ಸುಬ್ರಹ್ಮಣ್ಯ: ಕರ್ನಾಟಕ ರಾಜ್ಯದಲ್ಲಿ ಅತಿವೃಷ್ಠಿಗೆ ತುತ್ತಾಗಿ ಸಂತ್ರಸ್ತರಾದವರಿಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ರೂ 1 ಕೋಟಿ ಮೊತ್ತದ ಸಹಾಯವನ್ನು ನೀಡಲು ಆಡಳಿತ ಮಂಡಳಿ ನಿರ್ಣಯಿಸಿದೆ. ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ರೂ.1ಕೋಟಿ ನೆರೆ ಪರಿಹಾರವನ್ನು ನೀಡುವುದಾಗಿ ಆಡಳಿತ ಮಂಡಳಿಯು ನಿರ್ಧಾರ ಮಾಡಿದೆ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಕ್ಕೆ ದೇವಳದ ಆಡಳಿತ ಮಂಡಳಿಯು ಈ ಬಗ್ಗೆ ತುರ್ತು ಸಭೆಯನ್ನು ಕರೆದು ಈ ನಿರ್ಣಯ ಕೈಗೊಂಡಿತು. ಭಕ್ತಾದಿಗಳಿಂದ ಶ್ರೀ ದೇವಳಕ್ಕೆ ಬರುವ ಆದಾಯದ ಒಂದಂಶವನ್ನು ರಾಜ್ಯದ ಜನತೆಯ ಕಷ್ಟಕ್ಕೆ ವಿನಿಯೋಗಿಸಲು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಒಮ್ಮತದ ಅಭಿಪ್ರಾಯ ಸೂಚಿಸಿದ್ದರು ಎಂದರು.
ಧನಸಹಾಯದೊಂದಿಗೆ ಶ್ರೀ ದೇವಳಕ್ಕೆ ಭಕ್ತರು ದಾನವಾಗಿ ನೀಡಿದ ಸೀರೆ, ದೋತಿ, ಪಂಚೆ, ಶಲ್ಯ, ಬೈರಾಸು, ರವಿಕೆ ಮೊದಲಾದುವುಗಳನ್ನು ಜಿಲ್ಲಾಧಿಕಾರಿಗಳ ಮತ್ತು ಸಹಾಯಕ ಆಯುಕ್ತರ ಸಹಕಾರದಿಂದ ನೆರೆ ಸಂತ್ರಸ್ಥರಿಗೆ ನೀಡಲು ತೀರ್ಮಾನಿಸಲಾಗಿದೆ. ಇದೀಗ ಶ್ರೀ ದೇವಳದಲ್ಲಿ 1050 ಪಂಚೆ, 573 ಸೀರೆ, 160 ಶಾಲು, 20 ರವಿಕೆ, 29 ಬ್ಯೆರಾಸು 29 ಇದೆ. ಇವುಗಳನ್ನು ಮಡಿಕೇರಿ, ವಿರಾಜಪೇಟೆ, ಬಂಟ್ವಾಳ, ಬೆಳ್ತಂಗಡಿ ಪರಿಸರದಲ್ಲಿ ನೆರೆಯಿಂದ ತೊಂದರೆಗೊಳಗಾದ ಜನರಿಗೆ ಶ್ರೀ ದೇವಳದ ಆಡಳಿತ ಮಂಡಳಿ ತೆರಳಿ ಅರ್ಹರಿಗೆ ನೀಡುವ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ನಿತ್ಯಾನಂದ ಮುಂಡೋಡಿ ಹೇಳಿದರು.
ಸುಬ್ರಹ್ಮಣ್ಯ ಪ್ರದೇಶದಲ್ಲೂ ದೇವಳದಿಂದ ನೆರವು: ಸುಬ್ರಹ್ಮಣ್ಯ ಪರಿಸರ ಹಾಗೂ ಸಮೀಪದ ಕುಲ್ಕುಂದ ಇತ್ಯಾದಿ ಕಡೆಗಳಲ್ಲಿ ನೆರೆ ನೀರು ಮನೆಯೊಳಗೆ ನುಗ್ಗಿತ್ತು. ಈ ಪ್ರದೇಶದಲ್ಲಿ ಹಾನಿಗೊಳಗಾಗಿ ನೆರೆ ನೀರಿನಿಂದ ಸಂತ್ರಸ್ತಗೊಂಡ ನಿರಾಶ್ರಿತರಾದ ಜನರಿಗೆ ಶ್ರೀ ದೇವಳದಿಂದ ಊಟೋಪಹಾರ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಲಾಗಿತ್ತು.ಅಲ್ಲದೆ ಗುಂಡ್ಯ, ಅಡ್ಡಹೊಳೆ, ಕಲ್ಮಕಾರಿನ ನಿರಾಶ್ರಿತರ ಕೇಂದ್ರಕ್ಕೆ ಬೋಜನ, ಉಪಹಾರ ವ್ಯವಸ್ಥೆ ಮಾಡಲಾಗಿದೆ ಎಂದು ನಿತ್ಯಾನಂದ ಮುಂಡೋಡಿ ಹೇಳಿದರು.
ಈ ಸಂದರ್ಭ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಆಡಳಿತ ಮಂಡಳಿ ಸದಸ್ಯರಾದ ಮಹೇಶ್‍ಕುಮಾರ್ ಕೆ.ಎಸ್ ಕರಿಕ್ಕಳ, ಕೆ. ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಗೌಡ ಬಳ್ಳೇರಿ, ಮಾಧವ ಡಿ, ರಾಜೀವಿ.ಆರ್.ರೈ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ಸತೀಶ್ ಕೂಜುಗೋಡು ಉಪಸ್ಥಿತರಿದ್ದರು.