ಒಂದು ದಿನ ದಿಢೀರ್ ಆಗಿ ಗೆಳತಿಯರನ್ನು ಕರೆದು ಕೊಂಡು ಮನೆಗೆ ಬಂದಿದ್ದೆ. ಮೊದಲೇ ಹೇಳಿದ್ದರೆ ಅಮ್ಮ ಏನಾದರೂ ಮಾಡಿ ಇಡುತ್ತಿದ್ದಳು. ಹುಡುಗು ಬುದ್ಧಿ . ಸೀದಾ ಕರೆದುಕೊಂಡು ಬಂದಿದ್ದೆ. ಅಮ್ಮ ಅನುಭವಿ ತಾನೇ. ಮಕ್ಕಳು ಬಂದರೆಂದು ಒಳಗೆ ಹೋಗಿ ಬೆಳ್ತಿಗೆ ಅಕ್ಕಿ ನೀರಿಗೆ ಹಾಕಿ ಇಟ್ಟಳು. ಆಮೇಲೆ ಅದು ಇದು ಮಾತನಾಡಿ ಸಮಯ ಕಳೆದದ್ದಾಯಿತು. ನಮ್ಮ ಹಳ್ಳಿ, ತೋಟ , ಗುಡ್ಡೆ ಸುತ್ತಿದ್ದಾಯಿತು. ಸಂಜೆಯಾಗುತ್ತಿ ದ್ದಂತೆ ಹೊಟ್ಟೆ ತಾಳ ಹಾಕಲಾರಂಭಿ ಸಿತು. ಮನೆಗೆ ಹೋಗಿ ಏನಾದರೂ ಹೊಟ್ಟೆಗೆ ಹಾಕಲೇ ಬೇಕಿತ್ತು. ಅಮ್ಮ ಏನು ಮಾಡಿಯಾಳಪ್ಪಾ ಎಂದು ಒಳಗೊಳಗೆ ಪುಕು ಪುಕು ಆಗಲಾರಂಭಿಸಿತು.
ಮನೆಗೆ ಬಂದರೆ ಅಮ್ಮ ಗಡಿಬಿಡಿ ಯಲ್ಲಿ ಓಡಾಡುತ್ತಿದ್ದಳು. ಏಲಕ್ಕಿ ಪರಿಮಳವೂ ಬರುತ್ತಿತ್ತು. ಏನೋ ಮಾಡಿದ್ದಾಳೆ ಅಂತ ಖಾತ್ರಿಯಾಯಿತು. ಬಾಳೆಎಲೆ ಇಟ್ಟು ಗೆಳತಿಯರನ್ನು ತಿಂಡಿಗೆ ಕರೆಯಲು ಹೇಳಿದಳು. ಅಮ್ಮ ಎರಡೆರಡು ಕಾವಲಿ ಇಟ್ಟು ಒಲೆಯ ಮುಂದೆ ಕುಳಿತಿದ್ದಳು. ದಷ್ಟು ದೋಸೆ ಮಾಡಿಯಾಗಿತ್ತು. ಎಲ್ಲರಿಗೂ ದೋಸೆ ಬಡಿಸಲು ಹೇಳಿದಳು. ಜೊತೆಗೆ ಅಮ್ಮ ಮಾಡಿಟ್ಟ ಬಾಳೆಹಣ್ಣು ರಸಾಯನ. ಮೊದಲ ಬಾರಿಗೆ ನಾನು ಆಶ್ಚರ್ಯ ಪಟ್ಟೆ. ಬಡಿಸಿದಂತೆ ಬಾಳೆ ಖಾಲಿ ಮಾಡುತ್ತಿದ್ದ ಗೆಳತಿಯರನ್ನು ನೋಡಿಯೇ ಬಾಕಿ. ನಮಗೆ ಈ ದೋಸೆ ಮಾಮೂಲು. ಅಮ್ಮನ ಬಳಿ ಯಾಕೆ ಮಾಡಿದ್ದೆಂದು ಜಗಳ ಮಾಡಿಕೊಂಡೇ ತಿಂದು ಅಭ್ಯಾಸ. ಈಗ ಗೆಳತಿಯರು ಇಷ್ಟಪಟ್ಟು ತಿನ್ನುವುದು ನೋಡಿದರೆ ಅಮ್ಮ ಏನೋ ಮ್ಯಾಜಿಕ್ ಮಾಡಿರಬೇಕು ಎನಿಸಿತು. ಕೊನೆಯಲ್ಲಿ ಎಂತ ತಿಂಡಿಯಮ್ಮ ಇದು ನಾವು ಮೊದಲ ಬಾರಿ ತಿನ್ನುತ್ತಿದ್ದೇವೆ , ತುಂಬಾ ರುಚಿಯಾಗಿದೆ ಇನ್ನೂ ತಿನ್ನೋಣವೆನಿಸುತ್ತಿದೆ. ನಾಳೆ ಬೆಳಿಗ್ಗೆಯೂ ಇದೇ ತಿಂಡಿ ಮಾಡಬಹುದಾ ಅಮ್ಮ ನಾವು ಬೇಕಾದರೆ ಸಹಾಯ ಮಾಡುತ್ತೇವೆ ಎನ್ನುವುದೇ!!!!!. ಇದು ನೋಡಿ ಈ ತಿಂಡಿಯ ಮ್ಯಾಜಿಕ್.
