ಬೆಳ್ಳಾರೆ: ಗ್ರಾಮೀಣ ಬ್ಯಾಂಕ್ ಅಂಚೆ ಕಚೇರಿ. ಇದೀಗ ನೆಟ್ ವರ್ಕ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸ್ಥಳಾಂತರವಾಗುತ್ತದೆ ಎಂದಾದರೆ ಗ್ರಾಮೀಣ ಭಾಗದ ಅಭಿವೃದ್ಧಿ ಹೇಗೆ ಮತ್ತು ಯಾವಾಗ ?
ಇತ್ತೀಚೆಗೆ ಅಂಚೆ ಕಚೇರಿಯೂ ಡಿಜಿಟಲ್ ಇಂಡಿಯಾ ವ್ಯಾಪ್ತಿಗೆ ಬಂದಿದೆ. ಎಲ್ಲಾ ವ್ಯವಹಾರವೂ ಡಿಜಿಟಲ್ ಆಗುತ್ತಿದೆ. ಪಾಸ್ ಪುಸ್ತಕ ಎಂಟ್ರಿಯಿಂದ ತೊಡಗಿ ಹಣ ಡಿಪೊಸಿಟ್ ಮಾಡಲು ಹಾಗೂ ಹಣ ಡ್ರಾ ಮಾಡಲು ಈಗ ನೆಟ್ ವರ್ಕ್ ಬೇಕೇ ಬೇಕು. ಇದಕ್ಕಾಗಿ ಅಂಚೆ ಕಚೇರಿಗೆ ಬಿಎಸ್ ಎನ್ ಎಲ್ ಹಾಗೂ ಇತರ ನೆಟ್ ವರ್ಕ್ ಬಳಸಿಕೊಂಡು ಇಂಟರ್ನೆಟ್ ಬಳಕೆ ಮಾಡಲು ಸೂಚನೆ ಇದೆ. ಯಾವುದೇ ನೆಟ್ ವರ್ಕ್ ಸರಿಯಾಗಿ ಸಿಗದ ಕಡೆ ಅಂಚೆ ಕಚೇರಿಯೇ ಸ್ಥಳಾಂತರವಾಗುತ್ತದೆ…!. ಹೇಗಿದೆ ವ್ಯವಸ್ಥೆ..!. ಹಿಂದೆಲ್ಲಾ ಹೇಳುತ್ತಿದ್ದರು ಮನೆ ಕಟ್ಟುವಾಗ ಈಗ ಮೊಬೈಲ್ ಸಿಗ್ನಲ್, 3ಜಿ, 4ಜಿ ಸಿಗುವಲ್ಲೇ ಕಟ್ಟಬೇಕೆಂದು. ಈಗ ಅಂಚೆ ಕಚೇರಿಯೂ ಅದೇ ಹಾದಿಯಲ್ಲಿ ಸಾಗಿದೆ. ಇದಕ್ಕೆ ಇಲಾಖೆ ವ್ಯವಸ್ಥೆ ದೂರು ಪ್ರಯೋಜನ ಇಲ್ಲ ನೆಟ್ ವರ್ಕ್ ಹೇಗೆ ನೀಡಬೇಕು ಹಾಗೂ ನೀಡಬಹುದು ಎಂಬುದರ ಬಗ್ಗೆ ಯೋಚನೆ ನಡೆಯಬೇಕಿತ್ತು. ಇದಕ್ಕೆ ಉದಾಹರಣೆಯಾಗಿದೆ ಮುಕ್ಕೂರು ಅಂಚೆ ಕಚೇರಿ.
