ಪ್ರತೀ ಹದಿನೈದು ದಿನಗಳಿಗೊಮ್ಮೆ ಬರುತ್ತಿದ್ದ ಅಜ್ಜನ ಪತ್ರಗಳಿಗೆ ಎದುರು ನೋಡುತ್ತಿದ್ದ ಅಮ್ಮನ ಕಾತರದ ಮುಖ ಕಣ್ಣಿಗೆ ಕಟ್ಟಿದಂತಿದೆ.
ಇನ್ ಲ್ಯಾಂಡ್ ಲೆಟರ್ ನ ಒಂದು ಭಾಗದಲ್ಲಿ ಅಜ್ಜನ ಒಕ್ಕಣೆ, ಮತ್ತೊಂದು ಕಡೆಯಲ್ಲಿ ಅಜ್ಜಿಯ ಬರಹ. ಅಲ್ಲಿನ ಆಗುಹೋಗುಗಳ ಸ್ಥೂಲ ಪರಿಚಯವನ್ನು ಅಮ್ಮನ ಮುಂದೆ ತೆರೆದಿಡುತ್ತಿದ್ದ ಪರಿ ಯಾವತ್ತೂ ಹೊಸದೆ.
ಮದುವೆಯಾಗಿ ಹಳ್ಳಿ ಸೇರಿದ ಅಮ್ಮನಿಗೆ ಪೇಟೆಯ ದಿನನಿತ್ಯದ ಬದಲಾವಣೆಗಳತ್ತ ತಗ್ಗದ ಕುತೂಹಲ. ಅಮ್ಮನ ನೂರಾರು ಪ್ರಶ್ನೆ ಗಳಿಗೆ ಅಜ್ಜ, ಅಜ್ಜಿ ಯ ಉತ್ತರಗಳು . ಹೀಗೆ ಈ ಪತ್ರಗಳಲ್ಲೇ ಪ್ರಾಥಮಿಕ ಅಕ್ಷರಾಭ್ಯಾಸ ವನ್ನು ಅಮ್ಮ ನಮಗೆ ಮಾಡಿದಳು. ಪತ್ರದ ಕೊನೆಯಲ್ಲಿ ಮೊಮ್ಮಕ್ಕಳಿಗೆಂದೇ ವಿಶೇಷವಾಗಿ ಬರೆದ ಸಾಲುಗಳು ನಮ್ಮನ್ನೂ ಕಾಗದವನ್ನ ಇದಿರು ನೋಡುವಂತೆ ಮಾಡುತ್ತಿದ್ದವು.
ಹಲವು ದಶಕಗಳ ಹಿಂದೆ ಮುಖ್ಯ ಸಂಪರ್ಕ ಸೇತುವಾಗಿದ್ದುದು ಪತ್ರಗಳೇ. ದೂರವಾಣಿಗಳು ಅಲ್ಲೋಇಲ್ಲೋ ಎಂಬಂತಿದ್ದ ಕಾಲ. ಏನು ಹೇಳಬೇಕಿದ್ದರೂ ಪತ್ರಗಳೇ ಆಗ ಬೇಕಿತ್ತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಟೆಲಿಗ್ರಾಂ ಸೇವೆಯೇ ಗತಿ. ಕೆಲವೊಮ್ಮೆ ಟೆಲಿಗ್ರಾಂ ಬಂದಿದೆಯೆಂದರೆ ಹೆದರುವುದೇ ಹೆಚ್ಚು. ಏನೋ ಹೆಚ್ಚೂಕಮ್ಮಿಯಾಗಿರಬೇಕೆಂದೇ ಮನಸಿಗಾಗುತ್ತಿತ್ತು.
ಈಗ ಯಾರಾದರೂ ಹೊರ ದೇಶಗಳತ್ತ ತೆರಳಿದರೆ ಗಳಿಗೆ, ಗಳಿಗೆಗೆ ಅಪ್ಡೇಟ್ ಗಳು ನಮಗೆ ಸಿಗುತ್ತವೆ. ಲೈವ್ ಚಾಟ್ ಕೂಡ ಸಾಧ್ಯ. ಹಿಂದೆ ಊರಿನಿಂದ ಯಾರಾದರೂ ಹೆಚ್ಚಿನ ವಿದ್ಯಾಭ್ಯಾಸ ಕ್ಕೋ , ಮದುವೆಯಾಗಿ ಗಂಡನ ಜೊತೆಗೆ ವಿದೇಶಕ್ಕೆ ಹೋದರೆ ಸರಿಯಾಗಿ ತಲುಪಿದ ವಿಷಯ ಕೈ ಸೇರಲು ತಿಂಗಳುಗಳೇ ಕಳೆಯಬೇಕು. ದಿನನಿತ್ಯದ ವ್ಯವಹಾರದಲ್ಲಾದರೆ ಮನೆಯಿಂದ ಹೊರಟವ ವಾಪಾಸ್ ಮನೆಗೆ ಬಂದೇ ಬರುತ್ತಾನೆ ಎಂಬ ಆತ್ಮವಿಶ್ವಾಸ. ಯಾವುದಕ್ಕೂ ಪತ್ರ ವ್ಯವಹಾರವೊಂದೇ ಮಾರ್ಗ. ಈಗಲಾದರೆ ಮನೆಯಿಂದ ಹೊರಟು ಬಸ್ ಸ್ಟ್ಯಾಂಡ್ ಲ್ಲಿ ಬಸ್ ಸಿಕ್ಕಿದ ಕೂಡಲೇ ಮನೆಗೆ ವಿಷಯ ತಿಳಿಸದಿದ್ದರೆ ದೊಡ್ಡ ರಾದ್ಧಾಂತವೇ ನಡೆದು ಬಿಡುತ್ತದೆ. ಆಗಿನ ಕಾಲಕ್ಕೆ ಅದು ಚೆಂದ ಈಗಿನ ಕಾಲಕ್ಕೆ ಇದು ಅಗತ್ಯ.
