ನೆರೆಮನೆಯವ ಮರ ಏರಿದನೆಂದು‌ ತಾನೂ‌ ಏರಿದರೆ…..?

April 10, 2020
4:07 PM

ಅದ್ಯಾಕೋ ನನ್ನ ಮನಸ್ಸು ಚಂಗನೆ ಮೂವತ್ತು ವರ್ಷಗಳ ಹಿಂದಕ್ಕೋಡಿತು. ಮನದಾಳದಿಂದ ವಾಸ್ತವದ ಬದುಕಿನ ದಿನಗಳಿಗೆ ತಾಳೆ ಹಾಕತೊಡಗಿತು. ಆ ದಿನಗಳೆಂದರೆ ಅಂದು ಅಳಿಕೆಯ ಸತ್ಯಸಾಯಿ ವಿದ್ಯಾ ಸಂಸ್ಥೆಗಳ ಪವಿತ್ರ ನೆಲದಲ್ಲಿ ನನ್ನ ಪಿಯುಸಿ ಪ್ರಥಮ ವರ್ಷದ ತರಗತಿ ಪ್ರಾರಂಭವಾಗಿತ್ತು…

Advertisement
Advertisement
Advertisement

ಎಸ್ ಎಸ್ ಎಲ್ ಸಿ ಯಲ್ಲಿ ಹೇಗೇಗೋ ಪಾಸಾದವನಿಗೆ ಅಳಿಕೆಯಲ್ಲಿ ಕಲಾ ವಿಭಾಗದಲ್ಲಿ ಅಧ್ಯಯನಕ್ಕೆ, ಹಿರಿಯರ ಪುಣ್ಯದ ಫಲವಾಗಿಯೋ ಎಂಬಂತೆ ಅವಕಾಶ ಸಿಕ್ಕಿತ್ತು. ತರಗತಿಗಳು ಪ್ರಾರಂಭಗೊಂಡಿತು, ಪಾಠ ಪ್ರವಚನಗಳು ಮುಂದುವರಿಯತೊಡಗಿತು. ಸಮಾಜ ಶಾಸ್ತ್ರಕ್ಕೆ ಅಂದರೆ ಸೋಶಿಯೋಲಜಿಗೆ ದುಂಡಪ್ಪ ಬನ್ಸೋಡೆ ಎಂಬ ಉತ್ತರ ಕರ್ನಾಟಕದ ಲೆಕ್ಚರರ್ . ಇವರೊಬ್ಬ ಅತ್ಯುತ್ತಮ ಸಹೃದಯಿ ಅದ್ಯಾಪಕರು,ಮಕ್ಕಳ ಮನ ಹೊಕ್ಕು ಪಾಠದ ಸಾರವನ್ನು ಮನದೊಳಗೆ ಗಟ್ಟಿಗೊಳಿಸುವ ಅಸಾಧಾರಣ ಶಕ್ತಿ ಇವರಲ್ಲಿತ್ತು.ಮೊದಲ ಪಾಠ “ಸೊಸೈಟಿ” ಅಂದರೆ “ಸಮಾಜ”. What is society..ಎಂಬುದು ಪಾಠದ ಮೊದಲ ಸಾಲುಗಳು. “Society is a web of social relationships” ಅಂದರೆ ಸಮಾಜ ಎಂಬುದು ಪರಸ್ಪರ ಸಂಭಂಧಗಳಿಂದ ಹೆಣೆದುಕೊಂಡ ಜಾಲ..ಎಂದು ಸರಳ ವಿವರಣೆ… ಯಬ್ಬಾ….ಆ ದಿನಗಳಲ್ಲಿ ಈ ಮಂಕು ತಲೆಗೆ ಈ ವಿವರಣೆ ಹತ್ತುತ್ತಾನೇ ಇರಲಿಲ್ಲ.ಆದರೆ ದುಂಡಪ್ಪರು ಅದನ್ನು ಅರೆದರೆದು ಬಾಯಿಪಾಠ ಮಾಡಿಸಿದ ಪಲ ಆ ವಾಕ್ಯಗಳು ನನಗೆ ಇಂದೂ ನೆನಪಿದೆ.ಇರಲಿ.ಇಲ್ಲಿರುವ ವಿಷಯವೆಂದರೆ ತುಂಬಾ ಸರಳ…ಸಮಾಜ ಎಂದರೆ ಅದೊಂದು ಪರಸ್ಪರಾವಲಂಬಿತ ಒಂದು ಕೂಟ. ನೀ ನನಗಿದ್ದರೆ ನಾ ನಿನಗೆ ಎಂಬ ಆಂತರಿಕ ಧ್ಯೇಯ.ಇಷ್ಟು ಪೀಠಿಕೆಯೊಂದಿಗೆ ವಿಷಯಕ್ಕೆ ಇನ್ನು ಬರುತ್ತೇನೆ.

