ಇದೊಂದು ಡ್ರೈವಿಂಗ್ ಸ್ಕೂಲ್ ಮಾದರಿ. ಆದರೆ ವಾಹನ ಚಲಾಯಿಸಲು ಅಲ್ಲ. ಕೃಷಿಕನ ಉಳಿಸಲು ಹಾಗೂ ಕೃಷಿ ಉಳಿಯಲು ಮಾಡುವ ಪ್ರಯತ್ನ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಮೂರನೇ ಶಿಬಿರ, ಕಾಸರಗೋಡನ್ನೂ ಸೇರಿಸಿದರೆ ಇದು ನಾಲ್ಕನೆಯ ಶಿಬಿರ. ಏನಿದು ಸ್ಪೆಶಲ್ ಹಾಗೂ ಏಕೆ ಇದು ಸ್ಪೆಶಲ್ ?
ಅಡಿಕೆ ಬೆಳೆಗಾರರಿಗೆ ಕಳೆದ ಬಾರಿಯ ಮಳೆ ಹಾಗೂ ಕೊಳೆರೋಗದ ನೆನಪು ಈಗಲೂ ಭಯವಾಗಿ ಕಾಡುತ್ತಿದೆ. ಏಕೆಂದರೆ ಭಾರೀ ಮಳೆ ಪ್ರವಾಹ ಸೃಷ್ಠಿಸಿದರೆ , ಅಡಿಕೆಯ ಕೊಳೆರೋಗ ಇಡೀ ಫಸಲು, ಅಡಿಕೆ ಮರವನ್ನೇ ನಾಶ ಮಾಡಿದೆ. ಆಗಲೇ ಕೊಳೆರೋಗ ನಿಯಂತ್ರಣ ಹೇಗೆ ಎಂಬುದರ ಬಗ್ಗೆ ಯೋಚನೆ ಶುರುವಾಯಿತು. ಕೊಳೆರೋಗ ನಿಯಂತ್ರಣದ ಸುದ್ದಿ ಬಂದಾಗ ಮೊದಲು ಕಂಡದ್ದು ನುರಿತ ಕಾರ್ಮಿಕರ ಕೊರತೆ. ಇದಕ್ಕೇನು ಪರಿಹಾರ ಎಂದು ಯೋಚನೆ ನಡೆಯುತ್ತಲೇ ಇದ್ದಾಗ ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಅವರಿಗೆ ಶಿವಮೊಗ್ಗದ ತೀರ್ಥಹಳ್ಳಿಯ ‘ಎಲೈಟ್’ ಕೃಷಿಕರ ಬಳಗವು ಕೊನೆಗಾರ ತರಬೇತಿ ಏರ್ಪಡಿಸಿದ ಬಗ್ಗೆ ಸುದ್ದಿ ಸಿಕ್ಕಿದ ತಕ್ಷಣ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷ ಶಂ.ನಾ ಖಂಡಿಗೆ ಅವರನ್ನೂ ಜೊತೆ ಸೇರಿಸಿ ಶಿವಮೊಗ್ಗ ತಲಪಿ ಶಿಬಿರದ ಮಾಹಿತಿ ಪಡೆದರು.
ಆ ನಂತರ ಶುರುವಾದ್ದೇ ಆಂದೋಲನದ ರೂಪ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಡಿಕೆ ಕೊಯಿಲ ಮಾಡಲು, ಔಷಧಿ ಸಿಂಪಡಣೆಗೆ ಸೂಕ್ತವಾದ ತರಬೇತಿ ಅಗತ್ಯ ಎಂದು ಮನಗಂಡು ಕ್ಯಾಂಪ್ಕೋ ವತಿಯಿಂದ ತರಬೇತಿ ಶಿಬಿರ ನಡೆಸಲಾಯಿತು.ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಿ.ಪಿ.ಸಿ.ಆರ್.ಐ. ಆವರಣದಲ್ಲಿ ಈ ಶಿಬಿರ ಜರುಗಿತ್ತು. ಎರಡು ಶಿಬಿರದಲ್ಲಿ 53 ಮಂದಿ ಶಿಬಿರಾರ್ಥಿಗಳು ಮರ ಏರುವ ಶಿಕ್ಷಣ ಪಡೆದಿದ್ದಾರೆ. ಇಲ್ಲಿ ಕಲಿಕೆಗಾಗಿ ಸ್ವಾನುಭವದ ಪ್ರಾಕ್ಟಿಕಲ್ ಜ್ಞಾನದ ಅಲಿಖಿತ ಸಿಲೆಬಸ್. ಈ ರಂಗದಲ್ಲಿ ಈಗಾಗಲೇ ಒಂದು ಒಂದೂವರೆ ದಶಕಗಳ ಕಾಲ ದುಡಿದ ಅನುಭವಿಗಳಿಲ್ಲಿ ಅಧ್ಯಾಪಕರಾಗಿ ತರಬೇತಿ ಕೊಡುತ್ತಾರೆ.
