ಪಂಜ: ಅನಾರೋಗ್ಯ ಹಿನ್ನಲೆಯಲ್ಲಿ ಔಷಧಿ ತರಲೆಂದು ಪೇಟೆಗೆ ತೆರಳಿದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಪಂಜ ಸಮೀಪದ ಕೂತ್ಕುಂಜ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕೂತ್ಕುಂಜ ಕುದ್ವ ಶೇಷಪ್ಪ ಗೌಡ ನಾಪತ್ತೆಯಾದ ವ್ಯಕ್ತಿ. ಅವರು ಪಲ್ಲೋಡಿ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು ಈ ಹಿನ್ನಲೆಯಲ್ಲಿ ಬುಧವಾರ ಪಂಜದ ಹೊಳೆಯಲ್ಲಿ ಅವರ ಹುಡುಕಾಟ ನಡೆಯಿತು.
ಮಂಗಳವಾರ ಶೇಷಪ್ಪ ಗೌಡರು ಮೈ ಹುಷಾರಿಲ್ಲ ಎಂದು ಮನೆಯವರಲ್ಲಿ ಹೇಳಿ ಪಂಜ ಪೇಟೆಗೆ ತೆರಳಿದ್ದರು. ಬಳಿಕ ಅವರು ಮರಳಿ ಮನೆಗೆ ಬಂದಿರಲಿಲ್ಲ. ಅವರನ್ನು ಹುಡುಕುತ್ತ ಮಗ ಪಂಜದ ಕಡೆ ಹೊರಟಿದ್ದರು. ಕಾಲು ದಾರಿಯಲ್ಲಿ ಹುಡುಕುತ್ತ ಹೋಗುತಿದ್ದಾಗ ತೋಟದ ಪಕ್ಕ ಹರಿಯುವ ತೋಡಿಗೆ ಹಾಕಿದ್ದ ಮರದ ಪಾಲದ ಬದಿಗೆ ಅಳವಡಿಸಿದ ಅಡ್ಡ ತುಂಡಾಗಿ ಬಿದ್ದಿರುವುದು ಕಂಡು ಬಂದಿತ್ತು. ಸಂಶಯಗೊಂಡು ಹುಡುಕಾಟ ನಡೆಸಿದಾಗ ತೋಡಲ್ಲಿ ಅವರ ಚಪ್ಪಲಿ ಪತ್ತೆಯಾಗಿತ್ತು.
ಅವರು ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಶಂಕೆ ಹಿನ್ನಲೆಯಲ್ಲಿ ರಾತ್ರಿಯೇ ಗ್ರಹರಕ್ಷಕ ದಳದವರನ್ನು ಹಾಗೂ ಮುಳುಗು ತಜ್ಞರನ್ನು ಕರೆಯಿಸಿ ಬುಧವಾರ ಹುಡುಕಾಟ ನಡೆಸಲಾಯಿತು. ಸಂಜೆ ತನಕವೂ ಯಾವುದೇ ಸುಳಿವು ದೊರಕಿಲ್ಲ. ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಕುಂಞ ಅಹಮ್ಮದ್ ಭೇಟಿ ನೀಡಿ ಮಾಹಿತಿ ಪಡೆದರು.