ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಂಗಳವಾರ ನಡೆಯಿತು.
ಕೆ.ಪಿ.ಸಿ.ಸಿ ಕಾರ್ಯದರ್ಶಿ ಹಾಗು ನ.ಪಂ.ಅಭ್ಯರ್ಥಿ ಎಂ.ವೆಂಕಪ್ಪ ಗೌಡ ಸುದ್ದಿಗೋಷ್ಠಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ನಗರಕ್ಕೆ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಾಗುವುದು. ಇದಕ್ಕಾಗಿ ಪಯಸ್ವಿನಿ ನದಿಗೆ ವೆಂಟೆಡ್ ಡ್ಯಾಂ ನಿರ್ಮಿಸಿ ಶಾಶ್ವತ ಯೋಜನೆ ರೂಪಿಸಲಾಗುವುದು. ನಗರದಲ್ಲಿ ಒಳಚರಂಡಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುವುದು. ಪಯಸ್ವಿನಿ ನದಿಗೆ ನಗರದ ಕೊಳಚೆ ನೀರು ಹರಿಯವುದನ್ನು ತಡೆದು. ಕೊಳಚೆ ನೀರು ಒಳಚರಂಡಿಯಲ್ಲಿ ಹರಿಯುವಂತೆ ಮಾಡಲಾಗುವುದು. ಕಸ ವಿಲೇವಾರಿಗೆ ಶಾಶ್ವತ ಯೋಜನೆ ರೂಪಿಸಲಾಗುವುದು. ಮನೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದವರಿಗೆ ನಿವೇಶನ ಒದಗಿಸಲಾಗುವುದು. ಸುಳ್ಯ ನಗರದ ವಿದ್ಯುತ್ ಸಮಸ್ಯೆ ಪರಿಹರಿಸಲು 110 ಕೆ.ವಿ.ವಿದ್ಯುತ್ ಲೈನ್ ಅತೀ ತುರ್ತಾಗಿ ಅನುಷ್ಠಾನ ಮಾಡಲಾಗುವುದು. ರಾಜ್ಯ ಸರಕಾರದಿಂದ ವಿಶೇಷ ಅನುದಾನ ತಂದು ನಗರದ ಸಮಗ್ರ ಅಭಿವೃದ್ಧಿಗೆ ಪ್ರಯತ್ನ ನಡೆಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್ ಮುಖಂಡರು ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಅದನ್ನು ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗಳ ಪರಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಎಂ.ವೆಂಕಪ್ಪ ಗೌಡ ಹೇಳಿದರು. ಕಳೆದ 15 ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿ ನಗರದ ಅಭಿವೃದ್ಧಿಗೆ ಮತ್ತು ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಪ್ರಯತ್ನ ನಡೆಸಿಲ್ಲ ಎಂದು ಅವರು ಆರೋಪಿಸಿದರು.
ನ.ಪಂ.ಅಭ್ಯರ್ಥಿ ಕೆ.ಎಂ.ಮುಸ್ತಫಾ, ಕಾಂಗ್ರೆಸ್ ಮುಖಂಡರಾದ ಎಸ್.ಸಂಶುದ್ದೀನ್, ನಂದರಾಜ ಸಂಕೇಶ್, ಲಕ್ಷ್ಮಣ ಶೆಣೈ, ಇಬ್ರಾಹಿಂ ಉಪಸ್ಥಿತರಿದ್ದರು.