ಅನುಕ್ರಮ

ನೀರಿನ ಬರಕ್ಕೆ ಬೆಚ್ಚಿದ ಕರಾವಳಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

‘ಮೈ ತೊಳೆಯದೆ ವಾರ ಕಳೆಯಿತು’ ಎಂದು ಸಾರ್ವಜನಿಕ ನಳ್ಳಿಯ ಮುಂದೆ ಸಾಲು ಸಾಲು ಕೊಡಗಳೊಂದಿಗೆ ವಿಷಾದಿಸುವ ಅಮ್ಮಂದಿರು.

Advertisement

‘ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಈಗ ಪ್ರವಾಸ ಬರಬೇಡಿ. ನೀರಿಲ್ಲ’ ಎಂದು ವಿನಂತಿಸಿದ ಡಾ.ವೀರೇಂದ್ರ ಹೆಗ್ಗಡೆಯವರು.

‘ಮಂಗಳೂರು ಟ್ಯಾಂಕರ್ ನೀರು ನೋಡದೆ ಕೆಲವು ವರುಷವಾಗಿತ್ತು. ನೀರು ಪೂರೈಕೆಯಲ್ಲೂ ಪೈಪೋಟಿ, ದಂಧೆ.’ ಮಂಗಳೂರಿನ ಉದ್ಯಮ ರಾಜೇಶ್ ಡಾಂಗೆ.
ನವಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ರಾಚುವ ಸುದ್ದಿಗಳು. ಇನ್ನು ಹತ್ತು ದಿವಸ ಮಳೆ ಕೈಕೊಟ್ಟರೆ ಕರಾವಳಿಯು ಇನ್ನೊಂದು ಬಯಲುಸೀಮೆಯಾಗುವುದರಲ್ಲಿ ಸಂಶಯವಿಲ್ಲ.

ಮಂಗಳೂರಲ್ಲಿ ಒಂದು ಗಂಟೆ ಸುತ್ತಾಡಿ. ಮೇಲ್ನೋಟಕ್ಕೆ ಸಹಜವಾಗಿದ್ದಂತೆ ಕಾಣುತ್ತದೆ. ಜನರನ್ನು ಮಾತನಾಡಿಸಿ. ಮಡುಗಟ್ಟಿದ್ದ ದುಗುಡ ಮಾತನಾಡುತ್ತದೆ. ‘ನೀರಿನ ರೇಶನ್’ ಎನ್ನುವ ಪದವು ಪಟ್ಟಣವಾಸಿಗರನ್ನು ಬೆಚ್ಚಿಬೀಳಿಸಿದೆ. ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ, ನೀರು ಮಾತ್ರ ಬೇಕಪ್ಪಾ.. ಎನ್ನುವ ದಣಿಗಳ ಮಾತು ಮರ್ಮಕ್ಕೆ ತಾಗುತ್ತದೆ. ನೀರಿಲ್ಲದೆ ಚಿಕ್ಕಪುಟ್ಟ ಕ್ಯಾಂಟೀನ್‍ಗಳು ಬಾಗಿಲು ಮುಚ್ಚಿವೆ. ಅಲ್ಲಿಲ್ಲಿ ಹೋಟೆಲ್‍ಗಳು ಷಟರ್ ಎಳೆದ ಸುದ್ದಿ ಕೇಳುತ್ತಿದೆ. ಉಸಿರಾಡುತ್ತಿದ್ದ ಕೆಲವು ಹೋಟೆಲ್, ಕ್ಯಾಂಟೀನ್‍ಗಳಲ್ಲಿ ಪೇಪರ್‍ಕಪ್ ಲೋಟಗಳು ಬಂದಿವೆ.

