ಮಡಿಕೇರಿ :ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗಳ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳಿಂದ ಹೊರ ಬಂದು, ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಬದುಕು ಸವೆಸುತ್ತಿರುವ ಬುಡಕಟ್ಟು ಸಮುದಾಯಕ್ಕೆ ಅಗತ್ಯ ನಿವೇಶನ ಮತ್ತು ಹಕ್ಕುಪತ್ರವನ್ನು ನೀಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬುಡಕಟ್ಟು ಕಾರ್ಮಿಕರ ಸಂಘದ ನೇತೃತ್ವದಲ್ಲಿ ಆದಿವಾಸಿಗಳು ಮಡಿಕೇರಿಯ ಗಿರಿಜನ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ದಕ್ಷಿಣ ಕೊಡಗು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ತೋಟಗಳ ಲೈನ್ ಮನೆಗಳಲ್ಲಿ ನೆಲೆಸಿರುವ ಆದಿವಾಸಿಗಳು, ನಿವೇಶನ ಮತ್ತು ಹಕ್ಕುಪತ್ರಕ್ಕಾಗಿ ನಿರಂತರವಾಗಿ ಅರ್ಜಿ ಸಲ್ಲಿಸುತ್ತಲೇ ಬಂದಿದ್ದಾರೆ. ಮೊದಲ ಹಂತದಲ್ಲಿ 150 ಕುಟುಂಬಗಳಿಗೆ ಶಾಶ್ವತ ನೆಲೆ ಒದಗಿಸಬೇಕು ಮತ್ತು 3 ಸಾವಿರಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳ ಬದುಕಿಗೆ ನೆಲೆಯೊದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರಣಿ ಆರಂಭಿಸಿರುವುದಾಗಿ ಬುಡಕಟ್ಟು ಕಾರ್ಮಿಕರ ಸಂಘದ ಕಾರ್ಯದರ್ಶಿ ಶೈಲೇಂದ್ರ ಕುಮಾರ್ ತಿಳಿಸಿದರು. ಐಟಿಡಿಸಿ ಅಧಿಕಾರಿಗಳು ಪ್ರತಿಭಟನಾಕಾರರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ, ‘ಆದಿವಾಸಿಗಳಿಗೆ ನಿವೇಶನ ಮತ್ತು ಹಕ್ಕು ಪತ್ರ ಒದಗಿಸುವುದು ನಮ್ಮ ವ್ಯಾಪ್ತಿಗೆ ಬರುವಂತಹದ್ದಲ್ಲ’ ಎಂದು ದರ್ಪದ ಉತ್ತರ ನೀಡಿದ್ದಾರೆ. ಅಲ್ಲದೆ ಸ್ಥಳದಿಂದ ತೆರಳುವಂತೆ ಬೆದರಿಸಿರುವುದಾಗಿ ಬುಡಕಟ್ಟು ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಉಷಾ ಹಳ್ಳಿಗಟ್ಟು, ಲಲಿತಾ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಐಟಿಡಿಸಿ ಕಚೇರಿ ಆವರಣದಲ್ಲಿ ಧರಣಿ ಮುಂದುವರಿದ ಸಂದರ್ಭ, ಸ್ಥಳದಲ್ಲಿ ಆದಿವಾಸಿ ಮಹಿಳೆಯರೂ ಧರಣಿಯಲ್ಲಿ ನಿರತರಾಗಿದ್ದರು. ಹೀಗಿದ್ದೂ ಐಟಿಡಿಪಿ ಇಲಾಖಾ ಅಧಿಕಾರಿಗಳು ಕನಿಷ್ಠ ಮಾನವೀಯತೆಯ ದೃಷ್ಟಿಯಿಂದ ಆವರಣದಲ್ಲಿ ವಿದ್ಯುದ್ದೀಪವನ್ನು ಬೆಳಗುವ ಕಾಳಜಿ ತೋರಿಲ್ಲವೆಂದು ಆರೋಪಿಸಿದರು. ನಮ್ಮ ನೆರವಿಗೆ ಬಂದವರು ಪೊಲೀಸರು ಮತ್ತು ಸುತ್ತಮುತ್ತಲ ನಿವಾಸಿಗಳೆಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಶೈಲೇಂದ್ರ ಕುಮಾರ್ ಮಾತನಾಡಿ ಲೈನ್‍ಮನೆಗಳಲ್ಲಿ ನೆಲೆಸಿರುವ ಆದಿವಾಸಿ ಕುಟುಂಬಗಳು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಕುಟುಂಬಗಳ ಅಭಿವೃದ್ಧಿ ಮತ್ತು ಪುನರ್ವಸತಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅವಕಾಶವಿದೆ. ಹೀಗಿದ್ದೂ ಆದಿವಾಸಿಗಳ ಸ್ವತಂತ್ರ ಬದುಕಿಗೆ ಪೂರಕವಾದ ಕೆಲಸವನ್ನು ಇಲಾಖೆ ಮಾಡುತ್ತಿಲ್ಲವೆಂದು ಆರೋಪ ಮಾಡಿದರು.
ಪ್ರತಿಭಟನೆಯ ಸಂದರ್ಭದಲ್ಲೇ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಂಘದ ಸಂಚಾಲಕ ಜಿ.ಬಿ.ಗಪ್ಪು, ಜೇನು ಕುರುಬರ ಮಹಿಳಾ ಅಧ್ಯಕ್ಷೆ ಜಾನಕಮ್ಮ, ಲಲಿತಾ, ಉಷಾ ಹಾಗೂ ಉಡುಪಿ ಕೊರವ ಸಮುದಾಯದ ಪ್ರತಿನಿಧಿ ಸುಶೀಲಾ ಉಪಸ್ಥಿತರಿದ್ದರು.
ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಆದಿವಾಸಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ಈಗಾಗಲೆ ನಿವೇಶನ ರಹಿತ ಆದಿವಾಸಿ ಕುಟುಂಬಗಳಿಗೆ ನಿವೇಶನ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಕುಟುಂಬಗಳ ಸಮೀಕ್ಷೆ ನಡೆಯುತ್ತಿದೆ. ಗ್ರಾಮ ಪಂಚಾಯ್ತಿಗಳಿಗೂ ಸರ್ವೇ ನಡೆಸಲು ಸೂಚನೆ ನೀಡಲಾಗಿದ್ದು, ಈ ಪ್ರಕ್ರಿಯೆಗೆ ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ. ಮುಂದಿನ ಎರಡು ತಿಂಗಳ ಒಳಗೆ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹದಿಂದ ತಾತ್ಕಾಲಿಕವಾಗಿ ಹಿಂದೆ ಸರಿದ ಪ್ರತಿಭಟನಾಕಾರರು ಭರವಸೆ ಈಡೇರದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…