‘ನೀರು ದೋಸೆ’. ನಮ್ಮ ಕರಾವಳಿಗರ ವಿಶೇಷವಾದ ತಿಂಡಿ. ಹೆಚ್ಚಿನ ಸಾಮಗ್ರಿಗಳನ್ನು ಬಯಸದೆ ಕೇವಲ ಬೆಳ್ತಿಗೆ ಅಕ್ಕಿ , ಉಪ್ಪು ತಕ್ಕಷ್ಟು ನೀರು ಇಷ್ಟೇ. ಸುಲಭದ ತಿಂಡಿ. ಆದರೆ ಒಲಿಸಿಕೊಳ್ಳುವುದು ಸುಲಭವಲ್ಲ. ಹಿಟ್ಟು ಒಂದು ಹದದಲ್ಲಿ ಸಿದ್ದಪಡಿಸಿ ಕೊಳ್ಳದಿದ್ದರೆ ದೋಸೆ ಕಾವಲಿಯಿಂದ ಮೇಲೇಳದು. ಬಾರೀ ದಪ್ಪಗಾದರೆ ರುಚಿಯಿರದು.ಹಾಗೆಂದು ಅಳತೆಗಿಂತ ಜಾಸ್ತಿ ನೀರು ಹಾಕಿದರೆ ಪಿಚಿಪಿಚಿ ಎಂದು ಕಾವಲಿಗೇ ಅಂಟಿ ಹಿಡಿಯುವುದು. ಯಾವ ಸಾಹಸ ಮಾಡಿದರೂ ಸೋಲೊಪ್ಪಿಯೇ ತೀರ ಬೇಕು. ಎಲ್ಲಾ ಸರಿಯಾಯಿತೆನ್ನುವಾಗ ಅಕ್ಕಿ ಮುಗಿದು ಹೊಸ ಅಕ್ಕಿ. ಮತ್ತೆ ರಿಹರ್ಸಲ್. ಒಂದೊಂದು ಅಕ್ಕಿಗೆ ಒಂದೊಂದು ಪಾಕ. ಕೆಲವು ಅಕ್ಕಿಗೆ ನೀರು ಜಾಸ್ತಿ ಇನ್ನು ಕೆಲವಕ್ಕೆ ಕಮ್ಮಿ. ಅಡುಗೆಯಲ್ಲಿ ಹಿಡಿತ ಇರುವವರನ್ನು ಕೂಡ ಕನ್ ಪ್ಯೂಸ್
ಮಾಡಿಬಿಡುತ್ತದೆ ಒಂದೆರಡು ದೋಸೆ ಹೊಯ್ಯುವ ತನಕ. ತೆಳ್ಳಗೆ ಬೆಳ್ಳಗೆ ಮೆತ್ತಗೆ ಇರುವ ನೀರುದೋಸೆ ಯಾವಾಗಲೂ ಎಲ್ಲರಿಗೂ ಇಷ್ಟವಾಗುವ ಬೆಳಗಿನ ಉಪಹಾರ. ಇದು ಚಟ್ನಿ ಯೊಂದಿಗೂ ಹೊಂದುತ್ತದೆ. ರಸಾಯನ ,ರವೆ, ಜೇನು, ಸಾಂಬಾರು ,ಕಾಯಿ ಬೆಲ್ಲ ಯಾವುದಕ್ಕೂ ನೀರು ದೋಸೆಯೊಂದಿಗೆ ತಿನ್ನಬಹುದು. ಯಾವುದೇ ಪಥ್ಯಕ್ಕಾದರೂ ನೀರುದೋಸೆ ಆಗದೆಂಬುದಿರಲಿಕ್ಕಿಲ್ಲ. ಈ ದೋಸೆಯ ಇನ್ನೊಂದು ವಿಶೇಷವೆಂದರೆ ಇದರಿಂದ ಪಾಯಸವನ್ನೂ ಮಾಡುತ್ತಾರೆ. ಅದೇ ದೋಸೆ ಪಾಯಸ. ಕಾಯಿಹಾಲು ,ಬೆಲ್ಲ ಬಳಸಿ ಮಾಡುವ ಪಾಯಸ ಯಾವತ್ತೂ ಬೇಸರ ತರಿಸದು. ದಿಢೀರ್ ಅತಿಥಿ ಸತ್ಕಾರದ ಒಂದು ಉಪಾಯವೂ ಹೌದು.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel