ತುಳುನಾಡು ಅಂದರೆ ಭೂತಾರಾಧನೆಗೆ ಮಹತ್ವ ಇರುವ ಜಿಲ್ಲೆ.ಇಲ್ಲಿ ಅನೇಕ ಬಗೆಯ ದೈವಗಳು ಜನರ ನಂಬಿಕೆಗೆ ಆಧಾರವಾಗಿ ಇಂಬು ನೀಡುತ್ತಿದೆ. ಬಹುತೇಕ ದೈವಗಳು ಆರಾಧನೆಯ ಕಾಲದಲ್ಲಿ ಜಿಲ್ಲೆಯ ಪ್ರಮುಖ ಆಡುಭಾಷೆಯಾದ ತುಳುವಿನಲ್ಲೇ ಮಾತನಾಡುತ್ತವೆ. ಆದರೆ ಅವಕ್ಕೆಲ್ಲಾ ಅಪರೂಪ ಎಂಬಂತೆ ಕನ್ನಡದಲ್ಲಿ ಮಾತನಾಡುವ ದೈವವೊಂದಿಗೆ.ಅದು ಮೊಗ್ರದ ಅಜ್ಜಿ ದೈವ. ಅತ್ಯಂತ ಕಾರಣಿಕದ ದೈವವಾಗಿ ಪ್ರಸಿದ್ದಿ ಪಡೆದಿದೆ. ಇದೀಗ ಇಲ್ಲಿ ಜಾತ್ರೆಯ ಸಂಭ್ರಮ. ಜ.21 ರಂದು ಭೈರಜ್ಜಿ ನೇಮ ನಡೆಯಲಿದೆ. ಜ.20 ರಂದು ಉಳ್ಳಾಕುಲ , ಕುಮಾರ ದೈವ, ಪುರುಷ ದೈವ ಹಾಗೂ ರಾತ್ರಿ ರುದ್ರಚಾಮುಂಡಿ, ಮಲೆಚಾಮುಂಡಿ ದೈವಗಳ ನೇಮ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬುದು ಪುಟ್ಟ ಹಳ್ಳಿ. ಆದರೆ ಜಾನಪದವಾಗಿ , ಸಾಂಸ್ಕೃತಿಕವಾಗಿ ಈ ಹಳ್ಳಿ ಅತ್ಯಂತ ಹೆಸರು ಪಡೆದಿರುವ ಊರು. ಇಲ್ಲಿನ ಆಚರಣೆಗಳು , ನಂಬಿಕೆಗಳು ಈ ಊರ ಜನರ ಮಾನಸಿಕ ನೆಮ್ಮದಿಯನ್ನು ಭದ್ರವಾಗಿಸಿದೆ. ಈ ಆಚರಣೆಗಳಿಂದ ಊರಿನಲ್ಲಿ ಮಾನವೀಯ ಸಂಬಂಧಗಳು ಇನ್ನೂ ಉಳಿದುಕೊಂಡಿದೆ. ಅಂತಹ ಆಚರಣೆಗಳಲ್ಲಿ ಇಲ್ಲಿನ ದೈವಾರಾಧನೆಯೂ ಒಂದು. ಇಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯಲ್ಲಿ ವಿವಿಧ ದೈವಗಳ ಆರಾಧನೆ ನಡೆಯುತ್ತದೆ. ಅಂದಾಜಿನ ಪ್ರಕಾರ ಸುಮಾರು 90 ಕ್ಕೂ ಅಧಿಕ ದೈವಗಳ ಆರಾಧನೆ ಇಲ್ಲಿನ ಕಾಲಾವಧಿ ಜಾತ್ರೋತ್ಸವದ ವೇಳೆ ನಡೆಯುತ್ತದೆ. ಅದರಲ್ಲಿ ಅಜ್ಜಿ ದೈವ ಅಥವಾ ಭೈರಜ್ಜಿ ದೈವ ಅತ್ಯಂತ ಮಹತ್ವದ ದೈವಗಾಗಿ ಇಡೀ ಊರನ್ನು ಮಾತ್ರವಲ್ಲ ಪರವೂರಿನ ಜನರ ನಂಬಿಕೆಗೂ ಪಾತ್ರವಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಈ ದೈವದ ಸೇವೆಗೆ ಆಗಮಿಸುವವರು ಸಂಖ್ಯೆಯೂ ಹೆಚ್ಚುತ್ತಿದೆ.
