ಕಡಬ: ಅನೇಕ ವರ್ಷಗಳ ಬಳಿಕ ನೆತ್ತರ ಕೆರೆಯ ಒಡಲು ಬರಿದಾಗಿದೆ. ನೆತ್ತರ್ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು ಬಲ್ಲವರಿಲ್ಲ. ಆದರೆ ಈ ಭಾರಿ ಕಡಿಮೆಯಾಗಿರುವುದು ಬರದ ಛಾಯೆಯನ್ನು ತೊರಿಸುತ್ತದೆ. ಕೆರೆಯಲ್ಲಿ ನೀರು ಬತ್ತಿರುವುದರಿಂದ ಕೆರೆಯ ಕೆಳಗಿನ ಭಾಗದಲ್ಲಿನ ಕೆರೆ, ಕೊಳವೆಬಾವಿಯಲ್ಲಿ ನೀರು ಬತ್ತಿ ಹೋಗಿ ಕೃಷಿ ತೋಟಗಳು ಕರಟಿಹೋಗಿವೆ, ಕುಡಿಯಲು ನೀರಿಲ್ಲದಂತಾಗಿದೆ ಎಂದು ಸ್ಥಳೀಯರಾದ ಸೋಮನಾಥ ಗೌಡ ಹೇಳುತ್ತಿರುವುದು ಈ ಬಾರಿಯ ಬರದ ಛಾಯೆ ಮುಖ.
ಕಡಬ ತಾಲೂಕು ಕೊಯಿಲ ಗ್ರಾಮದ ಪಶುಸಂಗೋಪಾನ ಇಲಾಖಾ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಪಶುವೈದ್ಯಕೀಯ ಕಾಲೇಜಿಗೆ ಒಳಪಟ್ಟ ಜಾಗದಲ್ಲಿರುವ ನೆತ್ತರ್ ಕೆರೆಯ ತಳಕಾಣುತ್ತಿದೆ. ವರ್ಷ ಪೂರ್ತಿ ಜೀವಜಲ ತುಂಬಿರುತ್ತಿದ್ದ ಈ ಕೆರೆಯಲ್ಲಿ ಈ ಭಾರಿ ಬಿಸಿಲಿನ ತಾಪಕ್ಕೆ ನೀರು ಬತ್ತಿ ಹೋಗಿ ಬರದ ಬೀಕರತೆ ತೋರಿಸುತ್ತಿದೆ. ಬರಪೂರ ನೀರಿನ ಸೆಲೆಯಿರುವ ಐತಿಹ್ಯ ಉಳ್ಳ ಈ ಕೆರೆಯಲ್ಲಿ ಇದುವರೆಗೆ ನೀರು ಬತ್ತಿಲ್ಲ ಎಂಬುದು ಈ ಭಾಗದ ಹಿರಿಯರ ಅಭಿಪ್ರಾಯ. ಈ ಬಾರಿ ನೀರು ಬತ್ತಿ ಹೋಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಕೆಲ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ನೀರಿನ ಬವಣೆ ತಾರಕ್ಕೆ ಏರಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಮಳೆಗಾಲದಲ್ಲಿ ಮಾತ್ರ ನೀರು ಶೇಖರಣೆಯಾಗುತ್ತಿದ್ದ ಜಾಗವನ್ನು ಪಶುಸಂಗೋಪಾನ ಇಲಾಖಾ ವತಿಯಿಂದ ಸರಿ ಸುಮಾರು 1995 ರಲ್ಲಿ ಮಾನವ ಶ್ರಮದಿಂದ ಕೆರೆಯಾಗಿ ನಿರ್ಮಿಸಲಾಗಿತ್ತು. ಬಳಿಕ 2010 ರ ಸುಮಾರಿಗೆ ಪುನರ್ ನಿರ್ಮಾಣಗೊಳಿಸಲಾಗಿತ್ತು. ಈ ಕೆರೆಯಿರುವ ಜಾಗ ಪ್ರಸಕ್ತ ನಿರ್ಮಾಣವಾಗುತ್ತಿರುವ ಪಶುವೈದ್ಯಕೀಯ ಕಾಲೇಜು ಸುಪರ್ದಿಗೆ ಹಸ್ತಾಂತರವರೆಗೂ ಸಂವರ್ದನ ಕೇಂದ್ರದ ಉಪಯೋಗದಲ್ಲಿತ್ತು. ಈ ನೀರನ್ನು ಸಂವರ್ದನಾ ಕೇಂದ್ರದ ದನಗಳ ಆಹಾರಕ್ಕಾಗಿ ಬೆಳೆಯುತ್ತಿದ್ದ ಹುಲ್ಲುಗಾವಲಿಗೆ ಉಪಯೋಗಿಸಲಾಗುತ್ತಿತ್ತು. ಇದೀಗ ಕೆರೆಗೆ ಅಳವಡಿಸಿದ್ದ ಮೋಟರ್ ಪಂಪ್ ನ್ನು ಇಲಾಖೆ ತೆರವುಗೊಳಿಸಲಾಗಿದೆ.
ಈ ಕೆರೆಗೂ ಪಕ್ಕದ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಕ್ಕೂ ಸಂಬಂದವಿದೆ. ಈ ಕೆರೆ ನಿರ್ಮಾಣಕ್ಕೂ ಮುನ್ನವೇ ಇಲ್ಲಿ ಬೃಹದಕಾರದ ಕೆರೆಯಿತ್ತು. ಕಾಲನ ನಂತರ ಮಣ್ಣಿನಿಂದ ಕೆರೆ ಮುಚ್ಚಿ ಹೋಯಿತು. ಆದರೂ ವರ್ಷ ಪೂರ್ತಿ ಈ ಜಾಗದಲ್ಲಿ ನೀರಿನ ತೇವವಿತ್ತು. ಹಿರಿಯರು ಕೆರೆ ನಿರ್ಮಿಸುವ ಸಂದರ್ಭ ಶಿವನ ಮೂರ್ತಿ ಸಿಕ್ಕಿತ್ತು. ಕೆರೆ ನಿರ್ಮಾಣಕ್ಕೆ ಬಳಸುವ ಹಾರೆ ಈ ಶಿವನ ಮೂರ್ತಿಗೆ ತಾಗಿ ರಕ್ತ ಚೆಲ್ಲಿತ್ತು. ಆದ್ದರಿಂದ ಈ ಕೆರೆಗೆ ನೆತ್ತೆರ್ (ತುಳುವಿನಲ್ಲಿ ರಕ್ತಕ್ಕೆ ನೆತ್ತೆರ್ ಎನ್ನುತ್ತಾರೆ) ಕೆರೆಯೆಂದಾಯಿತು ಎನ್ನುವ ಹಿನ್ನೆಲೆಯ ಐತಿಹ್ಯವನ್ನು ಹಿರಿಯರು ಬಿಚ್ಚಿಡುತ್ತಾರೆ.
ಕೆರೆಯ ನೀರು ಆರಿರುವುದು ಸ್ಥಳೀಯರಿಗೆ ಇನ್ನಷ್ಟು ಆತಂಖ ಮೂಡಿಸಿದೆ, ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕೊಳವೆ ಬಾವಿ ಹೆಚ್ಚಾಗಿದೆ ಹೀಗಾಗಿ ಕೆರೆಯಲ್ಲಿ ನೀರಿನ ಒರತೆಯೂ ಕಡಿಮೆಯಾಗಿದೆ. ಮುಂದೇನು ಎಂಬ ಯೋಚನೆ ಶುರುವಾಗಿದೆ.