿ ರೂ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶೇ.50ನ್ನು ಕೇಂದ್ರ ಸರ್ಕಾರ ಮತ್ತು ಉಳಿದ ಶೇ.50ನ್ನು ಕೇರಳ ಮತ್ತು ಕರ್ನಾಟಕ ಸರ್ಕಾರ ವಹಿಸಬೇಕು ಎಂಬುದು ಕೇಂದ್ರ ಸರ್ಕಾರದ ನಿಲುವು. 12 ವರ್ಷಗಳ ಹಿಂದೆ ಯೋಜನೆಯ ಆಶಯ ಉಂಟಾದಾಗ 91 ಕಿ.ಮಿ.ಯೋಜನೆ ಕೇವಲ 400 ಕೋಟಿ ರೂವಿನಲ್ಲಿ ಪೂರ್ತಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ಇದೀಗ ಒಂದು ದಶಕ ಕಳೆದಾಗ ಯೋಜನಾ ಅಂದಾಜು ವೆಚ್ಚ ಮೂರು ಪಟ್ಟು ಹೆಚ್ಚಿದೆ.
91 ಕಿ.ಮಿ. ಉದ್ದದ ಹಳಿ:
ಕಾಞಂಗಾಡ್‍ನಿಂದ ಪಾಣತ್ತೂರುವರೆಗೆ 41 ಕಿ.ಮಿ. ಮತ್ತು ಪಾಣತ್ತೂರಿನಿಂದ ಕಾಣಿಯೂರಿಗೆ 50 ಕಿ.ಮಿ. ಒಟ್ಟು 91 ಕಿ.ಮಿ. ಉದ್ದದ ಹಳಿ ನಿರ್ಮಿಸಿ ಮಲೆನಾಡ ತಪ್ಪಲ ಮೂಲಕ ರೈಲ್ವೇ ಸಂಪರ್ಕ ಸಾಧಿಸುವುದು ಯೋಜನೆಯ ಉದ್ದೇಶ. ಕಾಞಂಗಾಡ್‍ನಿಂದ ಮೀಙÉೂೀತ್, ಕೊಟ್ಟೋಡಿ, ಬಳಾಂತೋಡ್, ಪಾಣತ್ತೂರು, ಕಲ್ಲಪಳ್ಳಿ, ಆಲೆಟ್ಟಿ, ಸುಳ್ಯ ಮೂಲಕ ಕಾಣಿಯೂರಿನಲ್ಲಿ ಮಂಗಳೂರು-ಬೆಂಗಳೂರು ಹಳಿಯನ್ನು ಸಂಧಿಸಿ ರೈಲ್ವೇ ಸಂಪರ್ಕ ಸಾಧಿಸಲು ಯೋಜನೆ ರೂಪಿಸಲಾಗಿದೆ. ಕಾಞಂಗಾಡ್‍ನಿಂದ ಪಾಣತ್ತೂರುವರೆಗೆ ಹೆದ್ದಾರಿಗೆ ಸಮಾನಾಂತರವಾಗಿ ಬರುವ ಹಳಿಯು ಪಾಣತ್ತೂರಿನಿಂದ ಬೆಟ್ಟ ಗುಡ್ಡಗಳ ಮೂಲಕ ಹಾದು ಸುಳ್ಯಕ್ಕೆ ಬರಲಿದೆ.
ಹಳಿಯ ಹಾದಿ:
2006-07 ವರ್ಷದಲ್ಲಿ ಕಾಞಂಗಾಡ್-ಕಾಣಿಯೂರು ರೈಲ್ವೇ ಹಳಿ ಎಂಬ ಕನಸಿನ ಯೋಜನೆಯ ಆಶಯ ರೂಪುಗೊಂಡಿತು. ಬಳಿಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ನಡೆಸಿದ ಪ್ರಯತ್ನದ ಹಿನ್ನಲೆಯಲ್ಲಿ ಅಂದಿನ ರೈಲ್ವೇ ಸಚಿವರಾಗಿದ್ದ ಲಾಲೂ ಪ್ರಸಾದ್ ಯಾದವ್ 2008-09ರ ರೈಲ್ವೇ ಬಜೆಟ್‍ನಲ್ಲಿ ಪ್ರಥಮವಾಗಿ ಹಳಿಯ ಸರ್ವೆಗೆ ಅನುದಾನ ಮೀಸಲಿರಿಸಿತ್ತು. ಅದರಂತೆ ಪ್ರಥಮ ಹಂತದಲ್ಲಿ ಕಾಞಂಗಾಡ್‍ನಿಂದ ಪಾಣತ್ತೂರುವರೆಗೆ 41.ಕಿ.ಮಿ.ಹಳಿಯ ಸಮೀಕ್ಷೆ ನಡೆಸಲಾಯಿತು. 2010-11ರ ಬಜೆಟ್‍ನಲ್ಲಿ ಎರಡನೇ ಹಂತದಲ್ಲಿ ಪಾಣತ್ತೂರಿನಿಂದ ಕಾಣಿಯೂರು ತನಕ 50 ಕಿ.ಮಿ. ಸರ್ವೆಗೆ ಅನುದಾನ ಮೀಸಲಿರಿಸಿದರೂ ಸರ್ವೆ ನಡೆಯಲಿಲ್ಲ. 2012-13ರಲ್ಲಿಯೂ ಸರ್ವೆ ನಡೆಸಲು ಆದೇಶ ನೀಡಿದರೂ ಕೈಗೂಡಿಲ್ಲ. ಬಳಿಕ ಡಿ.ವಿ.ಸದಾನಂದ ಗೌಡ ರೈಲ್ವೇ ಸಚಿವರಾಗಿ ಮಂಡಿಸಿದ 2103-14ನೇ ಸಾಲಿನ ರೈಲ್ವೇ ಬಜೆಟ್‍ನಲ್ಲಿ ಕಾಞಂಗಾಡ್‍ನಿಂದ ಕಾಣಿಯೂರುವರೆಗೆ ಪೂರ್ತಿ ಸರ್ವೆ ನಡೆಸಲು ಅನುದಾನ ಮೀಸಲಿಸಿದರು. ಅದರಂತೆ 2015 ಮಾರ್ಚ್‍ನಲ್ಲಿ ಯೋಜನೆಯ ಸಮೀಕ್ಷೆ ಪೂರ್ತಿ ಮಾಡಿ ವರದಿ ಸಲ್ಲಿಸಲಾಗಿದೆ. ಬಳಿಕ ರಾಜ್ಯ ಸರ್ಕಾರಗಳ ಪಾಲುದಾರಿಕೆಯ ಒಪ್ಪಿಗೆ ನೀಡುವ ಮತ್ತಿತರ ಕಾರ್ಯಗಳು ನಡೆಯದ ಕಾರಣಗಳಿಂದಾಗಿ ಯೋಜನೆಯ ಕೆಲಸ ಮುಂದೆ ಸಾಗಿಲ್ಲ.