Advertisement

ವಾರ್ಷಿಕವಾಗಿ ಮೂರುವರೆ ಸಾವಿರ ಮಿ.ಮಿ. ಮಳೆ ಬರುವ, ನೀರಿನ ಸಮೃದ್ಧತೆಯ ಕರಾವಳಿಯ ಚಿತ್ರವಿದು. ಬರ ಅಂದಾಗ ಉತ್ತರ ಕರ್ನಾಟಕ, ಬಯಲುಸೀಮೆಯತ್ತ ಕತ್ತು ತಿರುಗಿಸುತ್ತೇವೆ. ಹಲವು ವರುಷಗಳಿಂದ ಅಲ್ಲಿಯೂ ಊಹನೆಗೆ ನಿಲುಕದ ನೀರಿನ ಬರವಿದೆ. ಈಗ ಕರಾವಳಿಗೇ ನೀರಿನ ಕ್ಷಾಮ. ‘ಎಷ್ಟು ಖರ್ಚಾದರೂ ತೊಂದರೆಯಿಲ್ಲ, ನಾಗರಿಕರಿಗೆ ನೀರು ಒದಗಿಸುತ್ತೇವೆ’, ಈಚೆಗೆ ಸರಕಾರದ ವರಿಷ್ಠರು ಬೆನ್ನುತಟ್ಟಿಕೊಂಡರು. ನೀರನ್ನು ಸೃಷ್ಟಿಸುವುದಕ್ಕೆ ಬರುತ್ತದೋ ಗೊತ್ತಿಲ್ಲ. ಕಡತದಲ್ಲಿ ಮಾತ್ರ ಖರ್ಚಿನ ತಃಖ್ತೆ ಬೆಚ್ಚಗೆ ಕುಳಿತಿರುತ್ತದಷ್ಟೇ. ನುಂಗಣ್ಣಗಳಿಗೆ ಬರ ವರದಾನ!

Advertisement

ಮೂವತ್ತಮೂರು ವರುಷಗಳ ಹಿಂದಕ್ಕೆ ಹೋಗೋಣ. 1983ರಲ್ಲಿ ನೀರಿನ ಬರ ಬಂದಿತ್ತು. ಆ ವರುಷ ಬೇಸಿಗೆ ಮಳೆ ಬರಲಿಲ್ಲ. ಮಳೆಗಾಲ ತಡವಾಗಿ ಶುರುವಾಗಿತ್ತು. ಪಶ್ಚಿಮ ಕರಾವಳಿಗೆ ದೊಡ್ಡ ಹೊಡೆತವಾಗಿತ್ತು. ಬಾವಿಗಳೆಲ್ಲಾ ಒಣಗಿದ್ದುವು. ಕುಡಿಯುವ ನೀರಿಗೆ ಹಾಹಾಕಾರವೆದ್ದಿತ್ತು. ತೋಟಗಳೆಲ್ಲಾ ನಿಸ್ತೇಜವಾಗಿದ್ದುವು. ಆಗ ಇಷ್ಟೊಂದು ಕೊಳವೆಬಾವಿಗಳು ಇರಲಿಲ್ಲ. ಮಣ್ಣುಮಾಂದಿ ಯಂತ್ರದ (ಜೆಸಿಬಿ) ಹಾರಾಟವಿದ್ದಿರಲಿಲ್ಲ. ಅಂತರ್ಜಲದ ಮಟ್ಟ ಸ್ವಲ್ಪ ಕುಸಿದಿತ್ತೇ ವಿನಾ ಪಾತಾಳಕ್ಕೆ ಹೋಗಿಲ್ಲ. ಜನರಲ್ಲಿ ನೆಲ, ನೀರಿನ ಕುರಿತು ಕನಿಷ್ಠ ಅರಿವಿದ್ದು ನಿಭಾಯಿಸಿದ್ದರು. ಜವಾಬ್ದಾರಿಗಳ ಎಚ್ಚರವಿತ್ತು. ಈಗಿನಂತೆ ಮೈಸೂರುಪಾಕ್ ಕಟ್ ಮಾಡಿದಂತೆ ಗುಡ್ಡಗಳನ್ನು ಜೆಸಿಬಿ ಯಂತ್ರವು ತುಂಡರಿಸಿದ್ದಿಲ್ಲ.

