ನಡುಗಲ್ಲು: ಅವರು ಮಹಿಳೆ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಗ್ರಾಮೀಣ ವಿಕಲಚೇತನರ ಪುನರ್ವಸತಿ ಕಾರ್ಯಕರ್ತೆ. ಹಲವಾರು ಮಂದಿಗೆ ಸಹಾಯ ಮಾಡುತ್ತಾರೆ. ಇಲಾಖೆಯ ಮೂಲಕ ಬೇಕಾದ್ದು ತೆಗೆಸಿಕೊಡಲು, ನೋವುಂಡವರಿಗೆ ನೆರವಾಗುತ್ತಾರೆ, ಮನೆ ಇಲ್ಲದವರಿಗೆ ದಾರಿ ತೋರುತ್ತಾರೆ. ಇಂತಹ ಕಾರ್ಯಕರ್ತೆಯ ನೋವಿನ ಕತೆ ಕೇಳಲು ಜನರಿಲ್ಲ, ಕತೆ ಹೇಳಿಕೊಂಡು ಈ ಮಹಿಳೆ ಹೋಗುತ್ತಿಲ್ಲ…!. ಅದೇನು ಕತೆ ಇಲ್ಲಿದೆ ಓದಿ….
ಅವರು ಹುಟ್ಟು ವಿಕಲಚೇತನೆ. ನಡೆಯಲು ಅಸಾಧ್ಯವಾಗಿ ಕುಂಟುತ್ತಲೇ ನಡೆಯುವ ಸ್ಥಿತಿ. ಕೆಲಸವಿದ್ದರೂ ಕೆಲಸಕ್ಕೆ ಹೋಗಲಾಗದ ಅಸಹಾಯಕತೆ. ದೇಹಕ್ಕೆ ಅಂಟಿದ ಶಾಪಕ್ಕೆ ದೂರವಾದ ಗಂಡ. ಕಿತ್ತು ತಿನ್ನುವ ಬಡತನ. ಸ್ವಂತ ನೆಲೆಯಿಲ್ಲದೆ ಅಲೆದಾಟ. ಇಂತಹ ಅಘಾತಗಳಿಂದ ಕಂಗೆಟ್ಟ ಜೀವನ. ಇದು ವಿಕಲಚೇತನ ಹೊಂದಿದ ಆ ಮಹಿಳೆಯ ಕತೆಯಲ್ಲ, ಜೀವನ.
ಪಂಜ ಗ್ರಾಮದ ಐವತ್ತೊಕ್ಲು ಪಲ್ಲೋಡಿ ಮನೆ ಅವರ ಪತ್ನಿ ಮೀನಾಕ್ಷಿ ಹುಟ್ಟಿನಿಂದಲೆ ಕಾಲಿನ ಅಂಗವೈಕಲ್ಯತೆಗೆ ಒಳಗಾದವರು. ನಡೆದಾಡಲು ಕಷ್ಟ. ಕೆಲಸ ಮಾಡಲು ಆಗದ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಗಂಡ ಇವರನ್ನು ಕೈ ಹಿಡಿದು- ಕೈ ಬಿಟ್ಟಿದ್ದಾರೆ. ವಯಸ್ಸಿಗೆ ಬಂದ ಇಬ್ಬರು ಮಕ್ಕಳು ಇದ್ದಾರೆ. ಅವರು ಶಾಲೆಗೆ ಹೋಗುತ್ತಿದ್ದಾರೆ. ಇವರಿಗೆ ಸ್ವಂತ ನೆಲೆಯಿಲ್ಲ. ಹೀಗಾಗಿ ಅಲೆದಾಡುತ್ತ. ಸಿಕ್ಕಲೆಲ್ಲ ಕೆಲಸ ಮಾಡುತ್ತಲೇ ತಾಯಿ , ಮಕ್ಕಳಿಬ್ಬರನ್ನು ಸಾಕುತ್ತಿದ್ದಾರೆ.
ವಿಕಲಾಂಗತೆ ಎಂದು ಗೊತ್ತಿದ್ದರೂ ಮದುವೆಯಾಗಲು ಮುಂದೆ ಬಂದ ಗಂಡನ ಬಗ್ಗೆ ಗೌರವಿತ್ತು. ಮಕ್ಕಳಾದ ಬಳಿಕ ಗಂಡ ಮದ್ಯದ ದಾಸನಾದ. ಕೊನೆಗೆ ಪತ್ನಿಯಿಂದ ಆತ ದೂರವಾದ. ಬಳಿಕ ಬೀದಿಗೆ ಬಿದ್ದ ಮೀನಾಕ್ಷಿ ಕೂಲಿ ಕೆಲಸ ಮಾಡುತ್ತ ಗಂಡು ಮಕ್ಕಳಿಬ್ಬರನ್ನು ಸಾಕಲಾರಂಬಿಸಿದರು. ಸುಬ್ರಹ್ಮಣ್ಯ, ಗುತ್ತಿಗಾರು ಮುಂತಾದ ಕಡೆಗಳ ಅಂಗಡಿ ಹೊಟೇಲುಗಳಲ್ಲಿ ಕಾಲು ಸ್ವಾಧೀನವಿಲ್ಲದೆ ಇದ್ದರೂ ಹೋಗಿ ತೆರಳಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಮಕ್ಕಳಿಬ್ಬರನ್ನು ಓದಿಸಿ ಅವರ ಜೀವನದ ಭಾರ ಹೊತ್ತಿದ್ದಾರೆ.ಈಗ ಇವರು ಗುತ್ತಿಗಾರಿನ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪಕ್ಕದ ನಡುಗಲ್ಲಿನಲ್ಲಿ ಗುಡಿಸಲಿನಂತಹ ಕೊಠಡಿಯೊಂದನ್ನು ಕಡಿಮೆಗೆ ಬಾಡಿಗೆ ಪಡೆದು ಮಕ್ಕಳ ಜತೆ ಅಲ್ಲಿ ತಾತ್ಕಾಲಿಕ ವಾಸವಿದ್ದಾರೆ. ಮಕ್ಕಳಿಬ್ಬರು ಗುತ್ತಿಗಾರು ಶಾಲೆಗೆ ಹೋಗುತಿದ್ದು ಓರ್ವ ಪುತ್ರ 10ನೇ ತರಗತಿ ಮತ್ತು ಇನ್ನೋರ್ವ 9 ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.