ಕರ್ನಾಟಕದಲ್ಲಿ ಆಗಬೇಕಾಗಿರುವುದೇನು:
ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನಾ ಕ್ರಿಯಾ ಸಮಿತಿಯು ಕೇರಳ ಮುಖ್ಯಮಂತ್ರಿ ಮತ್ತು ಸಚಿವರನ್ನು ಕಳೆದ ಜುಲೈನಲ್ಲಿ ಭೇಟಿ ಮಾಡಿ ಯೋಜನೆಗೆ ಅನುದಾನ ನೀಡುವಂತೆ ಒತ್ತಾಯಿಸಿದ ಹಿನ್ನಲೆಯಲ್ಲಿ ಅನುದಾನ ನೀಡಲು ಕೇರಳ ಸರ್ಕಾರ ಒಪ್ಪಿಗೆ ನೀಡಿದೆ. ಅದೇ ರೀತಿ ಕರ್ನಾಟಕ ಸರ್ಕಾರವೂ ಅನುದಾನ ನೀಡುವ ಒಪ್ಪಿಗೆ ನೀಡಬೇಕಾಗಿದೆ. ಈ ಹಿನ್ನಲೆಯಲ್ಲಿ ಕ್ರಿಯಾ ಸಮಿತಿಯ ಕೇರಳ ಮತ್ತು ಕರ್ನಾಟಕ ಭಾಗದ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸುಳ್ಯದಲ್ಲಿ ಕೆಲವು ತಿಂಗಳ ಹಿಂದೆ ಸಭೆ ನಡೆಸಿ ನಿಯೋಗ ತೆರಳಿ ಕರ್ನಾಟಕ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಯೋಜನೆಗೆ ಅನುದಾನ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.
ಯೋಜನೆಯಿಂದ ಏನು ಪ್ರಯೋಜನ:
ರೈಲ್ವೇ ಸಂಪರ್ಕ ಇಲ್ಲದ ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವ ಮಲೆನಾಡ ತಪ್ಪಲಿನ ಗ್ರಾಮಗಳಿಗೆ ರೈಲು ಸಂಪರ್ಕ ಕಲ್ಪಿಸಿ ಸಂಚಾರ ಕ್ರಾಂತಿ ಸಾಧ್ಯವಾಗಿಸುವುದರ ಜೊತೆಗೆ ಎರಡೂ ರಾಜ್ಯಗಳ ಗ್ರಾಮಗಳ ಅಭಿವೃದ್ಧಿಗೆ ಯೋಜನೆ ದೊಡ್ಡ ಕೊಡುಗೆ ನೀಡಬಹುದು. ಕೇರಳಕ್ಕೆ ಬೆಂಗಳೂರು, ಮೈಸೂರು ಇನ್ನಷ್ಟು ಹತ್ತಿರ ಆಗುತ್ತದೆ ಎಂಬುದರ ಜೊತೆಗೆ ಮಲೆನಾಡಿನ ಈ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗಬಹುದು. ಇಲ್ಲಿನ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ, ಮಾರುಕಟ್ಟೆ ದೊರೆಯುವ ಅವಕಾಶ ದೊರೆಯಲಿದೆ. ಶಿಕ್ಷಣ ಕೇಂದ್ರವಾದ ಸುಳ್ಯಕ್ಕೆ ಕೇರಳದಿಂದ ಬರುವವರಿಗೆ ಸುಲಭವಾಗಬಹುದು. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶ ತೆರೆದುಕೊಳ್ಳಬಹುದು. ಬೇಕಲ ಕೋಟೆ, ರಾಣಿಪುರಂ, ಕೊಡಗಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪೂರಕವಾಗಬಹುದು. ಶಬರಿಮಲೆ, ತಲಕಾವೇರಿ, ಸುಬ್ರಹ್ಮಣ್ಯ, ಧರ್ಮಸ್ಥಳ ಯಾತ್ರಿಕರಿಗೆ ಹೆಚ್ಚಿನ ಅನುಕೂಲ ಆಗಬಹುದು. ಹೀಗೆ ಕಾಞಂಗಾಡ್-ಕಾಣಿಯೂರು ಹಳಿ ನಿರ್ಮಾಣದಿಂದ ಬಲು ದೊಡ್ಡ ಅಭಿವೃದ್ಧಿ ಸಾಧ್ಯತೆಗಳೇ ತೆರೆದು ಕೊಳ್ಳಲಿದೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…