Advertisement

ಇಂದಿನ ಘೋಷಿತ ಬಂದ್ ದಿನಗಳಲ್ಲಿ ಎಲ್ಲಿ ,ಯಾರಲ್ಲಿ ಮಾತನಾಡಿದರೂ ಪಕ್ಕನೆ ಬಾಯಲ್ಲೋಡುವ ವಿಷಯ ಅಂದರೆ …ಒಯಿ ಬೆಂಗಳೂರಲ್ಲಿ ಕೆಲಸವಿಲ್ಲವಂತೆ,ಸೋಪ್ಟ್ವೆರ್ ನಲ್ಲಿ ಉದ್ಯೋಗ ಕಡಿತವಾಯಿತಂತೆ…. ಅಮೇರಿಕಾದಲ್ಲಿ ರಿಸೆಷನಂತೆ, ಉದ್ಯೋಗ ಕಡಿತವಂತೆ, ಚೆನ್ನೈನಲ್ಲಿ ಫ್ಯಾಕ್ಟರಿಗಳು ಬಾಗಿಲು ಹಾಕಿದವಂತೆ….. ಅವರೆಲ್ಲಾ ಊರಿಗೆ ಬರುತ್ತಿದ್ದಾರಂತೆ….. ಅವರ ಮಗ ತನ್ನ ಕೃಷಿಭೂಮಿಯನ್ನು ಹಸನು ಮಾಡಿದನಂತೆ,ಮತ್ತೊಬ್ಬ ಸ್ವತಃ ಟ್ರಾಕ್ಟರ್, ಟಿಲ್ಲರ್ ಓಡಿಸಿ ನೇಗಿಲಯೊಗಿಯಾದನಂತೆ….ಹಳ್ಳಿಗೆ,ಮನೆಕಡೆಗೆ ಬಂದಾತ ಹೀರೋ ಪೇಟೆಯಲ್ಲೋ ಇನ್ನೆಲ್ಲೋ ಉಳಿದಾತ ಸ್ವಲ್ಪ ಮಟ್ಟಿಗೆ ವಿಲನ್ ಎಂಬ ಒಳದಾಟಿಯ ನೋಟಗಳು….ಅದೂ ಇದೂ ಯಶೋಗಾಥೆಗಳು, ಓತಪ್ರೋತ ಮಾತುಗಳು…ಬರಹಗಳು ಸಾಲು ಸಾಲು. ಆದರೆ ಹೀಗೆ ಮಾತನಾಡುವಾಗ,ಬರೆಯುವಾಗ ಸಮಾಜದ ಇನ್ನೊಂದು ಆಯಾಮ ನಾವು ಗಮನಿಸಿದ್ದೇವಾ,ಇಲ್ಲ ಅಲ್ಲವೇ. ಹೌದು,ಕೇವಲ ಒಮ್ಮುಖದ ತೀರ್ಮಾನಗಳನ್ನೇ ಸಾರ್ವತ್ರಿಕಗೊಳಿಸುತಿದ್ದೇವೆಯೇ ಅನಿಸತೊಡಗಿತು.
ಹೌದಲ್ಲಾ… ಸಮಾಜ ಶಾಸ್ತ್ರದ ಮೊದಲ ಪಾಠ what is society …society is a web of social relationships…ಸಮಾಜ ಅಂದರೆ ಪರಸ್ಪರಾವಲಂಬಿತ ಸಂಬಂಧಗಳ ಒಂದು ಜಾಲ ಎಂಬುದನ್ನೇ ಮರೆತುಬಿಟ್ಟೆವಾ ಅನಿಸೋದಿಲ್ವೇ…