ಆ ಬಳಿಕ ಸಹಕಾರಿ ಸಂಘಗಳ ಮೂಲಕ ಗ್ರಾಮಮಟ್ಟದಲ್ಲಿ ಇಂತಹ ಶಿಬಿರಗಳು ನಡೆಯಬೇಕು ಎಂಬ ಕಲ್ಪನೆ ಹುಟ್ಟಿಕೊಂಡಿತು. ಇಂದು ಸಹಕಾರಿ ಕ್ಷೇತ್ರವೇ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯ. ಹೀಗಾಗಿ ಇದರ ಭಾಗವಾಗಿ ಆರಂಭದಲ್ಲಿ ಪೆರ್ಲದ ಸಹಕಾರಿ ಸಂಘದ ಮೂಲಕ ಶಿಬಿರ ನಡೆಯಿತು. ಇದೀಗ ಮುಂದುವರಿದ ಭಾಗವಾಗಿ ಪಂಜದಲ್ಲಿ ಶಿಬಿರ ಆಯೋಜನೆಗೊಂಡಿದೆ. ಮೇ.6 ರಿಂದ 5 ದಿನಗಳ ಕಾಲ ಶಿಬಿರ ನಡೆಯಲಿದೆ.
ಪಂಜದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕಡಬ ಪ್ರಾಥಮಿಕ ಸಹಕಾರ ಸಂಘ ಜೇಸಿಐ ಪಂಜ ಪಂಚಶ್ರೀ ಮತ್ತು ಲಯನ್ಸ್ ಕ್ಲಬ್ ಪಂಜ ಇವುಗಳ ಜಂಟಿ ಆಶ್ರಯದಲ್ಲಿ “ಅಡಿಕೆ ಕೌಶಲ್ಯ ಸ್ವ ಉದ್ಯೋಗ ತರಬೇತಿ ಶಿಬಿರ” ಎಂಬ ಹೆಸರಿನಲ್ಲಿ ಮೇ. 6 ರಿಂದ 10 ರವರೆಗೆ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನ ಪಂಜ ಇಲ್ಲಿ ನಡೆಯಲಿದೆ.
ಕಾರ್ಯಕ್ರಮ ಹಾಗೂ ತರಬೇತಿ ಶಿಬಿರ ಹೀಗಿರುತ್ತದೆ :
ಮೇ.6 ರಂದು ಕಾರ್ಯಕ್ರಮವನ್ನು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಗೋಪಾಲಕೃಷ್ಣ ಭಟ್ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿ ಹಾಗೂ ಪಂಜ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಬಿ.ಎಂ. ಆನಂದ ಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಪಂಜದ ವೈದ್ಯಾಧಿಕಾರಿ ಡಾ. ಮಂಜುನಾಥ ಭಾಗವಹಿಸಲಿದ್ದಾರೆ. ಪಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ಬಳಿಕ ಶಿಬಿರಾರ್ಥಿಗಳ ನೋಂದಾವಣಿ, ರಕ್ತದ ಗುಂಪು ವರ್ಗೀಕರಣೆ, ಶಿಬಿರಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ಮಾಹಿತಿ ನಡೆಯಲಿದೆ.