ಆಗಿನ ಬರಕ್ಕಿಂತ ಭೀಕರವಾಗಿ ಈಗ ಕರಾವಳಿ ತತ್ತರಿಸಿದೆ. ಕರಾವಳಿಯನ್ನು ಮಾತ್ರ ಯಾಕೆ ಉಲ್ಲೇಖಿಸುತ್ತೇನೆಂದರೆ, ಇಲ್ಲಿನವರಿಗೆ ‘ನೀರಿನ ಬರ’ದ ಕಲ್ಪನೆಯೇ ಇಲ್ಲ! ನೀರಿಂಗಿಸುವ, ಜಲಮರುಪೂರಣ, ಮಳೆಕೊಯ್ಲು.. ವಿಚಾರಗಳನ್ನು ಮಾತನಾಡಿದಾಗ ಎಷ್ಟು ಮಂದಿ ಗೇಲಿ ಮಾಡಿರಬಹುದು! ‘ಕರಾವಳಿಯಲ್ಲೂ ನೀರಿಂಗಿಸುವ ವ್ಯವಸ್ಥೆ ಬೇಕಾ’ ಎಂದು ಕಟುಶಬ್ದಗಳಲ್ಲಿ ದನಿಯೇರಿಸಿ ಮಾತನಾಡಿದವರ ನೆನಪಿದೆ. ಈಗ ಮಾತು ಬಿಡಿ, ಬದುಕೇ ಮೌನವಾಗಿದೆ. ಬಹುಶಃ ಇದಕ್ಕಿಂತ ಆಳಕ್ಕೆ ಇನ್ನು ಅಂತರ್ಜಲ ಇಳಿಯಲಾರದು. ನೀರಿನ ಸ್ವರ್ಗವಾದ ಆಗುಂಬೆಯಲ್ಲೂ ಬಾವಿಗಳು ಬತ್ತಿವೆ!

ಕೊಳವೆ ಬಾವಿಗಳ ಕೊರೆತ ಹೆಚ್ಚಾಗಿದೆ. ವೈಫಲ್ಯಗಳ ಸುದ್ದಿಗಳು ರಾಚುತ್ತಿವೆ. ನೀರಿನ ಅಗತ್ಯ ಹೆಚ್ಚಾಗುತ್ತಿದೆ. ಬದುಕು ಒತ್ತಡವಾಗಿದೆ. ಬಹುಶಃ ರಾಜಸ್ಥಾನದಲ್ಲೂ ಇಷ್ಟೊಂದು ಟೆನ್ಶನ್ ಇರಲಾರದೇನೋ. ಯಾಕೆ ಹೇಳಿ? ನೀರಿನ ಬವಣೆಯನ್ನು ಅನುಭವಿಸಿದ ಕಾರಣ ಅಲ್ಲಿ ನೀರನ್ನು ತುಪ್ಪದಂತೆ ಬಳಸುತ್ತಾರೆ! ನಮಗೀಗ ತೀರ್ಥದಂತೆ ಬಳಸುವ ಪ್ರಮೇಯ ಬಂದಿದೆ. ಮೊದಲು ಹಿರಿಯರು ಮಾಡಿಟ್ಟ ಪರಿಸರ ವ್ಯವಸ್ಥೆಗಳು ಚೆನ್ನಾಗಿದ್ದ ಸಮಯದಲ್ಲಿ ಬರ ಎನ್ನುವ ಶಬ್ದವೇ ಕೇಳಿದ್ದಿಲ್ಲ. ಆ ವ್ಯವಸ್ಥೆಗಳೆಲ್ಲಾ ನಾಶವಾಗಿವೆ. ಸರಿ, ಇಷ್ಟೆಲ್ಲಾ ಕಷ್ಟ ಯಾಕೆ ಬಂತು? ಭೂ ಒಡಲಿಂದ ನೀರನ್ನು ಮೊಗೆದು ಸ್ವೇಚ್ಛೆಯಿಂದ ಬಳಸಿದೆವು. ವ್ಯವಸ್ಥಿತವಾಗಿ ಕಾಡು ನಾಶ ಮಾಡಿದೆವು, ಮಾಡಿಸಿದೆವು, ಕಿಸೆ ತುಂಬಿಸಿಕೊಂಡೆವು. ಎಲ್ಲೆಲ್ಲಾ ಪ್ರಕೃತಿಯೇ ನೀರನ್ನಿಳಿಸಿಕೊಳ್ಳುತ್ತದೋ ಅಲ್ಲೆಲ್ಲ ಅಗೆ ಯಂತ್ರಗಳು ನುಗ್ಗಿ ನೀರಿನ ಮನೆಯನ್ನು ಧ್ವಂಸ ಮಾಡಿದಾಗ ಸೋಂಟಕ್ಕೆ ಕೈಯಿಟ್ಟು ನಕ್ಕೆವು, ಇತರರನ್ನು ನಗಿಸಿದೆವು. ಈಗ ನೋಡಿ..! ಅಳುವ ಹೊತ್ತು.