ಎಸ್.. ಮರೆತೇ ಬಿಟ್ಟಿದ್ದೇವೆ.

Advertisement

ಚಪ್ಪಾಳೆ ಸ್ವರ ಹೊರಡಬೇಕಾದರೆ ಎರಡೂ ಕೈಗಳು ಸೇರಬೇಕಲ್ಲಾ… ಅಂತೆಯೇ ಇಂದಿನ ಸಾಮಾಜಿಕ ಜೀವನದಲ್ಲಿ ನಾವೆಲ್ಲರೂ ಪರಸ್ಪರ ಅವಲಂಬಿತರೇ ಅಲ್ಲವೇ.

ಸಾಫ್ಟ್‌ವೇರ್ ಇಲ್ಲದೇ ಇದ್ದರೆ “ತೇನವಿನಾ ತೃಣಮಪಿ ನ ಚಲತಿ” ಎಂಬಂತೆ ಒಂದು ಹುಲ್ಲು ಕಡ್ಡಿಯೂ ಚಲಿಸೀತೇ, ಇಂಜಿನಿಯರ್ ಗಳಿಲ್ಲದಿದ್ದರೆ ಯಂತ್ರ ತಂತ್ರಜ್ಞಾನ ಬೆಳೆದೀತೇ, ಡಾಕ್ಟರ್, ಸರ್ಜನ್, ನರ್ಸ್ ಗಳಿಲ್ಲದಿದ್ದರೆ ನಾವೆಲ್ಲ ಕಾಲಕಾಲಕ್ಕೆ ಆರೋಗ್ಯದಿಂದ ಇರಬಹುದೇ, ಕಟ್ಟಡ, ಕಾಲುವೆ,ಸೇತುವೆ ಮುಂತಾಗಿ ನಿರ್ಮಾಣಗಳಲ್ಲಿ ನುರಿತ ಅಭಿಯಂತರರುಗಳಿಲ್ಲದಿದ್ದರೆ ಗಗನಚುಂಬಿ ಕಟ್ಟಡಗಳು ತಲೆ ಎತ್ತಿ ನಿಲ್ಲಬಹುದೇ, ವಿದ್ಯುತ್ ತಂತ್ರಜ್ಞಾನ, ರಾಕೆಟ್,ಸಂವಹನ ಮುಂತಾದ ಕ್ಷೇತ್ರಗಳು ಬೆಳೆಯಬಹುದೇ… ಸೇವಾ ವೃಂದದ ಪರಿಣತರು,ಅದ್ಯಾಪಕ ವೃಂದ, ವಕೀಲ ವೃಂದ, ಕಾರ್ಮಿಕ,ಶ್ರಮಿಕ ವೃಂದ ಮುಂತಾಗಿ ಎಷ್ಟೋ ಪರಿಣತರ ಪಡೆ ಇಲ್ಲದಿದ್ದರೆ ಸಮಾಜ ರಥ ನಡೆದೀತೇ… ಇಲ್ಲ . ಯಾವರೀತಿ ಕಾಷ್ಟಶಿಲ್ಪದ ಕೊನೆಯ ಅತೀ ಸಣ್ಣ ಕೀಲು ಇಡೀ ಶಿಲ್ಪವನ್ನೇ ಹಿಡಿದು ನಿಲ್ಲಿಸುತ್ತದೋ ಅಂತೆಯೇ ಅತೀ ಸಣ್ಣಾತನೆಂದು ಮೇಲ್ನೋಟಕ್ಕೆ ಕಾಣಬರುವ ವ್ಯಕ್ತಿಯೂ ಸಮಾಜ ರಥದ ಮೂಲಾಧಾರನಲ್ಲವೇ….. ಆದ್ದರಿಂದ ಸಮಾಜದಲ್ಲಿ ಪ್ರತಿಯೊಬ್ಬನೂ ‌ಅತೀ ಮುಖ್ಯ ಪಾತ್ರಧಾರಿಯೇ ಸರಿ.ಸಮಾಜದ ವ್ಯವಸ್ಥೆಯ ದೃಷ್ಟಿಯಲ್ಲಿ ಪೇಟೆ ಪಟ್ಟಣಗಳಲ್ಲಿರುವುದು ಇವರಿಗೆಲ್ಲ ಅನಿವಾರ್ಯವಾಗಿದೆ ಅಷ್ಟೇ ಹೊರತು ಬೇರೇನಿರದು ಅಲ್ಲವೇ. ಯಾರೂ ಹೆಚ್ಚೂ ಅಲ್ಲ ಕೀಳೂ ಅಲ್ಲ.ಪರಸ್ಪರ ಕೂಡಿ ,ಸಹಕರಿಸಿ ಬಾಳಿದಾಗ ಒಂದು ಸ್ವಸ್ಥ ಸಮಾಜ ತಲೆಯೆತ್ತಿ ನಿಲ್ಲಬಹುದು.