ದೈವದ ವಿಶೇಷತೆ ಇದು :
ಭೈರಜ್ಜಿ ದೈವ ಅಥವಾ ಅಜ್ಜಿ ದೈವವು ಸೀರೆ ಉಟ್ಟು , ಸೊಂಟದಲ್ಲಿ ಕತ್ತಿ , ಸೊಂಟ ಪಟ್ಟಿ ,ಕೈಯಲ್ಲಿ ಒಂದು ಕೋಲು ಸಹಿತ ಮುಖಕ್ಕೆ ಬಣ್ಣ ಹಾಕುತ್ತದೆ. ಇಲ್ಲಿ ವಿಶೇಷ ಎಂದರೆ ಎಲ್ಲಾ ದೈವಗಳು ಸಿರಿಯನ್ನು ಪ್ರಮುಖ ವಸ್ತುವಾಗಿ ಬಳಸಿದರೆ ಅಜ್ಜಿ ದೈವಕ್ಕೆ ಸಿರಿಯ ಬಳಕೆಯೇ ಇಲ್ಲ. ಈ ದೈವ ಕನ್ನಡದಲ್ಲೇ ಎಲ್ಲಾ ಹರಕೆಗಳನ್ನು , ನುಡಿಕಟ್ಟನ್ನು ಹೇಳುವುದು ಇನ್ನೊಂದು ಈ ದೈವದ ಪ್ರಮುಖ ಸಂಗತಿಯಾಗಿದೆ. ಅದೇ ರೀತಿ ಇದೊಂದು ಕಾರಣಿಕವಾದ ದೈವ ಅಂತಲೂ ನಂಬಲಾಗುತ್ತದೆ. ಮೊಗ್ರ ಈ ಭಾಗದ ಉಳ್ಳಾಕುಲ ಹಾಗೂ ಕುಮಾರ ದೈವಗಳ ಪರಿಚಾರಿಕೆಯಾಗಿ ಆಗಮಿಸಿ, ದೈವದ ರೂಪ ಪಡೆದುಕೊಂಡಿತು ಎನ್ನುವ ಕತೆಯೂ ಇದೆ. ಅನೇಕ ಕಡೆಗಳಲ್ಲಿ ಅಜ್ಜಿ ಕಟ್ಟೆ ಇದೆ ಆದರೆ ಕೋಲ ಇರುವುದಿಲ್ಲ. ಇಲ್ಲಿನ ಅಜ್ಜಿ ಎಂದರೆ ಶುಚಿತ್ವಕ್ಕೆ ಆದ್ಯತೆ ನೀಡುವ ದೈವವೂ ಆಗಿದೆ.ಹೀಗಾಗಿ ಹರಕೆಯ ರೂಪದಲ್ಲಿ ಕೆಲವರು ಪೊರಕೆಯನ್ನೂ ನೀಡುತ್ತಾರೆ.
ಮೊಗ್ರದ ಈ ಅಜ್ಜಿ ದೈವವು ನ್ಯಾಯ – ಅನ್ಯಾಯದಲ್ಲಿ ನ್ಯಾಯ ದೇವತೆಯಾಗಿ , ಸೋಲು-ಗೆಲುವಿನಲ್ಲಿ ಗೆಲುವಿನ ದೇವತೆಯಾಗಿ , ರೋಗ-ಆರೋಗ್ಯ ವಿಚಾರದಲ್ಲಿ ಆರೋಗ್ಯ ಪಾಲಕಳಾಗಿ , ಸಂತಾನ ರೂಪಿಯಾಗಿ ನಿಲ್ಲುತ್ತದೆ. ಅದರ ಜೊತೆಗೆ ಅತ್ಯಂತ ಮುಖ್ಯ ಎಂದರೆ ಕಳೆದುಹೋದ ವಸ್ತುಗಳನ್ನು ಪತ್ತೆಮಾಡಿಕೊಡುವ ದೈವವಾಗಿ ಇಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದೆ. ಹೀಗಾಗಿ ಇಲ್ಲಿನ ಅನೇಕರು ಹೊಸಬರಾಗಿ ಇಲ್ಲಿಗೆ ಪ್ರತೀ ವರ್ಷ ಒಂದಿಲ್ಲೊಂದು ವಿಚಾರದಲ್ಲಿ ಆಗಮಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ.
ಈ ದೈವದ ಮುಂದೆ ಪ್ರಾರ್ಥಿಸಿಕೊಂಡು ಮನಸ್ಸಿನಲ್ಲಿ ಹರಕೆಯನ್ನು ಸಂಕಲ್ಪಿಸಿಕೊಂಡರೆ ಒಂದು ವರ್ಷದೊಳಗೆ ಫಲ ಸಿಗುತ್ತದೆ ಎಂದು ಬಹುತೇಕ ಜನರು ನಂಬಿದ್ದಾರೆ. ಹೀಗಾಗಿ ತಮ್ಮ ಹರಕೆ ಈಡೇರಿದವರು ಚಿನ್ನ , ಬೆಳ್ಳಿ ಸಹಿತ ಸೀರೆ , ಕತ್ತಿ ಇತ್ಯಾದಿಗಳನ್ನು ನೀಡುತ್ತಾರೆ. ಇನ್ನು ಕೃಷಿ ಸಂಬಂಧಿತ ವಿಚಾರಗಳಿಗಾಗಿ ಸೀಯಾಳ, ಅಡಿಕೆ , ಹಿಂಗಾರ ಇತ್ಯಾದಿಗಳನ್ನೂ ನೀಡುತ್ತಾರೆ. ಅಜ್ಜಿ ದೈವಾದ್ದರಿಂದ ಸೀರೆ ಹಾಗೂ ಕತ್ತಿ ಈ ದೈವಕ್ಕೆ ಹೆಚ್ಚು ಹರಿಕೆ ರೂಪದಲ್ಲಿ ಬರುತ್ತದೆ. ಇತ್ತೀಚೆಗೆ ಅಧಿಕ ಪ್ರಮಾಣದಲ್ಲಿ ಸೀರೆ ಹಾಗೂ ಕತ್ತಿಗಳು ಹರಕೆ ರೂಪದಲ್ಲಿ ಬರುತ್ತಿರುವುದು ಮೊಗ್ರ ಅಜ್ಜಿ ದೈವದ ಬಗ್ಗೆ ಜನರ ನಂಬಿಕೆಯನ್ನು ವ್ಯಕ್ತಪಡಿಸುತ್ತದೆ.