ಸುಮಾರು ಐವತ್ತು ವರ್ಷಗಳಿಗಿಂತ ಅಧಿಕ ಕಾಲದಿಂದ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಚೇರಿಯನ್ನು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಪೆರುವಾಜೆ ಗ್ರಾ.ಪಂ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ಅಂಚೆ ಕಚೇರಿಯಲ್ಲಿ ವ್ಯವಹಾರ ಹೊಂದಿದ ನೂರಾರು ಗ್ರಾಹಕರಿಗೆ ತೊಂದರೆಯಾಗಿದೆ. ಮೇ22ರ ನಂತರ ಅಂಚೆ ಕಚೇರಿಯ ವ್ಯವಹಾರಕ್ಕೆಂದು ಬಂದವರಿಗೆ ಬಾಗಿಲಿಗೆ ಅಂಟಿಸಿದ ಸ್ಥಳಾಂತರ ಮಾಹಿತಿಯ ನೋಟಿಸ್ ಕಂಡು ವಿಷಯ ಗೊತ್ತಾಗಿದೆ. ಸ್ಥಳಾಂತರಿಸುವ ಬಗ್ಗೆ ಯಾವುದೇ ಮಾಹಿತಿ ಗ್ರಾಹಕರ ಗಮನಕ್ಕೆ ಬಂದಿಲ್ಲ. ಜನರಿಗೆ ಅನುಕೂಲಕರವಾಗಿದ್ದ ಅಂಚೆ ಕಚೇರಿಯನ್ನು ದಿಢೀರ್ ವರ್ಗಾಯಿಸಿದ್ದನ್ನು ಖಂಡಿಸಿ ಮುಕ್ಕೂರಿನ ಭಾಗದ ಜನತೆ ಹೋರಾಟಕ್ಕೆ ಸಿದ್ದತೆ ನಡೆಸುತ್ತಿದೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡ ಶಿಥಿಲವಾಗಿದ್ದು, ನೆಟ್ವರ್ಕ್ ಸಮಸ್ಯೆ ಇರುವುದರಿಂದ ಸ್ಥಳಾಂತರ ಅನಿವಾರ್ಯವಾಗಿದೆ ಎಂದು ಅಂಚೆ ಕಚೇರಿ ಮೂಲಗಳು ತಿಳಿಸಿದೆ. ಪ್ರಮುಖವಾಗಿ ಕೇಂದ್ರ ಸರ್ಕಾರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಜಾರಿ ಮಾಡಿದ್ದು, ಇದರ ಮೂಲಕ ಶಾಲಾ ಮಕ್ಕಳಿಗೆ ಸ್ಕಾಲರ್‍ಶಿಪ್ ನೀಡಬೇಕಿದೆ. ಮಕ್ಕಳ ಅಕೌಂಟ್ ಮೊಬೈಲ್ ಮೂಲಕವೇ ಆಗಬೇಕಿದೆ. ಮುಕ್ಕೂರಿನಲ್ಲಿ ನೆಟ್ವರ್ಕ್ ಸಮಸ್ಯೆ ತೀವ್ರ ಇರುವುದರಿಂದ ಕಚೇರಿಯನ್ನು ಸ್ಥಳಾಂತರಿಸಲೇಬೇಕಿದೆ ಎಂಬುದು ಅಂಚೆ ಇಲಾಖೆಯ ಮಾತು.
ಒಂದೇ ಸರಕಾರದ ಎರಡು ಇಲಾಖೆಗಳು ಇವೆ. ಅದೇ ಸರಕಾರದ ಸಂಸದರು, ಶಾಸಕರು ಇದ್ದಾರೆ. ಎಲ್ಲರೂ ಮಾತನಾಡಿದರೆ ಏಕೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಬಿ ಎಸ್ ಎನ್ ಎಲ್ ಕೇಂದ್ರ ಸರಕಾರದ್ದು ಅಂಚೆ ಕಚೇರಿಯೂ ಕೇಂದ್ರ ಸರಕಾರದ್ದು ಸಂಸದರೂ ಆಡಳಿತ ಪಕ್ಷದವರೇ ಆಗಿದ್ದಾರೆ. ಹೀಗಾಗಿ ಪ್ರಯತ್ನ ಮಾಡಿದರೆ ಸಮಸ್ಯೆಗೆ ಮುಕ್ತಿ ಸಿಗಬಹುದು.