ಸುಳ್ಯ: ಹರೇಕಳ ಹಾಜಬ್ಬ ತನ್ನ ಊರಿನಲ್ಲಿ ಸರ್ಕಾರಿ ಶಾಲೆಯನ್ನು ಕಟ್ಟಿ ಬೆಳೆಸಿದ ರೀತಿ ನಿಜಕ್ಕೂ ಅದ್ಭುತ. ಅವರ ಸಾಧನೆ ಅನನ್ಯವಾದುದು ಎಂದು ಪದ್ಮಶ್ರೀ ಪುರಸ್ಕೃತ ಇಂಜಿನಿಯರ್ ಗಿರೀಶ್ ಭಾರದ್ವಾಜ್ ಹೇಳಿದ್ದಾರೆ.
ಸುಳ್ಯದ ಎಂ.ಬಿ.ಫೌಂಡೇಶನ್ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಮತ್ತು ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೆಪುಣಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಸಮಾಜದ ಮೇಲೆ ನಿಷ್ಕಲ್ಮಶ ಪ್ರೀತಿ ಇರುವ ಕಾರಣ ಕೆಲವರು ಸಮಾಜಕ್ಕಾಗಿ ಸೇವೆ ಮಾಡುತ್ತಾರೆ. ಅಂತವರು ಗುರುತಿಸಲ್ಪಾಟ್ಟಾಗ ಸಮಾಜ, ದೇಶ ಅವರನ್ನು ಗೌರವಿಸುತ್ತದೆ ಎಂದು ಗಿರೀಶ್ ಭಾರದ್ವಾಜ್ ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಹೃದಯ ಶ್ರೀಮಂತಿಕೆಯಿಂದ ದೊಡ್ಡ ಸಾಧನೆ ಮಾಡಿದ ಹಾಜಬ್ಬರು ಸಮಾಜದ ಎಲ್ಲರಿಗೂ ಪ್ರೇರಣೆ ಎಂದು ಹೇಳಿದರು. ಹರೇಕಳ ಹಾಜಬ್ಬರನ್ನು ಅಭಿನಂದಿಸಿ ಮಾತನಾಡಿದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೆಪುಣಿ ಹಾಜಬ್ಬ ಅವರು ತಮ್ಮ ಗುಣ, ತ್ಯಾಗ ಮತ್ತು ಸರಳತೆಯಿಂದ ಪದ್ಮಶ್ರೀ ಪ್ರಶಸ್ತಿ ಪಡೆಯುವವರೆಗೆ ಬೆಳೆದಿದ್ದಾರೆ. ತಮ್ಮ ಎಲ್ಲಾ ದುಃಖವನ್ನೂ ಮರೆತು ಸರ್ಕಾರಿ ಶಾಲೆಯನ್ನು ಕಟ್ಟಿ ಬೆಳೆಸಿದ್ದಾರೆ. ಶಾಲೆಯನ್ನೂ, ಶಾಲೆಯ ಮಕ್ಕಳನ್ನೂ ಪ್ರೀತಿಸಿದರು. ಪ್ರಶಸ್ತಿಯಿಂದ ಬಂದ ಎಲ್ಲಾ ಹಣವನ್ನೂ ಶಾಲೆಗಾಗಿ ವ್ಯಯಿಸಿದ್ದಾರೆ ಎಂದು ಅವರು ಹೇಳಿದರು.
ಎಂ.ಬಿ.ಫೌಂಡೇಶನ್‍ನ ಅಧ್ಯಕ್ಷ ಎಂ.ಬಿ.ಸದಾಶಿವ ಅಧ್ಯಕ್ಷತೆ ವಹಿಸಿದ್ದರು. ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಸೈಂಟ್ ಬ್ರಿಜಿದ್ ಚರ್ಚ್‍ನ ಧರ್ಮಗುರು ವಿಕ್ಟರ್ ಡಿಸೋಜ, ಗಾಂಧಿನಗರ ಮನವ್ವಿರುಲ್ ಮದರಸದ ಅಧ್ಯಾಪಕ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮಾತನಾಡಿದರು. ಹಾಜಿ ಇಸಾಕ್ ಸಾಹೇಬ್, ಕೆ.ಎಂ.ಮುಸ್ತಫಾ, ದುರ್ಗಾಕುಮಾರ್ ನಾಯರ್‍ಕೆರೆ, ಹರಿಣಿ ಸದಾಶಿವ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು ಸ್ವಾಗತಿಸಿ, ಸನ್ಮಾನ ಸಮಿತಿಯ ಸಹ ಸಂಚಾಲಕ ಹಸೈನಾರ್ ಜಯನಗರ ವಂದಿಸಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.