ಇಷ್ಟೆಲ್ಲಾ ಋಣಾತ್ಮಕವಾಗಿ ಮಾತನಾಡುತ್ತಿದ್ದಾಗ, ಬರದ ನಡುವೆಯೂ ಬರವನ್ನು ಆಹ್ವಾನಿಸದ ಮಂದಿ ಎಷ್ಟಿಲ್ಲ? ಭೂಮಿಗೆ ನೀರನ್ನು ಕುಡಿಸಿ ಬದುಕಿನಲ್ಲಿ ನಗುವವರತ್ತ ಚಿತ್ತ ಹರಿಸಬೇಕಾಗಿದೆ. ಏನಿಲ್ಲವೆಂದರೂ ಒಂದೊಂದು ತಾಲೂಕಿನಲ್ಲಿ ನಾಲ್ಕೈದು ಮಂದಿಯಾದರೂ ಜಲಮರುಪೂರಣ ಮಾಡಿಕೊಂಡು ನೆಮ್ಮದಿಯಾಗಿದ್ದವರು ಇದ್ದಾರೆ. ಅವರೆಂದೂ ಸದ್ದು ಮಾಡುವುದಿಲ್ಲ. ಇಂತಹ ಯಶೋಗಾಥೆಗಳಿಗೆ ಬೆಳಕು ಹಾಕುವ, ಅವರೊಂದಿಗೆ ಮಾತುಕತೆ ಮಾಡುವ, ಮಾದರಿಗಳ ಪರಿಣಾಮಗಳತ್ತ ನೋಡುವ ಮನಃಸ್ಥಿತಿ ನಿರ್ಮಾಣವಾಗಬೇಕು. ಮಾಡಬೇಕಾದವರು ಯಾರು ಎಂದಾಗ ವಿಧಾನಸೌಧದತ್ತ ನೋಡುತ್ತೇವೆ ಅಲ್ವಾ!
ಪಂಚಾಯತ್‍ಗಳು, ಯುವಕ ಸಂಘಗಳು, ಹಳೆವಿದ್ಯಾರ್ಥಿ ಸಂಘ, ಭಜನಾ ಸಂಘ, ಕಲಾ ಸಂಘಗಳು ಭೂಒಡಲಿಗೆ ನೀರಿಂಗಿಸುವ ಪ್ರಕ್ರಿಯೆಯನ್ನು ಮುಖ್ಯ ಅಜೆಂಡಾವಾಗಿ ಇಟ್ಟುಕೊಳ್ಳಬೇಕು. ‘ನನ್ನ ಭೂಮಿಗೆ ನೀರು ಇಂಗಿಸಿದರೆ ನನಗೆ ಪ್ರಯೋಜನವಾದೀತೇ?’ ಇಂತಹ ಪ್ರಶ್ನೆಗಳನ್ನು ಸಾಕಷ್ಟು ಬಾರಿ ಕೇಳಿದ್ದೇನೆ. ಇಲ್ಲಿ ‘ನಾನು’ ಎನ್ನುವುದರ ಬದಲು ‘ನಾವು’ ಎಂದಾದರೆ ನೀರಿನ ಬರವನ್ನು ಓಡಿಸಬಹುದು. ಸಾಮೂಹಿಕ ಜನಜಾಗೃತಿಯಾಗಬೇಕು. ಎಲ್ಲರೂ ಕೈಜೋಡಿಸದ ಹೊರತು ಅನ್ಯ ಮಾರ್ಗವಿಲ್ಲ.

ಗುಡ್ಡದ ನೀರು ಹರಿದುಹೋಗದೆ ಅಲ್ಲಲ್ಲೇ ಇಂಗುವಂತಾದರೆ ಅದರ ಸುತ್ತುಮುತ್ತಲಿನ ಕೆಳ ಪ್ರದೇಶಗಳಲ್ಲಿ ಸಹಜವಾಗಿ ಅಂತರ್ಜಲ, ನೀರಿನ ಒರತೆ ವೃದ್ಧಿಯಾಗುತ್ತದೆ. ಗುಡ್ಡದಲ್ಲಿ ಬಿದ್ದ ನೀರನ್ನು ಹರಿದುಹೋಗದಂತೆ ಮಾಡುವುದು ಮೊದಲಾದ್ಯತೆಯ ಕೆಲಸವಾಗಬೇಕು. ಮೊದಲು ಪ್ರಕೃತಿಯೇ ಈ ಕೆಲಸ ಮಾಡುತ್ತಿತ್ತು. ಈಗ ಆ ಹೊಣೆಯನ್ನು ಪ್ರಕೃತಿಯೇ ನಮ್ಮ ಮೇಲೆ ಹೊರಿಸಿದೆ. ಗುಡ್ಡದಲ್ಲಿ ನೀರು ಇಂಗದೆ ಆಚೀಚಿಗೆನ ತೋಡು, ನದಿಗಳು ಹೇಗೆ ಹರಿದಾವು? ನದಿಯಲ್ಲಿ ಬೇಸಿಗೆಯಲ್ಲೂ ನೀರಿದೆ ಎಂದಾದರೆ ಅಂತರ್ಜಲ, ಒರತೆಯ ಗಾಢತೆಯಿದೆ.