ಶಾಲೆಗಳಲ್ಲಿ ನಾವು ಕೊನೆಯ ತರಗತಿಗಳಲ್ಲಿ ಕಲಿಯುತ್ತಿದ್ದಾಗ ಬರೆಯುತ್ತಿದ್ದ ಅಟೋಗ್ರಾಫ್ ಗಳು, ಅದರಲ್ಲಿ ಬರೆಯುತ್ತಿದ್ದ ವಿಳಾಸ ಜೊತೆಗೆ ತಪ್ಪದೇ ಕಾಗದ ಬರೆಯಲು ಮರೆಯಬೇಡ ಎಂಬ ಉಕ್ತಿ ಇನ್ನೂ ಹಸುರಾಗಿದೆ.
ಬೇಸಿಗೆ ರಜೆಗಳಲ್ಲಿ ಗೆಳತಿಯರಿಗೆ ಪತ್ರ ಬರೆದು ಉತ್ತರಿಸದೆ ಇದ್ದಾಗ ಕೋಪ ಮಾಡಿಕೊಂಡದ್ದೂ ಇದೆ. ಹುಟ್ಟಿದ ಹಬ್ಬಗಳಿಗೆ ಶಾಲೆಯ ವಿಳಾಸಕ್ಕೆ ಕಾರ್ಡ್ ಕಳಿಸಿ ಎಂದು ದೊಡ್ಡಮ್ಮನಿಗೆ ದುಂಬಾಲು ಬೀಳುತ್ತಿದ್ದು ನಿನ್ನೆ ಮೊನ್ನೆ ನಡೆದಂತಿದೆ.
ಶಾಲಾ ದಿನಗಳಲ್ಲಿ ಶಾಲೆಯ ಹೆಡ್ ಮಾಸ್ಟರ್ ಅಥವಾ ಕ್ಲಾಸ್ ಟೀಚರ್ ಓದಿದ ಮೇಲೆ ಪತ್ರ ಗಳು ನಮ್ಮ ಕೈ ಸೇರುತ್ತಿದ್ದು ಎಲ್ಲರಿಗೂ ಗೊತ್ತಿದ್ದ ಸತ್ಯ. ಅದೇನು ದೊಡ್ಡ ವಿಷಯ ಅನ್ನಿಸುತ್ತಿರಲಿಲ್ಲ. ಇನ್ನೂ ಗೆಳತಿಯರೊಂದಿಗೆ ಹಂಚಿಕೊಳ್ಳುತ್ತಿದ್ದ ವಿಷಯಗಳು ಓಪನ್ ಸೀಕ್ರೆಟ್ ! ನೋಡಿ ಮಾತಾಡಿಯೇ ಗೊತ್ತಿಲ್ಲದ ಪೆನ್ನು ಫ್ರೆಂಡ್ ಗಳ ಲೋಕವೇ ಬೇರೆ ! ಬರೆಯುತ್ತಿದ್ದ ಪತ್ರಗಳಿಗೆ ಬರುವ ಉತ್ತರದ ನಿರೀಕ್ಷೆಯಲ್ಲೂ ಒಂದು ಸುಖವಿತ್ತು. ಕಾಯುವಿಕೆಯ ಕಷ್ಟ ಅರ್ಥವಾಗುತ್ತಿತ್ತು.
ಇಂದು ಇಲ್ಲವೇ ಇಲ್ಲವೆನ್ನುವ ಷ್ಟರ ಮಟ್ಟಿಗೆ ಕಣ್ಮರೆಯಾಗುತ್ತಿರುವ ಪತ್ರಗಳು, ವ್ಯವಹಾರಕ್ಕಷ್ಟೇ ಸೀಮಿತವಾಗುತ್ತಿರುವುದು ಕಟು ಸತ್ಯ.
ಪತ್ರದ ವಿಷಯ ಯಾಕೆ ನೆನಪಾಯಿತೆಂದರೆ ಮಗ ಶಾಲೆಯಿಂದ ಬಂದ ಕೂಡಲೆ,
ಅಮ್ಮ ನಮ್ಮ ಸರ್ ಒಂದು ಪ್ರಾಜೆಕ್ಟ್ ವರ್ಕ್ ಕೊಟ್ಟಿದ್ದಾರೆ, ಅವರ ವಿಳಾಸಕ್ಕೊಂದು ಕಾಗದ ಬರೆಯ ಬೇಕಂತೆ. ಕಾಗದ ಎಂದರೇನು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಹಳೆಯದೆಲ್ಲಾ ನೆನಪಿಸಿಕೊಂಡೆ…..!