ಸುಳ್ಯ:ಅರಂತೋಡು, ಸಂಪಾಜೆ ಮತ್ತು ಪರಿಸರದಲ್ಲಿ ಬಾಧಿಸಿರುವ ಅಡಿಕೆ ಎಲೆ ಹಳದಿ ರೋಗದ ಕುರಿತು ಅಧ್ಯಯನ ಮತ್ತು ಬದಲಿ ಕೃಷಿಯ ಕುರಿತು ಸರಕಾರಕ್ಕೆ ಪರಿಣಾಮಕಾರಿ ರೀತಿಯಲ್ಲಿ ಹಕ್ಕೊತ್ತಾಯ ಮಂಡಿಸುವ ಸಲುವಾಗಿ ಅಡಿಕೆ ಎಲೆ ಹಳದಿ ಪೀಡಿತ ಪ್ರದೇಶದ ರೈತರ ಅಹವಾಲು ಸ್ವೀಕಾರ ಮತ್ತು ಬದಲಿ ಕೃಷಿಯ ಕುರಿತು ವಿಚಾರ ಸಂಕಿರಣವು ನ.೨ ರಂದು ಅರಂತೋಡು ಸಹಕಾರಿ ಸಂಘದ ಸಿರಿ ಸೌಧದಲ್ಲಿ ನಡೆಯಲಿದೆ.
ಅಡಿಕೆ ಎಲೆ ಹಳದಿ ರೋಗ ಇಂದು ತಾಲೂಕಿನ ಬಹುತೇಕ ಕಡೆಗಳಲ್ಲಿ ಪಸರಿಸಿದೆ. ಅರಂತೋಡು, ತೊಡಿಕಾನ, ಸಂಪಾಜೆ, ಆಲೆಟ್ಟಿ, ಉಬರಡ್ಕ, ಮರ್ಕಂಜ ಮತ್ತು ಮಡಪ್ಪಾಡಿ ಗ್ರಾಮದ ಶೇ.೭೦ರಷ್ಟು ತೋಟದಲ್ಲಿ ಅಡಿಕೆ ನಾಶದ ಅಂಚಿನಲ್ಲಿದೆ. ಕೊಡಗಿನ ಪೆರಾಜೆ, ಸಂಪಾಜೆ ಹಾಗೂ ಚೆಂಬು ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಇದೆ. ಹಳದಿ ರೋಗ ಪೀಡಿತ ಪ್ರದೇಶದ ಜಂಟಿ ಸಮೀಕ್ಷೆ ನಡೆಸುವುದು, ವಿಶೇಷ ಭಾದಿತ ಪ್ರದೇಶವೆಂದು ಘೋಷಣೆಗೆ ಮನವಿ, ವಿಶೇಷ ಆರ್ಥಿಕ ಪ್ಯಾಕೇಜ್‌ಗೆ ಮನವಿ, ರೈತರಿಗೆ ಬದಲಿ ಕೃಷಿಗೆ ಉತ್ತೇಜನ ಮೊದಲಾದ ಬೇಡಿಕೆಗಳನ್ನು ಹಕ್ಕೊತ್ತಾಯದ ರೀತಿಯಲ್ಲಿ ವಿಚಾರ ಸಂಕಿರಣದಲ್ಲಿ ಮಂಡಿಸಲಾಗುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಅಂಗಾರ ವಹಿಸಲಿದ್ದು, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ವಿಷಯ ಮಂಡನೆ ಮಾಡಲಿದ್ದಾರೆ. ಕ್ಯಾಂಪ್ಕೋ ಅಧ್ಯಕ್ಷ ಸತೀಶ್‌ಚಂದ್ರ ಎಸ್.ಆರ್, ತಾ.ಪಂ ಸದಸ್ಯೆ ಪುಷ್ಪಾ ಮೇದಪ್ಪ, ಅರಂತೋಡು ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಕೊಡಂಕೇರಿ, ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ, ತೋಟಗಾರಿಕಾ ಇಲಾಖೆ ಯ ಉಪನಿರ್ದೇಶಕ ಎಚ್ ಆರ್ ನಾಯಕ್, ತಹಶಿಲ್ದಾರ್ ಕುಂಞಿ ಅಹಮ್ಮದ್, ತಾಲೂಕು ಪಂ. ಕಾರ್ಯನಿರ್ವ ಹಣಾಧಿಕಾರಿ ಭವಾನಿಶಂಕರ ಎನ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.