ಗಂಡನಿಂದ ದೂರವಾದ ಬಳಿಕ ಸ್ಥಳೀಯ ಪ್ರಮುಖರೊಬ್ಬರಿಗೆ ಹೇಳಿದಾಗ ಪಲ್ಲೋಡಿಯಲ್ಲಿ ಒಂದು ಕಡೆ ಜಾಗವಿರುವ ಬಗ್ಗೆ ಮತ್ತು ಅಲ್ಲಿ ವಾಸವಿರುವಂತೆ ಸಲಹೆ ನೀಡಿದ್ದರು. ಬಳಿಕ ಮೀನಾಕ್ಷಿ ಅವರು ಪಲ್ಲೋಡಿಯ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದರು. ಅಂದು ತಾ.ಪಂ ಸದಸ್ಯೆಯೊಬ್ಬರು 20,000 ರೂ ಸಹಾಯಧನದ ಒದಗಿಸಿದ್ದು ಅದು ಸೇರಿ ಸಾಲ ಮಾಡಿ ಸಣ್ಣದೊಂದು ಶೆಡ್ ನಿರ್ಮಿಸಿಕೊಂಡಿದ್ದಾರೆ.ಶೆಡ್ ನಿರ್ಮಸಿದ ಅದೇ ಜಾಗಕ್ಕೆ 94ಸಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಅದು ನಿರಾಕರಿಸಲ್ಪಟ್ಟಿದೆ. ಪಡಿತರ ಚೀಟಿ, ಆಧಾರ್ ಕಾರ್ಡು ಎಲ್ಲವೂ ಇದೆ. 2008ರಿಂದ ಮನೆ ತೆರಿಗೆ ಪಾವತಿಸುತ್ತಿದ್ದಾರೆ. ಇಷ್ಟಿದ್ದರೂ ಶೋಷಿತ ಕುಟುಂಬಕ್ಕೆ ಇನ್ನು ಸೂರು ದೊರಕಿಲ್ಲ. ಯಾವ ಯೋಜನೆಯಲ್ಲೂ ನಿವೇಶನ ಮಂಜುರಾತಿಗೊಂಡಿಲ್ಲ…!
ಈ ಮಹಿಳೆ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಗ್ರಾಮೀಣ ವಿಕಲಚೇತನರ ಪುನರ್ವಸತಿ ಕಾರ್ಯಕರ್ತೆ ಕೂಡ. ಈ ಸೇವೆಗಾಗಿ ಮಾಸಿಕ 3000 ರೂ ವೇತನ ದೊರಕುತ್ತದೆ. ವಿಕಲಚೇತನ ಸಹಾಯಧನ 600 ರೂ ಮಾಸಿಕ ಬರುತ್ತದೆ ಹೊರತು ಪಡಿಸಿ ಬೇರೆನೂ ಆದಾಯವಿಲ್ಲ. ಶೆಡ್ ಇದ್ದರೂ ಅದನ್ನು ಸುಸಜ್ಜಿತಗೊಳಿಸಿ ಮನೆಯಾಗಿ ಪರಿವರ್ತಿಸಲು ಹಣವಿಲ್ಲ.
ಈ ಹಿಂದೆ ಸಚಿವರಾಗಿದ್ದ ಯು.ಟಿ ಖಾದರ್ ಅವರಿಗೆ ನಿವೇಶನ ಒದಗಿಸುವಂತೆ ಮನವಿ ಸಲ್ಲಿಸಿದ್ದರು. ಸಚಿವರು ತಹಶೀಲ್ದಾರ್ ಅವರಿಗೆ ಕ್ರಮಕ್ಕೆ ಸೂಚಿಸಿದ್ದರು. ಬಳಿಕವೂ ಫಲ ಸಿಕ್ಕಿಲ್ಲ. ವಿಕಲಚೇತನರ ಪುನರ್ವಸತಿ ಕಲ್ಯಾಣ ಇಲಾಖೆಗೂ ಅನೇಕ ಭಾರಿ ಮನವಿ ಸಲ್ಲಿಸಿದ್ದಾರೆ. ಎಲ್ಲ ಇಲಾಖೆಗಳಿಗೂ ಮನವಿ ಸಲ್ಲಿಸಿ ಸಹಾಯಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ಅತ್ತೆ ಮಾವ ಹಾಗೂ ತವರು ಮನೆಯ ಜತೆ ಮೀನಾಕ್ಷಿಯವರಿಗೆ ಒಳ್ಳೆಯ ಸಂಬಂಧವಿದೆ. ಮದುವೆ ಬಳಿಕವೂ ತವರು ಮನೆಯವರು ಸಾಕಷ್ಟು ಸಹಾಯ ಮಾಡಿದ್ದಾರೆ. ಮಕ್ಕಳನ್ನು ಒಳ್ಳೆ ದಾರಿಗೆ ಹಾಕಬೇಕು ಎನ್ನುವುದೆ ನನ್ನ ಕನಸು ಎಂದು ಕಣ್ಣೀರಿಡುತ್ತಿದ್ದಾರೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…