Advertisement

ನಮ್ಮ ಜನಪ್ರತಿನಿಧಿಗಳಿಗೆ ಪುರುಸೊತ್ತಿಲ್ಲ ಬಿಡಿ. ನಾವು ಬದುಕಲು ಜೀವಜಲ ಬೇಕು. ಅದಕ್ಕಾಗಿ ನಾವೇ ಯತ್ನಿಸಬೇಕು. ನೀರಿಂಗಿಸಿ ಯಶಕಂಡ ಮಾದರಿಗಳು ಎಲ್ಲೆಲ್ಲಿ ಇವೆಯೋ ಅಲ್ಲಿಗೆ ಬೇಟಿ ನೀಡೋಣ. ನಮ್ಮ ನೆಲದಲ್ಲೂ ಅನುಷ್ಠಾನಿಸೋಣ. ಮುಂದೆ ಬರುವ ಮಳೆಯ ನೀರನ್ನು ಹರಿಯಕೊಡದೆ ಭೂಮಿಯಲ್ಲಿ ಇಂಗಿಸುವ ಪ್ರತಿಜ್ಞೆ ಮಾಡೋಣ. ನೀರಿನ ಯೋಧರನ್ನು ಸಿದ್ಧಗೊಳಿಸುವ ಕೆಲಸ ಮಾಡೋಣ. ನೀರಿನ ಬರವನ್ನು ಮುಂದಿನ ವರುಷ ಬಾರದಂತೆ ತಡೆಯೋಣ.
ಇನ್ನೊಂದು ತಿಂಗಳಲ್ಲಿ ಮಳೆ ಬರಬಹುದೆಂದು ನಂಬಲಾಗಿದೆ! ಮತ್ತೆ ಮೊದಲಿನಂತೆ ಆಕಳಿಸಿಕೊಂಡಿದ್ದರೆ ಮುಂದಿನ ವರುಷ ಬರವು ನೀರನ್ನು ಮಾತ್ರವಲ್ಲ, ಜೀವವನ್ನು ಆಪೋಶನ ಮಾಡುವುದು ಖಚಿತ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

View Comments

  • Perfect information. Right time right information. The article awesome. Keep writing sir.

Published by
ನಾ.ಕಾರಂತ ಪೆರಾಜೆ

Recent Posts

ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ

ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…

44 minutes ago

ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್

ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…

2 hours ago

ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ

ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…

1 day ago

ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆಗೆ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…

2 days ago

ಹವಾಮಾನ ವರದಿ | 09-08-2025 | ಬಂಗಾಳಕೊಲ್ಲಿಯ ವಾಯುಭಾರ ಕುಸಿತ- ಮುಂಗಾರು ಚುರುಕು |

ತಮಿಳುನಾಡು ಕರಾವಳಿ ಸಮೀಪ ಉಂಟಾಗಿರುವ ವಾಯುಭಾರ ಕುಸಿತವು ಆಂದ್ರಾ ಕರಾವಳಿ ದಾಟಿ ಉತ್ತರಕ್ಕೆ…

2 days ago

ಹೊಸರುಚಿ | ಹಲಸಿನ ಹಣ್ಣಿನ ಹಲ್ವ

ಹಲಸಿನ ಹಣ್ಣಿನ ಹಲ್ವಕ್ಕೆ ಬೇಕಾಗುವ ಸಾಮಗ್ರಿಗಳು :  ಹಲಸಿನ ಹಣ್ಣು 1 ಕಪ್. ಜಾರ್…

2 days ago