ಮೇ.7 ರಂದು ಶಿಬಿರಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಬೋರ್ಡೋ ತಯಾರಿ ,ಕೃಷಿ ಮತ್ತು ರೋಗ ನಿರ್ವಹಣೆ ಬಗ್ಗೆ ಮಾಹಿತಿ, ಸಂಪನ್ಮೂಲ ವ್ಯಕ್ತಿ ಶ್ರೀ ಗೋಪಾಲಕೃಷ್ಣ ವಿಜ್ಞಾ ನಿ, ಸಿ.ಪಿ.ಸಿ.ಆರ್ .ಐ. ಕಿದು , ನೆಟ್ಟಣ ಭಾಗವಹಿಸಲಿದ್ದಾರೆ. ಗುತ್ತಿಗಾರು ಪ್ರಾ.ಕೃ.ಪ.ಸ ಸಂಘ ನಿ. ಅಧ್ಯಕ್ಷ ಕೇಶವ ಭಟ್ ಮುಳಿಯ ಉಪಸ್ಥಿತರಿರುವರು.
ಮೇ. 8ರಂದು ಶಿಬಿರಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಮಾನವೀಯ ಸಂಬಂಧಗಳು. ಸೇವಾ ಮನೋಭಾವನೆ,ಸ್ವಾವಲಂಭಿ ಬದುಕು, ಸಂಪನ್ಮೂಲ ವ್ಯಕ್ತಿಯಾಗಿ ಜೇಸಿ ಭಾರತದ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್ ಪಿ.ಎಸ್.ಭಾಗವಹಿಸಲಿದ್ದಾರೆ.
ಮೇ.9 ರಂದು ಶಿಬಿರಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ದುರ್ವ್ಯಸನ ಮುಕ್ತ ಬದುಕು ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೇತಿ ವೇದಿಕೆಯ ನಿರ್ದೇಶಕ ವಿವೇಕ್ ವಿನ್ಸಂಟ್ ಪಾಯಸ್ ಭಾಗವಹಿಸಲಿದ್ದಾರೆ. ಪಂಜ ಲಯನ್ಸ್ ಕ್ಲಬ್ ನ ಅಧ್ಯಕ್ಷ ತುಕರಾಮ ಏನೆಕಲ್ಲು ಉಪಸ್ಥಿತರಿರುವರು.
ಮೇ10ರಂದು ಶಿಬಿರಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಸಿಂಪರಣೆ ಪ್ರಾತ್ಯಕ್ಷತೆ. ಪಂಜ ಶ್ರೀ ಎಂಟರ್‍ಪ್ರೈಸಸ್‍ನ ಮಾಲಕ ರಜಿತ್ ಭಟ್ ಸಹಕರಿಸಲಿರುವರು.
ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಕಡಬ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ವಹಿಸಲಿದ್ದಾರೆ. ಅತಿಥಿಯಾಗಿ ಮಂಗಳೂರು ಕ್ಯಾಂಪ್ಕೋದ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಉಪಸ್ಥಿತರಿರುವರು.
ಶಿಬಿರದ ಆಯೋಜನೆಯ ಬಗ್ಗೆ ಮಾತನಾಡುವ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, “ಇಂದು ಸಹಕಾರ ಸಂಘಗಳ ಮೂಲಕವೇ ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈಗ ಅಡಿಕೆ ಮರ ಏರುವ ಕಾರ್ಮಿಕರ ಕೊರತೆ ನೀಗಿಸಲು ಹಾಗೂ ಸ್ವ ಉದ್ಯೋಗದ ಮೂಲಕವೂ ಕೃಷಿ ಬೆಳೆಸಲು ಸಾಧ್ಯವಿದೆ. ಈ ಕಾರಣದಿಂದ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರ ನಡೆಯಬೇಕು . ಇದರ ಜೊತೆಗೆ ಮರ ಏರುವ ವೃತ್ತಿಗೂ ಗೌರವ ದೊರೆಯುವಂತಾಗಬೇಕು” ಎನ್ನುತ್ತಾರೆ.