Advertisement

ಇಲ್ಲಿ ನಾವು ಗಮನಿಸಬೇಕಾದ್ದೆಂದರೆ ನಮ್ಮ ಪರಿಣತಿ,ಅವಕಾಶ, ಆಸಕ್ತಿಗಳಿಗೆ ಅನುಗುಣವಾಗಿ ನಾವು ನಮ್ಮ ಕೆಲಸ, ಉದ್ಯೋಗ ಆಯ್ದುಕೊಳ್ಳಬೇಕು. ಹೊರತು ನೆರೆಮನೆಯವ ಮರ ಏರಿದನೆಂದು ನಾನೂ ಏರಲು ಹೊರಟರೆ ಕೈ ಕಾಲುಗಳು ಸವೆದೀತಷ್ಟೇ ,ದಿನಗಳು ಉರುಳೀತಷ್ಟೇ ಹೊರತು ಬೇರೇನೂ ಸಾಧನೆಯಾಗದು. ಈ ಆಯ್ಕೆಗಳನ್ನು ಮಾಡುವಲ್ಲಿ ಜಾಣ್ಮೆಯಿರಲಿ.

ಸರ್ವಾರ್ಥ ಸಹಭಾಗಿತೆಗೆ
ರಾಷ್ಟ್ರ ಕುಲ ವರ್ಗ
ಸರ್ವದಣು ತಾನೆನುತ್ತ
ಓರೋರ್ವ ಮನುಜನ್
ಸರ್ವ ಜೀವ ಸಮೃದ್ಧಿಗೆ
ಅನುಗೂಡಿ ದುಡಿಯುತಿರೆ
ಪರ್ವವಂದಿಳೆಗೆ…ಮಂಕುತಿಮ್ಮ.

Advertisement
  • ಸುರೇಶ್ಚಂದ್ರ ತೊಟ್ಟೆತ್ತೋಡಿ,  ಕಲ್ಮಡ್ಕ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಮುಂಜಾನೆ ಏಳಬೇಕು, ಬೇಗನೇ ಏಳಬೇಕು
January 16, 2025
7:29 AM
by: ಡಾ.ಚಂದ್ರಶೇಖರ ದಾಮ್ಲೆ
ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ
January 9, 2025
10:49 AM
by: ಡಾ.ಚಂದ್ರಶೇಖರ ದಾಮ್ಲೆ
ಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕು
January 2, 2025
10:34 PM
by: ಡಾ.ಚಂದ್ರಶೇಖರ ದಾಮ್ಲೆ
ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು
December 26, 2024
11:10 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror